ಆರ್ಯಾಪು ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ – ಅನುದಾನ ಹಂಚಿಕೆಯಲ್ಲಿ ಯಾರೂ ರಾಜಕೀಯ ಮಾಡಬಾರದು: ಅಶೋಕ್ ರೈ

0

ಪುತ್ತೂರು: ಯಾವುದೇ ಕಾರಣಕ್ಕೂ ಅನುದಾನ ಹಂಚಿಕೆಯಲ್ಲಿ ಯಾವ ಜನಪ್ರತಿನಿಧಿಗಳೂ ರಾಜಕೀಯ ಮಾಡಬಾರದು, ರಾಜಕೀಯ ಮಾಡಿದರೆ ಅದರಿಂದ ಅಭಿವೃದ್ದಿ ಕುಂಟಿತವಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಆರ್ಯಾಪು ಗ್ರಾಮದ ಕುಂಜೂರುಪಂಜ- ಮೇಗಿನ ಪಂಜ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಭಾಗದ ಕೆಲವೊಂದು ರಸ್ತೆಗಳಿಗೆ ಇದುವರೆಗೂ ಯಾವುದೇ ಅನುದಾನವನ್ನು ನೀಡಿಲ್ಲ. ಅನುದಾನ ಯಾಕೆ ನೀಡಿಲ್ಲ ಎಂಬುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ರಾಜಕೀಯವಾಗಿ ಲಾಭ ಇದ್ದ ಕಡೆ ಮಾತ್ರ ಹಿಂದಿನವರು ಅನುದಾನವನ್ನು ನೀಡಿದ್ದಾರೆ, ತಮ್ಮ ಪರ ಮತ ಹಾಕುವವರ ರಸ್ತೆಯನ್ನು ಮಾತ್ರ ಅಭಿವೃದ್ದಿಪಡಿಸಲಾಗಿದೆ ಇದು ನ್ಯಾಯವಲ್ಲ. ಓರ್ವ ಶಾಸಕ ಕ್ಷೇತ್ರದ ಎಲ್ಲಾ ಜನರಿಗೂ ಶಾಸಕನಾಗಿರುತ್ತಾರೆ. ಆರ್ಯಾಪು ಗ್ರಾಮದ ಮೇಗಿನ ಪಂಜ ರಸ್ತೆ ನಿರ್ಮಾಣಕ್ಕೆ ಹಲವು ವರ್ಷದಿಂದ ಜನರು ಮನವಿ ಮಾಡಿದ್ದರೂ ಯಾವುದೇ ಅನುದಾನ ನೀಡಿರಲಿಲ್ಲ. ಪಕ್ಷ ಭೇದವಿಲ್ಲದೆ ನಾನು ಅಭಿವೃದ್ದಿಯಲ್ಲಿ ರಾಜಧರ್ಮವನ್ನು ಪಾಲಿಸುತ್ತೇನೆ ಎಲ್ಲಿ ಅಗತ್ಯವಿದೆಯೋ ಅಲ್ಲಿಗೆ ಅನುದಾನ ಕೊಡುತ್ತೇನೆ ಎಂದು ಶಾಸಕರು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಮಾತನಾಡಿ ಪುತ್ತೂರಿನಲ್ಲಿ ಅಭಿವೃದ್ದಿ ಪರ್ವ ಆರಂಭವಾಗಿದೆ. ಜನರ ನಿರೀಕ್ಷೆಯಂತೆ ಕೆಲಸಗಳು ನಡೆಯುತ್ತಿದೆ. ಸಂಪೂರ್ಣವಾಗಿ ಕಡೆಗಣಿಸಲಾದ ಗ್ರಾಮೀಣ ರಸ್ತೆಗಳು ಈ ಬಾರಿ ಅಭಿವೃದ್ದಿಯಗುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದರು. ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ ಮಾತನಾಡಿ ಶಾಸಕರ ಅಭಿವೃದ್ದಿ ಕೈಂಕರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕುಂಜೂರು ಪಂಜ -ಮೇಗಿನ ಪಂಜ ರಸ್ತೆ ಅಭಿವೃದ್ದಿಗೆ 10 ಲಕ್ಷ, ಕೊಲ್ಯದಲ್ಲಿ ತಡೆಗೋಡೆ ನಿರ್ಮಾಣ ಕಾಗಾರಿಗೆ ಶಾಸಕರು ಹತ್ತು ಲಕ್ಷ ಅನುದಾನವನ್ನು ನೀಡಿದ್ದು ಇದೆಲ್ಲದರ ಗುದ್ದಲಿಪೂಜೆ ನಡೆಯಿತು. ಬೂಡಿಯಾರು ಹೊಸಮನೆ ರಸ್ತೆಯ ಉದ್ಘಾಟನೆಯೂ ಇದೇ ಸಂದರ್ಭದಲ್ಲಿ ಶಾಸಕರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಪಂಜಿಗುಡ್ಡೆ ಈಶ್ವರಭಟ್, ಗ್ರಾಪಂ ಸದಸ್ಯರಾದ ಪೂರ್ಣಿಮಾ, ಪವಿತ್ರ ರೈ ಬಾಳಿಲ, ವಲತ್ತಡ್ಕ ಮಹಾಬಲ ರೈ, ತಾರನಾಥ ಮೇಗಿನ ಪಂಜ, ಆನಂದ ಹೊಸಮನೆ, ನಿವೃತ್ತ ಪಿಎಸ್‌ಐ ಸೇಸಪ್ಪ ಗೌಡ, ಲತೀಫ್ ಮಜಲುಮನೆ, ರವಿಚಂದ್ರ ಆಚಾರಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here