ಪುತ್ತೂರು: ಪುತ್ತೂರು ತಾಲೂಕು ರಬ್ಬರ್ ಬೋರ್ಡ್ ಹಾಗೂ ರಬ್ಬರ್ ಬೆಳೆಗಾರರ ಸಂಘ ಈಶ್ವರ ಮಂಗಳ ಇದರ ವತಿಯಿಂದ ರಬ್ಬರ್ ಮರಗಳಿಗೆ ರೈನ್ ಗಾರ್ಡ್ ಹಾಕುವ ಬಗ್ಗೆ ಮಾಹಿತಿ ಮತ್ತು ತರಬೇತಿ ನಡೆಯಿತು. ಕರ್ನೂರು ಶಾಲಾ ಬಳಿಯಲ್ಲಿರುವ ಪ್ರಭಾಕರ್ ರಾವ್ ಇವರ ತೋಟದಲ್ಲಿ ಚೊಕ್ಕಳಿಂಗಸ್ವಾಮಿ ತರಬೇತಿ ನೀಡಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಸೂಫಿ ಬಾಂಟಡ್ಕ ಮಾತನಾಡಿ, ನೀರಿಲ್ಲದೆ ಇರುವ ಗುಡ್ಡ ಪ್ರದೇಶದಲ್ಲಿ ಇದು ಉತ್ತಮವಾದ ವಾಣಿಜ್ಯ ಬೆಳೆಯಾಗಿದ್ದು, ನೀರು ಇಲ್ಲದಂತ ಗುಡ್ಡ ಪ್ರದೇಶದಲ್ಲಿ ಇದನ್ನು ಹೇರಳವಾಗಿ ಬೆಳೆಯಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ತಾಲೂಕು ರಬ್ಬರ್ ಬೋರ್ಡ್ ನ ನಿರ್ದೇಶಕ ಶ್ರೀರಾಮ್ ಪಕ್ಕಳ ಮಾತನಾಡಿ, ಕರಾವಳಿ ಜಿಲ್ಲೆಯ ಎರಡನೆಯ ವಾಣಿಜ್ಯ ಬೆಳೆಯಾಗಿದ್ದು ರಬ್ಬರ್ ಬೋರ್ಡಿನ ಸಹಕಾರ ಮತ್ತು ಮಾರ್ಗದರ್ಶನ ಪಡೆದು ರಬ್ಬರ್ ಕೃಷಿ ಮಾಡಬೇಕು ಎಂದರು. ರಬ್ಬರ್ ಬೋರ್ಡ್ ಅಸಿಸ್ಟೆಂಟ್ ಆಫೀಸರ್ ಶೋಭಾನ ತರಬೇತಿಯ ಬಗ್ಗೆ ವಿಷಯ ಮಂಡನೆ ಮಾಡಿದರು. ಸುಮಾರು 20 ರಬ್ಬರ್ ಕೃಷಿಕರು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು.