ಶ್ರಮವಿದ್ದಾಗ ಯೋಗ- ಭಾಗ್ಯ ಕೂಡಿ ಬರಲು ಸಾಧ್ಯ: ಅಶೋಕ್ ಕುಮಾರ್ ರೈ

0

ಉಪ್ಪಿನಂಗಡಿ: 3 ಕೋಟಿ 60 ಸಾವಿರದ ಕಾಮಗಾರಿಗೆ ಶಂಕುಸ್ಥಾಪನೆ

ಉಪ್ಪಿನಂಗಡಿ: ಯೋಗ- ಭಾಗ್ಯ ಕೂಡಿ ಬಂದರೆ ಮನುಷ್ಯ ಎತ್ತರಕ್ಕೇರಲು ಸಾಧ್ಯ. ಆದರೆ ಇದು ಕೂಡಿ ಬರಬೇಕಾದರೆ ಶ್ರಮ ಅತ್ಯಗತ್ಯ. ಆದ್ದರಿಂದ ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಉತ್ತೇಜನ ನೀಡಿ. ಶೈಕ್ಷಣಿಕವಾಗಿ ಉತ್ತಮ ಸಾಧನೆಗೈದಾಗ ಮಾತ್ರ ನಿಮಗೆ ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.


ಇಲ್ಲಿನ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ಯೋಜನೆಯಡಿ ಮಂಜೂರಾದ ಮೂರು ಕೋಟಿಯ ಅರುವತ್ತು ಸಾವಿರ ರೂ. ಅನುದಾನದಲ್ಲಿ ನಿರ್ಮಿಸಲಾಗುವ 12 ತರಗತಿ ಕೊಠಡಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.


ಈ ಅನುದಾನದಲ್ಲಿ 12 ಕೊಠಡಿಗಳ ನಿರ್ಮಾಣವಾಗಲಿದ್ದು, ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕೊಠಡಿಗಳನ್ನು ಹೊಂದಿರುವ ಸರಕಾರಿ ಕಾಲೇಜು ಎಂಬ ಹೆಗ್ಗಳಿಕೆಗೆ ಉಪ್ಪಿನಂಗಡಿಯ ಪದವಿ ಪೂರ್ವ ಕಾಲೇಜು ಪಾತ್ರವಾಗಲಿದೆ. ಅತೀ ಹೆಚ್ಚು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜು ಅಭಿವೃದ್ಧಿ ಹೊಂದುತ್ತಿರುವಾಗ ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ತಮವಾಗಿ ತೊಡಗಿಸಿಕೊಂಡು ಉತ್ತಮ ಭವಿಷ್ಯವನ್ನು ರೂಢಿಸಿಕೊಳ್ಳಬೇಕು. ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ನಿಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ಗೂಗಲ್‌ನಂತಹ ಅಂತರ್ಜಾಲ ತಾಣಗಳನ್ನು ಇನ್ಯಾವುದಕ್ಕೋ ಬಳಸುವುದಕ್ಕಿಂತ ಮೊದಲು ನಿಮ್ಮ ಸಾಮಾನ್ಯ ಜ್ಞಾನಗಳನ್ನು ಹೆಚ್ಚಿಸಿಕೊಳ್ಳಲು ಬಳಕೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರಲ್ಲದೆ, ಪ್ರತಿ ಎರಡು ಗ್ರಾಮಕ್ಕೆ ಒಂದರಂತೆ ಕೆಪಿಎಸ್ ಮಾದರಿ ಶಾಲೆಗಳನ್ನು ತೆರೆಯಲು ಸರಕಾರ ಚಿಂತನೆ ನಡೆಸಿದ್ದು, ಅದಕ್ಕಾಗಿ 3,500 ಕೋ. ರೂ.ವನ್ನು ಮೀಸಲಿಟ್ಟಿದೆ ಎಂದರು.


ವಿಶೇಷ ಅಹ್ವಾನಿತರಾದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಹರೀಶ್ ಉಪಾಧ್ಯಾಯ ಮಾತನಾಡಿ, ಈ ದಿನ ಒಳ್ಳೆಯ ಕೆಲಸಕ್ಕೆ ಪ್ರೇರಣೆ ನೀಡಿದಂತಾಗಿದೆ. ಇನ್ನಷ್ಟು ಈ ಕಾಲೇಜು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ರಾಜ್ಯ ದಾರಿಮಿ ಉಲೇಮಾ ಒಕ್ಕೂಟದ ಜನಾಬ್ ಎಸ್.ಬಿ. ದಾರಿಮಿ ಮಾತನಾಡಿ, ಯಾವುದೇ ಒಂದು ಕಾರ್ಯ ಮಾಡಬೇಕಾದರೆ ವ್ಯಕ್ತಿಗೆ ಇಚ್ಛಾಶಕ್ತಿ ಇರಬೇಕು. ಆಗ ಮಾತ್ರ ಉತ್ತಮ ಅಭಿವೃದ್ಧಿ ಕೆಲಸಗಳು ಸಾಧ್ಯ ಎಂದರು.


ಉಪ್ಪಿನಂಗಡಿ ದೀನರ ಕನ್ಯಾ ಮಾತೆ ದೇವಾಲಯದ ಧರ್ಮಗುರು ವಂ.ಫಾ. ಅಬೆಲ್ ಲೋಬೋ ಮಾತನಾಡಿ, ಸರಕಾರದಿಂದ ಅನುದಾನದಿಂದ ಇಲ್ಲಿ ಕಟ್ಟಡ ನಿರ್ಮಾಣ ಆಗುತ್ತಿರುವುದು ನಮ್ಮ ಸೌಭಾಗ್ಯ. ಅಂತೆಯೇ ಪರರಿಂದ ನೀವು ಏನನ್ನು ಬಯಸುತ್ತೀರಿ ಅದನ್ನು ಪರರಿಗೂ ಮಾಡಿ. ಆಗ ಆ ದೇವರು ನಿಮ್ಮನ್ನು ಆಶೀರ್ವಾದಿಸುತ್ತಾನೆ ಎಂದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ, ಹಾಗೂ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಮಾತನಾಡಿ ಶುಭ ಹಾರೈಸಿದರು.


ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಅಝೀಝ್ ಬಸ್ತಿಕಾರ್ ಮಾತನಾಡಿ, ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಕ್ರೀಡೆಯಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದೆ. ಪ್ರತಿ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಇಲ್ಲಿ ಹೆಚ್ಚುತ್ತಿದ್ದು, ಇಲ್ಲಿ ಕೊಠಡಿಗಳ ಅಗತ್ಯತೆ ಸೇರಿದಂತೆ ಕೆಲವು ಮೂಲಭೂತ ಸೌಕರ್ಯಗಳು ಅಗತ್ಯವಿರುವ ಬಗ್ಗೆ ಕಾಲೇಜಿನ ಅಭಿವೃದ್ಧಿ ಸಮಿತಿಯು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರಲ್ಲಿ ಬೇಡಿಕೆ ಮುಂದಿಟ್ಟಾಗ ಶಾಸಕರು ಅದಕ್ಕೆ ತಕ್ಷಣ ಸ್ಪಂದಿಸಿ ವಿವೇಕ ಯೋಜನೆಯಡಿ ಸುಮಾರು 12 ಕೊಠಡಿಗಳ ನಿರ್ಮಾಣಕ್ಕೆ 3 ಕೋಟಿಯ 60 ಸಾವಿರ ರೂ. ಅನುದಾನವನ್ನು ನೀಡಿದ್ದಾರೆ. ಅನುದಾನದ ಕೊರತೆಯಿಂದ ಅಪೂರ್ಣವಾಗಿ ಉಳಿದಿದ್ದ ಕಾಲೇಜಿನ ಎರಡು ಕೊಠಡಿಗಳ ಛಾವಣಿಗೆ 10 ಲಕ್ಷ ರೂ. ಹೆಚ್ಚುವರಿ ಅನುದಾನ ನೀಡಿದ್ದಾರಲ್ಲದೆ, ಶಾಲೆಯ ಆವರಣಕ್ಕೆ ಇಂಟರ್‌ಲಾಕ್ ಅಳವಡಿಸಲು 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.


ಪಿಡಬ್ಲೂಡಿ ಕ್ಲಾಸ್ 1 ಗುತ್ತಿಗೆದಾರ ಅಬ್ದುಲ್ ರಝಾಕ್ ಕಂಪ ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ, ಉಪ್ಪಿನಂಗಡಿ ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷ ಡಾ. ರಾಜಾರಾಂ ಕೆ.ಬಿ., ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಬ್ದುಲ್ ರಹಿಮಾನ್ ಮಠ, ಅನಿ ಮಿನೇಜಸ್, ನಝೀರ್ ಮಠ, ವೆಂಕಪ್ಪ ಪೂಜಾರಿ, ಆದಂ ಕೊಪ್ಪಳ, ಇಬ್ರಾಹೀಂ ಯು.ಕೆ., ಜಾನ್ ಕೆನ್ಯೂಟ್ ಮಸ್ಕರೇನಸ್, ನಾಗೇಶ್ ಪ್ರಭು, ಮೋನಪ್ಪ ಪೂಜಾರಿ ಡೆಂಬಳೆ, ಅರಫಾ ಶರೀಕ್, ಹರೀಶ್ ಬೆದ್ರೋಡಿ, ರಹಿನಾಝ್, ಸಣ್ಣಣ್ಣ ಸಂಜೀವ ಮಡಿವಾಳ, ಪೌಢಶಾಲಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಶೋಭಾ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ತೌಸೀಫ್ ಯು.ಟಿ., ಅಬ್ದುರ್ರಝಾಕ್, ಪ್ರಮುಖರಾದ ಕೃಷ್ಣರಾವ್ ಆರ್ತಿಲ, ಅಶ್ರಫ್ ಬಸ್ತಿಕಾರ್, ಝಕಾರಿಯಾ ಕೊಡಿಪ್ಪಾಡಿ, ಯೊಗೀಶ್ ಸಾಮಾನಿ ಸಂಪಿಗೆದಡಿ ಮತ್ತಿತರರು ಉಪಸ್ಥಿತರಿದ್ದರು.


ಮೂರು ಧರ್ಮಗಳ ಗುರುಗಳಿಂದ ಸರ್ವ ಧರ್ಮ ಪ್ರಾರ್ಥನೆಯೊಂದಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು. ಅದಕ್ಕೂ ಮೊದಲು ಗಾಂಧಿ ನಮನ ಸಲ್ಲಿಸಲಾಯಿತು. ಕಾಲೇಜಿನ ಪ್ರಾಚಾರ್ಯರರಾದ ಸುಧೀರ್ ಕುಮಾರ್ ಎಂ. ಸ್ವಾಗತಿಸಿದರು. ಉಪನ್ಯಾಸಕ ರಮೇಶ್ ವಂದಿಸಿದರು. ಹಿರಿಯ ಉಪನ್ಯಾಸಕ ಇಬ್ರಾಹೀಂ ಎಂ. ಹಾಗೂ ಸಿಡಿಸಿ ಸದಸ್ಯ ಅಬ್ದುರ್ರಹ್ಮಾನ್ ಯುನಿಕ್ ಕಾರ್ಯಕ್ರಮ ನಿರೂಪಿಸಿದರು.

ನನ್ನ ಅಪೇಕ್ಷೆ ಗುಣಮಟ್ಟದ ಕಾಮಗಾರಿ: ಅಶೋಕ್ ರೈ
ನಾನು ಲಂಚ, ಭ್ರಷ್ಟಾಚಾರದ ವಿರೋಧಿ. ಕಾಮಗಾರಿ ಗುತ್ತಿಗೆದಾರರಿಂದ ಒಂದು ಪೈಸೆಯನ್ನು ನಾನು ಬಯಸೋದಿಲ್ಲ. ನಾನು ಅಪೇಕ್ಷೆ ಪಡೋದು ಈ ಕಾಮಗಾರಿಯು ಗುಣಮಟ್ಟದಿಂದ ನಡೆಯಬೇಕು ಎಂಬುದಷ್ಟೇ. ಈ ಬಗ್ಗೆ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರು, ಸದಸ್ಯರು ಗಮನ ನೀಡಬೇಕು. ಕಾಮಗಾರಿಯನ್ನು ಪರಿಶೀಲಿಸುತ್ತಿರಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಖಾತ್ರಿಯಾದ ಬಳಿಕವಷ್ಟೇ ಗುತ್ತಿಗೆದಾರರಿಗೆ ಎನ್‌ಒಸಿ ನೀಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

LEAVE A REPLY

Please enter your comment!
Please enter your name here