ರೋಟರಿ ಸಿಟಿಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ಸಂಘಟನೆ ಎನ್ನುವುದು ಸಾಮಾಜಿಕ ಜವಾಬ್ದಾರಿ-ಎಚ್.ಆರ್ ಕೇಶವ್

ಪುತ್ತೂರು: ಮಾನವನ ಸ್ವಾರ್ಥರಹಿತ ಸೇವೆಯು ಸಮಾಜವನ್ನು ಬದಲಾವಣೆಗೊಳಿಸುತ್ತದೆ. ಬದುಕನ್ನು ಸಂಘಟನೆ ಮಾಡುವುದಲ್ಲ, ಜನರ ಬದುಕನ್ನು ಸಂಘಟನೆಯ ಮೂಲಕ ಬದಲಾವಣೆಗೊಳಿಸಲು ಮುಂದೆ ಬರಬೇಕು. ಸಂಘಟನೆ ಅನ್ನುವುದು ಉದ್ಯೋಗ ಅಲ್ಲ, ಅದು ಸಾಮಾಜಿಕ ಜವಾಬ್ದಾರಿ ಎಂದು ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್ ರವರು ಹೇಳಿದರು. ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿಗೆ ಜ.30ರಂದು ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್‌ರವರು ಅಧಿಕೃತ ಭೇಟಿ ನೀಡಿದ್ದು, ಸಂಜೆ ಸುದಾನ ಶಾಲೆಯ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಕ್ಲಬ್‌ನ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್‌ರವರು ಮನೋಹರ್ ಕೊಳಕ್ಕಿಮಾರ್ ಸಂಪಾದಕತ್ವದ “ರೋಟ ವಿಕಾಸ” ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ಕ್ಲಬ್ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್‌ರವರು ಸರ್ವರ ಸಹಕಾರದಂತೆ “ನಗು-ಮಗು” ಕಾರ್ಯಕ್ರಮ ಯಶಸ್ವಿಯ ಹಾದಿಯಲ್ಲಿ ಮುನ್ನೆಡೆಯುತ್ತಿದೆ. ಜೊತೆಗೆ ಜಿಲ್ಲಾ ಕಾರ್ಯಕ್ರಮವೆನಿಸಿದ ಅಂಗನವಾಡಿಗಳ ಪುನಶ್ಚೇತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿದ ರೋಟರಿ ಸಿಟಿ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್ ಸ್ವಾಗತಿಸಿ ಮಾತನಾಡಿ, ಕ್ಲಬ್ ಸದಸ್ಯರ ಸಹಕಾರದಿಂದಾಗಿ ನನಗೆ ಸಮಾಜಮುಖಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಈ ವರ್ಷದ ಧ್ಯೇಯವಾಕ್ಯ ಜಗತ್ತಿನಲ್ಲಿ ಭರವಸೆಯನ್ನು ಮೂಡಿಸು ಎಂಬಂತೆ ಪ್ರಾಮಾಣಿಕತೆಯಿಂದ ಸಮಾಜಮುಖಿ ಕಾರ್ಯಗಳಲ್ಲಿ ಕೈಜೋಡಿಸಿ ಸಮಾಜದಿಂದ ಸಿಗುವ ಗೌರವ ಹಾಗೂ ಸಂತೃಪ್ತಿಯೇ ಬಹಳ ದೊಡ್ಡ ಮೌಲ್ಯವಾಗಿದೆ ಎಂದರು.

ಸಮಾಜಮುಖಿ ಕಾರ್ಯಗಳು: ಕಮ್ಯೂನಿಟಿ ಸರ್ವಿಸ್ ವತಿಯಿಂದ ಮರ್ದಾಳ ಜೀವನಜ್ಯೋತಿ ವಿಶೇಷ ಚೇತನರ ಶಾಲೆಗೆ 70 ಬೆಡ್‌ಶೀಟ್ ಜೊತೆಗೆ ಪ್ಯಾಂಟ್, ಶರ್ಟ್‌ಗಳನ್ನು ಮರ್ದಾಳ ಸಂಸ್ಥೆಯ ಸಂಚಾಲಕರಿಗೆ ವಿತರಿಸಲಾಯಿತು. ಬೀರಮಲೆ ಪ್ರಜ್ಞಾ ಆಶ್ರಮಕ್ಕೆ ಬೆಡ್‌ಶೀಟ್ ಅನ್ನು ಸಂಸ್ಥೆಯ ಮುಖ್ಯಸ್ಥ ಅಣ್ಣಪ್ಪರವರಿಗೆ ಹಸ್ತಾಂತರಿಸಲಾಯಿತು. ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿನ ಮಕ್ಕಳ ವಾರ್ಡ್ ಅನ್ನು ಉನ್ನತೀಕರಿಸಿ ಅಲ್ಲಿ ಬೆಡ್‌ಶೀಟ್, ಕೆ.ಆರ್ ಶೆಣೈಯವರಿಂದ ಟಿ.ವಿ ಹಾಗೂ ಜಯಕುಮಾರ್ ರೈ ಎಂ.ಆರ್, ಜಯರಾಮ ರೈ ಮಿತ್ರಂಪಾಡಿ, ಸುಧಾಕರ್ ಶೆಟ್ಟಿ, ಕೃಷ್ಣವೇಣಿ ಮುಳಿಯ ಪ್ರಾಯೋಜಕತ್ವದಲ್ಲಿ ವೀಲ್‌ಚೇರ್ ಕೊಡುಗೆಯನ್ನು ಹಸ್ತಾಂತರಿಸಲಾಯಿತು. ಟಿ.ಆರ್.ಎಫ್ ಕೊಡುಗೆ: ಅಂತರ್ರಾಷ್ಟ್ರೀಯ ಸರ್ವಿಸ್ ವತಿಯಿಂದ ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡಿ ಪಿ.ಎಚ್.ಎಫ್ ಹಾಗೂ ಪಿ.ಎಚ್.ಎಸ್ ಪದವಿ ಪಡೆದ ಸದಸ್ಯರಾದ ಉಮೇಶ್ಚಂದ್ರ, ವಿಕ್ಟರ್ ಪಾಯಿಸ್, ಆನಂದ ಗೌಡ, ಮೊಹಮದ್ ಸಾಬ್, ಸುಮಿತ್ ಕುಮಾರ್, ಮಹಾಬಲ, ಶ್ಯಾಮಲ ಶೆಟ್ಟಿ, ಮೋಹನ್ ಮುತ್ಲಾಜೆ, ನಟೇಶ್ ಉಡುಪ, ಡೆನ್ನಿಸ್ ಮಸ್ಕರೇನ್ಹಸ್, ವೇದ ಲಕ್ಷ್ಮೀಕಾಂತ್, ಲಕ್ಷ್ಮೀಕಾಂತ್ ಆಚಾರ್ಯ, ಲಾರೆನ್ಸ್ ಗೊನ್ಸಾಲ್ವಿಸ್, ಗ್ರೇಸಿ ಗೊನ್ಸಾಲ್ವಿಸ್, ಡಾ.ಹರಿಕೃಷ್ಣ ಪಾಣಾಜೆರವರನ್ನು ಈ ಸಂದರ್ಭದಲ್ಲಿ ಗುರುತಿಸಿ ಅಭಿನಂದಿಸಲಾಯಿತು. ಸದಸ್ಯರಿಂದ ಒಟ್ಟುಗೂಡಿಸಿದ 12 ಸಾವಿರ ಡಾಲರ್‌ನ ಚೆಕ್ ಅನ್ನು ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್‌ರವರಿಗೆ ಅಂತರರಾಷ್ಟ್ರೀಯ ಸರ್ವಿಸ್ ನಿರ್ದೇಶಕ ಸುರೇಂದ್ರ ಕಿಣಿರವರು ಹಸ್ತಾಂತರಿಸಿದರು.

ಸಹಕರಿಸಿದವರಿಗೆ ಗೌರವ: ಕ್ಲಬ್‌ನ ವಿವಿಧ ಯೋಜನೆಗಳಲ್ಲಿ ಸಹಕರಿಸಿದ ರೋಟರಿ ಭೀಷ್ಮ ಕೆ.ಆರ್ ಶೆಣೈ, ಡಾ.ಕೀರ್ತನ್ ಕಜೆ, ಆಸ್ಕರ್ ಆನಂದ್, ಕೆ.ವಿಶ್ವಾಸ್ ಶೆಣೈ, ಪ್ರಶಾಂತ್ ಶೆಣೈ, ಸುಮಿತ್ ಕುಮಾರ್, ಹರಿಣಿ ಸತೀಶ್, ಅನಿಲ್ ಲೋಬೊ ಕೆಮ್ಮಾಯಿ, ರೆ|ವಿಜಯ ಹಾರ್ವಿನ್, ಜಗದೀಶ್ ಅಮೀನ್, ವಿಕ್ಟರ್ ಮಾರ್ಟಿಸ್, ಮಹಮದ್ ಸಾದಿಕ್‌ರವರುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ರೋಟರಿ ಸದಸ್ಯೆ ಕೃಷ್ಣವೇಣಿ ಮುಳಿಯರವರು ಪ್ರಾರ್ಥಿಸಿದರು. ಕ್ಲಬ್ ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ಯಾಮಲಾ ಶೆಟ್ಟಿ ವರದಿ ಮಂಡಿಸಿ, ವಂದಿಸಿದರು. ಪೂರ್ವಾಧ್ಯಕ್ಷರಾದ ಜೋನ್ ಕುಟಿನ್ಹಾ, ಪ್ರಮೋದ್ ಮಲ್ಲಾರರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.

ನಿಯೋಜಿತ ಅಧ್ಯಕ್ಷ ಮೊಹಮದ್ ಸಾಬ್‌ರವರು ಜಿಲ್ಲಾ ಗವರ್ನರ್‌ರವರ, ಜಯಕುಮಾರ್ ರೈ ಎಂ.ಆರ್‌ರವರು ಅಸಿಸ್ಟೆಂಟ್ ಗವರ್ನರ್‌ರವರ ಪರಿಚಯ ಮಾಡಿದರು. ನ್ಯಾಯವಾದಿ ಮಹೇಶ್ ಕಜೆರವರು ಸಮರ್ಥ ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು. ಲೀನಾ ಪಾಯಿಸ್ ಹಾಗೂ ನಿಯೋಜಿತ ಕಾರ್ಯದರ್ಶಿ ರಾಮಚಂದ್ರ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಬಾಕ್ಸ್ ರೋಟರಿ ‘ಸಮರ್ಥ’ ಪ್ರಶಸ್ತಿ ಪ್ರದಾನ… ರೋಟರಿ ಸಿಟಿ ವರ್ಷಂಪ್ರತಿ ಕೊಡಲ್ಪಡುವ ವೊಕೇಶನಲ್ ಎಕ್ಸೆಲೆನ್ಸ್ ‘ಸಮರ್ಥ’ ಅವಾರ್ಡ್‌ನ್ನು 2023-24ನೇ ಸಾಲಿನಲ್ಲಿ ಜವುಳಿ ಉದ್ಯಮ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಗೆ ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್‌ರವರು ಸ್ನೇಹ ಟೆಕ್ಸ್‌ಟೈಲ್ಸ್ ಸಂಸ್ಥೆಯ ಮಾಲಕರಾದ ಸತೀಶ್‌ರವರಿಗೆ ಪ್ರದಾನ ಮಾಡಿದರು. ಡಿಜಿ ಭೇಟಿ ಸಂದರ್ಭ ಉದ್ಯಮಿ ಸತೀಶ್‌ರವರು ಸುಮಾರು 60 ಸಾವಿರಕ್ಕೂ ಮಿಕ್ಕಿ ವೆಚ್ಚದಲ್ಲಿ ವಿವಿಧ ಕಡೆ ಬೆಡ್‌ಶೀಟ್‌ನ್ನು ಕೊಡುಗೆಯಾಗಿ ನೀಡಿರುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದು, ತಮ್ಮ ವೃತ್ತಿಯೊಂದಿಗೆ ಅನನ್ಯವಾದ ಅನುಕರಣೀಯ ಸಮಾಜಮುಖಿ ಕಾರ್ಯಗಳನ್ನು ಮಾಡಿದ ರೋಟರಿ ಸದಸ್ಯರಲ್ಲದ ವ್ಯಕ್ತಿಗೆ ಕಳೆದ 12 ವರ್ಷಗಳಿಂದ ರೋಟರಿ ಸಿಟಿಯು ಈ ಅವಾರ್ಡ್‌ನ್ನು ನೀಡುತ್ತಾ ಬಂದಿದೆ. ಸನ್ಮಾನ ಸಂದರ್ಭದಲ್ಲಿ ಸತೀಶ್‌ರವರ ಪತ್ನಿ ರೊಟೇರಿಯನ್ ಆಗಿರುವ ಹರಿಣಿ ಸತೀಶ್ ಉಪಸ್ಥಿತರಿದ್ದರು.

ಡಿಜಿ ಭೇಟಿ ಕಾರ್ಯಕ್ರಮಗಳು
ನೆಲ್ಲಿಕಟ್ಟೆಯಲ್ಲಿನ ರೋಟರಿ ಸಿಟಿ ಚಾರಿಟೇಬಲ್ ಟ್ರಸ್ಟ್‌ನಿಂದ ನಡೆಸಲ್ಪಡುತ್ತಿರುವ ವಿದ್ಯಾಜ್ಯೋತಿ ಎಲ್‌ಕೆಜಿ, ಯುಕೆಜೆ ಶಾಲೆಯ ಮಕ್ಕಳೊಂದಿಗೆ ಸಂವಾದ -ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕ್ಲಬ್‌ನ ವತಿಯಿಂದ ಹಾಗೂ ಸದಸ್ಯರ ಸಹಕಾರದಿಂದ ನವೀಕೃತಗೊಳಿಸಿದ ಮಕ್ಕಳ ವಾರ್ಡ್, ವೀಲ್‌ಚೆಯರ್, ಬೆಡ್‌ಶೀಟ್ ಹಸ್ತಾಂತರ -ಓಜಾಲ ಶಾಲೆಯಲ್ಲಿ ಕ್ಲಬ್‌ನಿಂದ ನಿರ್ಮಿಸಲ್ಪಟ್ಟ ನೂತನ ಶಾಲಾ ಕೊಠಡಿಯ ಉದ್ಘಾಟನೆ -ಕ್ಲಬ್ ಸದಸ್ಯ ರಾಮಚಂದ್ರ ಬನ್ನೂರುರವರ ಮನೆಯಲ್ಲಿ ಕೊಳವೆ ಬಾವಿಗೆ ಮಳೆನೀರು ಇಂಗಿಸುವ ಯೋಜನೆಗೆ ಚಾಲನೆ.

LEAVE A REPLY

Please enter your comment!
Please enter your name here