ಪುತ್ತೂರು :ಶ್ರೀ ಶಾರದಾ ಕಲಾಕೇಂದ್ರ ಟ್ರಸ್ಟ್‌ನ 30ನೇ ವಾರ್ಷಿಕೋತ್ಸವ `ತ್ರಿಂಶತಿ ಸಂಭ್ರಮ’ ಕಾರ್ಯಕ್ರಮವು ಜ.28ರಂದು ಗಾಯನ, ನರ್ತನ, ವಾದ್ಯ ವಾದನಗಳ ಪ್ರಸ್ತುತಿಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಹರೀಶ್ ಕಿಣಿಯವರು ದೀಪ ಬೆಳಗಿಸಿ ಚಾಲನೆ ನೀಡಿದರು. ನಂತರ ಸಂಗೀತ ಗುರು ವಿದ್ವಾನ್ ಸುದರ್ಶನ್ ಭಟ್‌ರವರ ನಿರ್ದೇಶನದಲ್ಲಿ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಇಂಪಾದ ಗಾಯನ, ತದನಂತರ ಗುರು ಸುರೇಂದ್ರ ಆಚಾರ್ಯರವರ ಶಿಷ್ಯ ವೃಂದ ಸುಶ್ರಾವ್ಯ ಕೊಳಲು ವಾದನ ನಡೆಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಅಂತರ್ಜಲ ಸಂಶೋಧಕ, ವಾಹಿನಿ ಕಲಾ ಸಂಘದ ರಾಜ್ಯಾಧ್ಯಕ್ಷ ಮಧುರಕಾನನ ಗಣಪತಿ ಭಟ್ ಮಾತನಾಡಿ, ಸನಾತನ ಮೂಲದಿಂದ ಮೂಡಿ ವಿಕಸಿತಗೊಂಡ ಸಂಗೀತ ಭರತನಾಟ್ಯ, ಕಾವ್ಯ, ತಾಳವಾದ್ಯಾದಿ ಕಲೆಗಳು ಸುಸಂಸ್ಕೃತ ಸಮಾಜದ ಕಣ್ಣುಗಳಂತೆ. ಕಲಾ ಶಿಕ್ಷಕರು ಹೃದಯವಿದ್ದಂತೆ. ಸಮಾಜ ಹಾಗೂ ಸರಕಾರಕ್ಕೆ ಕಲಾವಿದರ ಹಾಗೂ ಕಲಾಶಿಕ್ಷಣ ಸಂಸ್ಥೆ ಗಳನ್ನು ರಕ್ಷಿಸಿ ಪೋಷಿಸುವ ಗುರುತರ ಹೊಣೆಗಾರಿಕೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದುಷಿ ನಯನ ವಿ. ರೈಯವರು ಮಾತನಾಡಿ, ಶಿಕ್ಷಣಾನಂತರದಲ್ಲಿ ಕಲಿಸಿದ ಗುರುಗಳ ನೆನಪು ಸದಾ ಇರಿಸಿಕೊಂಡು, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ನಿಮಿತ್ತ ತೆರಳಿದರೂ ಕಲಿತ ಕಲೆಗಳನ್ನು ಯಾವತ್ತೂ ಬೆಳೆಸಿ ಪೋಷಿಸುವತ್ತ ಆಸಕ್ತರಾಗಿರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು ಶಾರದಾ ಕಲಾಕೇಂದ್ರವು ಹತ್ತಾರು ಶಾಖೆಗಳಾಗಿ ಬೆಳೆದು ಶತಮಾನೋತ್ಸವವನ್ನು ಸಂಭ್ರಮಿಸಲೆಂದು ಶುಭ ಹಾರೈಸಿದರು.
ಶ್ರೀಶಾರದ ಕಲಾಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ವಿದ್ವಾನ್ ಸುದರ್ಶನ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ತಂದೆಯವರಾದ ದಿ.ಎಂ ಎಲ್ ಭಟ್‌ರವರಿಂದ ಪ್ರಾರಂಭಗೊಂಡ ಸಂಸ್ಥೆ ಅವರ ಆಶಯದಂತೆ ಎಲ್ಲಾ ಶಾಸ್ತ್ರೀಯ ಪ್ರಕಾರಗಳನ್ನು ಒಂದೇ ಸೂರಿನಡಿಯಲ್ಲಿ ವಿದ್ಯಾರ್ಜನೆ ಮಾಡುವ ಸಂಸ್ಥೆಯಾಗಿ ಅತ್ಯಂತ ಉನ್ನತ ಮಟ್ಟಕ್ಕೆ ಏರಿದೆ ಎಂದರು.
ಗುರುವಂದನೆ:
ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಗುರು ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್, ಅವರ ತಾಯಿ ಮಾಲಿನಿ ಭಟ್ ಹಾಗೂ ದಿವ್ಯಾಶ್ರೀ ಸುದರ್ಶನ್‌ರವರನ್ನು ಪಾದಪೂಜೆಯೊಂದಿಗೆ ಫಲಪುಷ್ಪ ಕಾಣಿಕೆಗಳೊಂದಿಗೆ ಗುರುವಂದನೆ ಸಮರ್ಪಿಸಿದರು.
ಶ್ರೀ ಶಾರದಾ ಕಲಾಶ್ರೀ ಬಿರುದು ಪ್ರದಾನ:
ಕಲಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ವತ್ ಪದವಿ ಪಡೆದ ಸಂಸ್ಥೆಯ ವಿದ್ಯಾರ್ಥಿಗಳಾದ ಚೈತ್ರಾ ಪ್ರಜ್ವಲ್ ಆರ್ ಶೆಟ್ಟಿ, ಡಿಂಪಲ್ ಅನಂತಾಡಿ, ಅನುಶ್ರೀ ಸಾಮೆತ್ತಡ್ಕ, ಜೀವಿತ ಅನಂತಾಡಿ, ವೈಷ್ಣವೀ ನಾಯಕ್, ಪೂರ್ಣಿಮಾ, ಅಕ್ಷತಾ ಶ್ರೀವತ್ಸರವರಿಗೆ ಶ್ರೀ ಶಾರದಾ ಕಲಾಶ್ರೀ ಬಿರುದು ನೀಡಿ ಗೌರವಿಸಲಾಯಿತು. ಜೂನಿಯರ್, ಸೀನಿಯರ್, ವಿದ್ವತ್ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ವಿತರಿಸಲಾಯಿತು.
ಮೃದಂಗ ಶಿಕ್ಷಕ ವಿದ್ವಾನ್ ಶ್ಯಾಮ ಭಟ್ ಸುಳ್ಯ, ಕೊಳಲು ಶಿಕ್ಷಕ ವಿದ್ವಾನ್ ಸುರೇಂದ್ರ ಆಚಾರ್ಯ ಸಹಿತ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪೋಷಕರಾದ ಶಾಂತಾ, ರಾಧಾಕೃಷ್ಣ ಬೋರ್ಕರ್ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಗೋಪಾಲಕೃಷ್ಣ ವೀರಮಂಗಲ, ದಿವ್ಯಾಶ್ರೀ ಸುದರ್ಶನ್, ವಿದುಷಿ ಸಂಧ್ಯಾಗಣೇಶ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪೂರ್ಣಿಮಾ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ನಡೆದ ಭರತನಾಟ್ಯ ಹಾಗೂ ಭಾವನರ್ತನಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ನಟುವಾಂಗ ಹಾಡುಗಾರಿಕೆಯಲ್ಲಿ ಸುದರ್ಶನ್ ಭಟ್, ಕೀಬೋರ್ಡ್‌ನಲ್ಲಿ ಬಿ.ಎಸ್ ಕಾರಂತ, ಕೊಳಲು ವಾದನದಲ್ಲಿ ಸುರೇಂದ್ರ ಆಚಾರ್ಯ ಹಾಗೂ ಮೃದಂಗದಲ್ಲಿ ವಿದ್ವಾನ್ ಶ್ಯಾಮ ಭಟ್ ಸಹಕರಿಸಿದರು, ಭರತನಾಟ್ಯ ನಿರೂಪಣೆಯನ್ನು ವಿದುಷಿ ಸಂಧ್ಯಾ ಗಣೇಶ್ ನಿರ್ವಹಿಸಿದರು.