ಉಪ್ಪಿನಂಗಡಿ: ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ನಿರ್ಮಿಸಲಾದ ಅಣೆಕಟ್ಟಿನಿಂದಾಗಿ ನದಿಯಲ್ಲಿ ಹಿನ್ನೀರು ಸಂಗ್ರಹವಾಗಿರುವ ಕಾರಣದಿಂದ ಈ ಬಾರಿಯ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಜಾತ್ರೋತ್ಸವಗಳು ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ನಡೆಸಬೇಕಾಗುತ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ದೇವಾಲಯದಲ್ಲಿ ಮುಂಬರುವ ಮಖೆ ಜಾತ್ರೆಯ ಹಿನ್ನೆಲೆಯಲ್ಲಿ ಜ.30ರಂದು ದೇವಾಲಯದ ನೇತ್ರಾವತಿ ಸಮುದಾಯ ಭವನದಲ್ಲಿ ಕರೆಯಲಾದ ಇಲಾಖಾಧಿಕಾರಿಗಳ, ಭಕ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀರಿನಿಂದಾಗಿ ನೇತ್ರಾವತಿ ನದಿ ಗರ್ಭದಲ್ಲಿನ ಉದ್ಭವ ಲಿಂಗಕ್ಕೆ ಪೂಜೆ ಸಲ್ಲಿಸಲು ಅಸಾಧ್ಯವಾಗಲಿದ್ದು, ಉಳಿದಂತೆ ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಗೆ ಅಡಚಣೆಯಾಗದು. ನದಿಯ ಒಡಲನ್ನಾಶ್ರಮಿಸಿ ನಡೆಸಲಾಗುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಾತ್ರಾ ಸಂತೆಗಳಿಗೆ ಅಡಚಣೆಯುಂಟಾಗಲಿದ್ದು, ಪರ್ಯಾಯ ಸ್ಥಳದ ಬಳಕೆ ಅನಿವಾರ್ಯವಾಗಲಿದೆ. ತಾನು ಈಗಾಗಲೇ ಸರಕಾರಕ್ಕೆ ಕಳುಹಿಸಿರುವ 370 ಕೋಟಿ ರೂ. ವೆಚ್ಚದ ಪ್ರಸ್ತಾವನೆಯು ಅನುಷ್ಠಾನಕ್ಕೆ ಬಂದರೆ ಉದ್ಭವ ಲಿಂಗಕ್ಕೆ ಸರ್ವ ಋತು ಪೂಜೆ ಸಲ್ಲಿಸುವ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು ಮಾತ್ರವಲ್ಲದೆ ಉಪ್ಪಿನಂಗಡಿ ಕ್ಷೇತ್ರವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸಲಾಗುವುದು ಎಂದು ತಿಳಿಸಿದರು.
ದೇವಾಲಯದ ಮುಂಭಾಗದ ಖಾಸಗಿ ಒಡೆತನದ ಭೂಮಿಯನ್ನು ಖರೀದಿಸುವ ಸಂಬಂಧ ಈ ಹಿಂದೆ ಸರಕಾರಕ್ಕೆ ಕಳುಹಿಸಲಾದ ಪ್ರಸ್ತಾವನೆಯು ಲೋಪಗ್ರಸ್ತವಾಗಿದ್ದು ಅದು ಹಿಂದಕ್ಕೆ ಬಂದಿದೆ. ಅದನ್ನು ಸರಿಮಾಡಿ ಪೂರಕ ದಾಖಲೆಗಳೊಂದಿಗೆ ಹಿಂದಿನ ಸಮಿತಿ ನನ್ನ ಬಳಿ ನೀಡಿದ್ದು, ಸಮರ್ಪಕ ಪ್ರಸ್ತಾವನೆಯನ್ನು ಕಳುಹಿಸುವ ಕಾರ್ಯ ನಡೆಸಿದ್ದೇನೆ. ಮಖೆ ಜಾತ್ರೆಗೆ ಮೊದಲು ಈ ಜಾಗವನ್ನು ಖರೀದಿಸುವ ಚಿಂತನೆ ನಡೆದಿದೆ. ಈ ಬಾರಿ ಎಲ್ಲಾ ಕಾರ್ಯಕ್ರಮಗಳಿಗೆ ದೇವಾಲಯದ ಸುತ್ತಲಿನ ಜಾಗ ಮತ್ತು ಆ ಜಾಗವನ್ನೇ ಅವಲಂಬಿಸಬೇಕಾಗುತ್ತದೆ ಎಂದರು.
ಜಾತ್ರಾ ಸಮಯದಲ್ಲಿ ಭಕ್ತಾದಿಗಳ ಸುರಕ್ಷತೆಗೆ ಗೃಹರಕ್ಷಕರನ್ನೊಳಗೊಂಡ ರಕ್ಷಣಾ ತಂಡ ಹಾಗೂ ಬೋಟ್‌ಗಳ ವ್ಯವಸ್ಥೆ ಮಾಡಲು ಸೂಚಿಸಿದ ಶಾಸಕರು, ಮುಂದಕ್ಕೆ ಖಾಯಂ ಬೋಟ್‌ನ ವ್ಯವಸ್ಥೆಯನ್ನು ಕೈಗೊಳ್ಳಲು ಚಿಂತನೆ ನಡೆಸುವುದಾಗಿ ತಿಳಿಸಿದರಲ್ಲದೆ, ವಾಹನಗಳ ಪಾರ್ಕಿಂಗ್‌ಗೆ ಬೇಕಾದ ಸ್ಥಳಗಳನ್ನು ಗುರುತಿಸಲು ಪೊಲೀಸ್ ಇಲಾಖೆ ಸೂಚಿಸಿದರು.
ವೇದಿಕೆಯಲ್ಲಿ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮಹೋಪಾತ್ರ, ತಹಶೀಲ್ದಾರ್ ಶಿವಶಂಕರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ದೇವಾಲಯದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜೇಶ್ ಕೆ.ವಿ., ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಗೃಹರಕ್ಷಕ ದಳದ ದಿನೇಶ್ ಬಿ. ಇಲಾಖಾತ್ಮಕ ಮಾಹಿತಿ ನೀಡಿದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವಾಧ್ಯಕ್ಷ ಕರುಣಾಕರ ಸುವರ್ಣ, ಮಾಜಿ ಸದಸ್ಯರಾದ ರಾಧಾಕೃಷ್ಣ ನಾಕ್, ಕೃಷ್ಣ ರಾವ್ ಅರ್ತಿಲ, ಡಾ. ರಾಜಾರಾಮ್ ಕೆ.ಬಿ., ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಸದಸ್ಯ ಧನಂಜಯ ನಟ್ಟಿಬೈಲ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಚಂದ್ರಹಾಸ ಶೆಟ್ಟಿ, ಸಚಿನ್, ಚಂದಪ್ಪ ಮೂಲ್ಯ, ರಾಮಚಂದ್ರ ಮಣಿಯಾಣಿ, ನಾಗೇಶ್ ಪ್ರಭು, ರೂಪೇಶ್ ರೈ ಅಲಿಮಾರ್, ಮುರಳೀಧರ ರೈ ಮಠಂತಬೆಟ್ಟು, ಜಯಂತ ಪೊರೋಳಿ, ಯು. ರಾಮ, ಸುಂದರ ಗೌಡ, ಹರಿರಾಮಚಂದ್ರ, ಕಂಗ್ವೆ ವಿಶ್ವನಾಥ ಶೆಟ್ಟಿ, ಸ್ವರ್ಣೇಶ್ ಕುಮಾರ್, ಕಿಶೋರ್ ಜೋಗಿ, ದೇವಿದಾಸ ರೈ ಬೆಳ್ಳಿಪ್ಪಾಡಿ, ಅನಿತಾ ಕೇಶವ ಗೌಡ, ನರಸಿಂಹ ಭಟ್, ಆದೇಶ್ ಶೆಟ್ಟಿ, ಪ್ರವೀಣ್ ಕಜೆಕ್ಕಾರ್, ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಮತ್ತಿತರರು ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು.
ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಕೃಷ್ಣ ಪ್ರಸಾದ್, ಪದ್ಮನಾಭ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ದಿವಾಕರ ಸಹಕರಿಸಿದರು.
`ಪ್ರಶ್ನಾ ಚಿಂತನೆ ನಡೆಸೋಣ’
ಅನಾದಿ ಕಾಲದಿಂದಲೂ ನದಿಯ ಒಡಲಲ್ಲಿರುವ ಉದ್ಭವಲಿಂಗಕ್ಕೆ ಜಾತ್ರೋತ್ಸವ ಸಂದರ್ಭದಲ್ಲಿ ಪೂಜೆ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ನೀರಿನಿಂದಾಗಿ ಅದು ಸಾಧ್ಯವಿಲ್ಲ. ಆದರಿಂದ ಸಾನಿಧ್ಯಕ್ಕೆ ಯಾವುದೇ ತೊಂದರೆ ಬರಬಾರದು ಎಂದು ದೇವಾಲಯದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ ಸೇರಿದಂತೆ ಕೆಲ ಹಿರಿಯರು ಹೇಳಿದರಲ್ಲದೆ, ಈ ಬಗ್ಗೆ ಪ್ರಶ್ನಾ ಚಿಂತನೆ ನಡೆಸೋಣ ಎಂದರು. ಅದಕ್ಕೆ ಸ್ಪಂದಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಮೊದಲಿನಂತೆ ಜಾತ್ರೋತ್ಸವ ನಡೆಯಬೇಕು ಎಂಬುದು ನನ್ನದೂ ಕೂಡಾ ಅಪೇಕ್ಷೆಯಾಗಿದೆ. ಹಾಗಂತ ನದಿಯಲ್ಲಿ ಇರುವ ನೀರನ್ನು ಹರಿದು ಹೋಗಲು ಬಿಡಲು ಸಾಧ್ಯವಿಲ್ಲ. ಮಳೆಯ ಕೊರತೆಯಾಗಿದೆ. ನದಿಯಲ್ಲಿ ಒಳ ಹರಿವು ಕಡಿಮೆ ಇರುವುದರಿಂದ ಮತ್ತೆ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ನದಿಯಲ್ಲಿನ ಉದ್ಭವ ಲಿಂಗದ ಬಳಿಯ ಧಾರ್ಮಿಕ ವಿಧಿವಿಧಾನಗಳ ಅಡಚಣೆ ಸಂಬಂಧ ಕೈಗೊಳ್ಳಬಹುದಾದ ಪರ್ಯಾಯ ಕ್ರಮಗಳನ್ನು ಪ್ರಶ್ನಾ ಚಿಂತನೆಯಲ್ಲಿ ಕಂಡುಕೊಳ್ಳೋಣ. ಉದ್ಭವ ಲಿಂಗಕ್ಕೆ ಪೂಜೆ ನಡೆಸಲು ಸಾಧ್ಯವಾಗುವಷ್ಟು ಅಣೆಕಟ್ಟಿನಲ್ಲಿ ಸ್ವಲ್ಪ ನೀರನ್ನು ಹರಿಯಲು ಬಿಡಲು ಸಾಧ್ಯವೇ ಎಂಬುದನ್ನು ಬೇಕಾದರೂ ನೀರಾವರಿ ಇಲಾಖೆಯ ಎಂಜಿನಿಯರ್‌ಗಳಲ್ಲಿ ಕೇಳೋಣ ಎಂದರು.