ಜಾತ್ರಾ ಗದ್ದೆಯಲ್ಲಿ ಅಪ್ರಾಪ್ತ ಬಾಲಕನಿಂದ ಡೊಂಬರಾಟ ಮಾಡಿ ಹಣ ಸಂಗ್ರಹ – ಮಕ್ಕಳ ಹಕ್ಕುಗಳ ಕಾರ್ಯಕರ್ತರಿಂದ ಬಾಲಕನ ರಕ್ಷಣೆ

0

ಪುತ್ತೂರು: ಪುತ್ತೂರು ಜಾತ್ರಾ ಗದ್ದೆಯಲ್ಲಿ ಅಪ್ರಾಪ್ತನಿಂದ ಡೊಂಬರಾಟ ಮಾಡಿಸಿಕೊಂಡು ಹಣ ಸಂಗ್ರಹ ಮಾಡುತ್ತಿರುವುದನ್ನು ಗಮನಿಸಿದ ಮಕ್ಕಳ ಹಕ್ಕುಗಳ ಕಾರ್ಯಕರ್ತರಿಂದ ಬಾಲಕನನ್ನು ರಕ್ಷಣೆ ಮಾಡಿದ ಘಟನೆ ಜ.28ರಂದು ನಡೆದಿದೆ.
ಜಾತ್ರಾ ಗದ್ದೆಯಲ್ಲಿ ಪೋಷಕರು 10 ವರುಷದ ಬಾಲಕನನ್ನು ಸರ್ಕಸ್ ಮಾಡಿಸುತ್ತಾ ಹಗ್ಗದ ಮೇಲೆ ನಡೆಸಿ ಅದನ್ನು ನೋಡಿದ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತಿದ್ದರು. ಇದನ್ನು ಗಮನಿಸಿದ ಮಕ್ಕಳ ಹಕ್ಕುಗಳ ಕಾರ್ಯಕರ್ತರು 112 ದೂರವಾಣಿಗೆ ಕರೆಮಾಡಿ ಪೋಲೀಸರ ಸಹಕಾರದಿಂದ ಬಾಲಕನನ್ನು ರಕ್ಷಿಸಿದರು. ಉತ್ತರಭಾರತದಿಂದ ವಲಸೆ ಬಂದಿರುವ ಕುಟುಂಬಕ್ಕೆ ಸೇರಿರುವ ಈ ಬಾಲಕನೊಂದಿಗೆ ಇನ್ನೂ ನಾಲ್ಕು ಜನ ಚಿಕ್ಕ ಮಕ್ಕಳಿದ್ದಾರೆ. ಬಾಲಕನಿಗೆ ಬಾಲಕಿಯರ ವಸ್ತ್ರ ತೊಡಿಸಿ ಬಿಸಿಲಿನಲ್ಲಿ ಡಾನ್ಸ್, ಹಗ್ಗದ ಮೇಲೆ ಡಾನ್ಸ್ ಮಾಡಿಸಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುವುದು ಪೋಷಕರ ಕೆಲಸವಾಗಿದೆ.

ಮಕ್ಕಳನ್ನು ದುಡಿಸುವುದು ನಿಷೇಧ:
ವಿಶ್ವ ಸಂಸ್ಥೆಯು 1989ರಲ್ಲಿ ಜಗತ್ತಿನ ಮುಂದಿರಿಸಿದ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಛೇದ 6ರ ಪ್ರಕಾರ ಈ ಬಾಲಕನ ಜೀವಿಸುವ ಹಕ್ಕು ಉಲ್ಲಂಘನೆಯಾಗಿದ್ದರೆ, ಪರಿಚ್ಛೇದ 19 ಮಕ್ಕಳ ದುರುಪಯೋಗ, ಪರಿಚ್ಛೇದ 32 ಬಾಲಕಾರ್ಮಿಕ ಪದ್ಧತಿ ಇಂದ ರಕ್ಷಣೆ ಹಾಗೂ ಶಿಕ್ಷಣದ ಹಕ್ಕು ಪರಿಚ್ಛೇದ 28 ಉಲ್ಲಂಘನೆಯಾಗಿದೆ. ಇದಲ್ಲದೆ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯ ವಿಭಾಗ ಹತ್ತು ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸ ಬೇಕೆಂದು ತಿಳಿಸಿದೆ. ಈ ಪ್ರಕರಣದಲ್ಲಿ ನಮ್ಮ ಸಂವಿಧಾನದ ಪರಿಛೇದ 21ಎ ಶಿಕ್ಷಣದ ಹಕ್ಕು ಹಾಗೂ ಪರಿಚ್ಛೇದ 24 ಬಾಲಕಾರ್ಮಿಕ ಪದ್ದತಿಯಿಂದ ರಕ್ಷಣೆಗಳು ಉಲ್ಲಂಘನೆಯಾಗಿದೆ. ಮಕ್ಕಳ ರಕ್ಷಣೆಗಾಗಿಯೇ ಇರುವ ಮಕ್ಕಳ ನ್ಯಾಯ (ರಕ್ಷಣೆ-ಪೋಷಣೆ) ಕಾಯ್ದೆ 2015 ಸಹ ಪುಟ್ಟ ಮಕ್ಕಳನ್ನು ದುಡಿಸುವುದನ್ನು ನಿಷೇಧಿಸಿದೆ. ದ.ಕ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷ ನಯನ ರೈ ಮತ್ತು ಚೈಲ್ಡ್ ರೈಟ್ ಸಂಸ್ಥೆ ಬೆಂಗಳೂರು ಇದರ ಪುತ್ತೂರು ತಾಲೂಕು ಸಂಯೋಜಕಿ ಕಸ್ತೂರಿ, ತುರ್ತು ಸೇವಾ ಪೊಲೀಸ್ 112 ಮತ್ತು ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಯು ಬಾಲಕನ ಪೋಷಕರನ್ನು ವಶಕ್ಕೆ ಪಡೆದು ಅವರ ಮತ್ತು ಬಾಲಕ ಮತ್ತು ಇತರ ಮೂರು ಮಕ್ಕಳ ವಾಸ ವಿಳಾಸ ಮತ್ತು ಕುಟುಂಬ ಸಂಬಂಧ ಬಗೆಗಿನ ದಾಖಲೆಗಳನ್ನು ಪಡೆದು ಸೂಕ್ತ ತಿಳುವಳಿಕೆ ನೀಡಿ ಇನ್ನು ಮುಂದೆ ಈ ರೀತಿಯ ಕಾರ್ಯಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಬಾರದೆಂದು ಎಚ್ಚರಿಕೆ ನೀಡಿ ಬಾಲಕನನ್ನು ರಕ್ಷಿಸಿರುತ್ತಾರೆ.

LEAVE A REPLY

Please enter your comment!
Please enter your name here