ಅರಿಯಡ್ಕ:ಪಾಪೆಮಜಲು ಸರ್ಕಾರಿ ಪ್ರೌಢಶಾಲೆಯಲ್ಲಿ ಜ.30ರಂದು ನಡೆದ ಅರಿಯಡ್ಕ ಗ್ರಾಮ ಪಂಚಾಯತ್ ಮಕ್ಕಳ ಗ್ರಾಮ ಸಭೆಯಲ್ಲಿ ಶಾಲೆಯ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಅವರನ್ನು ಕಡೆಗಣಿಸಿಲ್ಲ.ಶಿಷ್ಟಾಚಾರ ಪ್ರಕಾರ ಗ್ರಾಮಸಭೆ ನಡೆದಿದ್ದು ಕಾರ್ಯಾಧ್ಯಕ್ಷರ ಇರುವಿಕೆಯನ್ನು ಗುರುತಿಸಿ, ಪಂಚಾಯತ್ ಕಾರ್ಯದರ್ಶಿಯವರು ಸ್ವಾಗತಿಸಿ, ಗೌರವಿಸಿದ್ದಾರೆ ಎಂದು ಅರಿಯಡ್ಕ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಸ್ಪಷ್ಟನೆ ನೀಡಿದ್ದಾರೆ.
ನಾನು ಅರಿಯಡ್ಕ ಗ್ರಾಮ ಪಂಚಾಯತ್ ಒಂದನೇ ವಾರ್ಡಿನ ಸದಸ್ಯ ಹಾಗೂ ಪಂಚಾಯತ್ ಅಧ್ಯಕ್ಷ,ಸರಕಾರಿ ಪ್ರೌಢಶಾಲೆ ಪಾಪೆಮಜಲು ಗ್ರಾಮ ಪಂಚಾಯತ್ ಒಂದನೇ ವಾರ್ಡಿನಲ್ಲಿದೆ.ಕಳೆದ ಒಂದು ವರ್ಷದಿಂದೀಚೆಗೆ ನನಗೆ ಮತ್ತು ನನ್ನ ವಾರ್ಡಿನ ಸದಸ್ಯರುಗಳಿಗೆ ಎಸ್.ಡಿ.ಎಂ.ಸಿ ಸಭೆಗಳಿಗೆ ಹಾಗೂ ರಾಷ್ಟ್ರೀಯ ಹಬ್ಬಗಳ ಸಂದರ್ಭಗಳಲ್ಲಿ ಕೂಡ ಆಮಂತ್ರಣ ನೀಡದೆ,ಸಂಸ್ಥೆ ಶಿಷ್ಟಾಚಾರವನ್ನು ಉಲ್ಲಂಘನೆ ಮಾಡಿದೆ.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಂಚಾಯತ್ಗೆ ಯಾವುದೇ ಮಾಹಿತಿ ನೀಡದೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಮಕ್ಷಮದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ.ಆದರೆ ಅದೇ ವಾರ್ಡಿನ ಪಂಚಾಯತ್ ಉಪಾಧ್ಯಕ್ಷರಿಗೆ,ಸದಸ್ಯರಿಗೆ ಆಹ್ವಾನ ಇರುವುದಿಲ್ಲ.ಕಳೆದ 25 ವರ್ಷಗಳಿಂದ ಇಂತಹ ಸಮಸ್ಯೆಗಳು ಬಂದಿರುವುದಿಲ್ಲ.ಅಭಿವೃದ್ದಿ ಕಾರ್ಯಗಳಿಗೆ ಸದಾ ಸ್ಪಂದಿಸುತ್ತಿರುವ ಗ್ರಾಮ ಪಂಚಾಯತ್ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ,ಮಾಡುವುದೂ ಇಲ್ಲ.ಪಂಚಾಯತ್ ಬಗ್ಗೆ ಮಾಡಿರುವ ಆರೋಪದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಡಿ.ಡಿ.ಪಿ.ಐ.ಯವರಿಗೆ ದೂರನ್ನು ನೀಡಿದ್ದೇನೆ ಎಂದು ಅಧ್ಯಕ್ಷರು ಹೇಳಿದ್ದಾರೆ.