ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನೂತನ ಧ್ವಜಸ್ತಂಭದ ಆಧಾರ ಶಿಲಾಪ್ರತಿಷ್ಟೆ ರತ್ನಾನ್ಯಾಸ, ದ್ವಜಸ್ತಂಭ ಸ್ಥಾಪನೆ – ಧಾರ್ಮಿಕ ಸಭೆ

0

*ನಮ್ಮ ಆಸೆ, ದೇವರ ಸಂಕಲ್ಪ ಈಡೇರುವ ಸಂತಸದ ಕ್ಷಣ ಸನ್ನಿಹಿತವಾಗಿದೆ: ಸೌಂದರ್ಯ ಪಿ. ಮಂಜಪ್ಪ
*ಜಿಲ್ಲೆಯ ಮೇಲ್ಪಂಕ್ತಿಯ ಬ್ರಹ್ಮಕಲಶ ಇದಾಗಬೇಕು: ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು
*ಬ್ರಹ್ಮಕಲಶದ ಮೂಲಕ ದೇಶದಲ್ಲೇ ಕೊಡಿಪಾಡಿ ಗ್ರಾಮವನ್ನು ಗುರುತಿಸುವ ಕೆಲಸವಾಗುತ್ತದೆ: ಪಂಜಿಗುಡ್ಡೆ ಈಶ್ವರ ಭಟ್
*ಗ್ರಾಮದ ಭಕ್ತಾಧಿಗಳ ಹಲವಾರು ವರುಷಗಳ ಕನಸು ಇದೀಗ ನನಸಾಗಿದೆ: ಜನಾರ್ದನ ಎರ್ಕಡಿತ್ತಾಯ

ಪುತ್ತೂರು : ನಾವೆಲ್ಲರೂ ಇಂದು ಒಂದು ಪುಣ್ಯದ ಕಾರ್ಯದಲ್ಲಿದ್ದೇವೆ. ಬಹುದಿನಗಳ ನಮ್ಮ ಆಸೆ, ದೇವರ ಸಂಕಲ್ಪ ಈಡೇರುವ ಸಂತಸದ ಕ್ಷಣ ಸನ್ನಿಹಿತವಾಗಿದೆ. ನಾವೇನೋ ಕಳೆದುಕೊಂಡಿದ್ದೇವೆ ಎನ್ನುವ ಯೋಚನೆಯಲ್ಲಿ ಇಡೀ ಗ್ರಾಮದ ಭಕ್ತರಿದ್ದೆವು. ಆದರೆ ಇದೀಗ ಅವೆಲ್ಲವೂ ದೂರವಾಗಿ ನಮ್ಮ ಮೊಗದಲ್ಲಿ ಮಂದಹಾಸ ಮೂಡುವ ಸಕಾಲ ಕೂಡಿಬಂದಿದೆ‌ ಎಂದು ಬೆಂಗಳೂರಿನ ಸೌಂದರ್ಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರು, ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಸೌಂದರ್ಯ ಪಿ. ಮಂಜಪ್ಪರವರು ಹೇಳಿದರು.

ಅವರು ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಫೆ.1ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನೂತನ ದ್ವಜಸ್ತಂಭದ ಆಧಾರ ಶಿಲಾಪ್ರತಿಷ್ಠೆ ರತ್ನಾನ್ಯಾಸ, ಧ್ವಜಸ್ತಂಭ ಸ್ಥಾಪನೆ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಯ‌, ಸಂದರ್ಭ ಕೂಡಿ ಬಂದಾಗ ಯಾವುದೇ ಕಾರ್ಯಗಳು ಸಾಂಗವಾಗಿ ನೆರವೇರಲು ಸಾಧ್ಯವಾಗಿದೆ. ಹಣದ ವಿಚಾರದಲ್ಲಿ ಆರಂಭದಲ್ಲಿ ನಮ್ಮಲ್ಲಿ ಆತಂಕವಿತ್ತು.

ಆದರೆ ಇದೀಗ ದೇವರ ಇಚ್ಚೆಯಿಂದ ಪ್ರತಿಕಾರ್ಯವು ಸಾಂಗವಾಗಿ ನೆರವೇರುತ್ತಿದೆ. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ಸಾಗುತ್ತದೆ. ಬಹುದೊಡ್ಡ ಕೆಲಸವಿದೆ. ಎಲ್ಲರೂ ಒಂದಾಗಿ ಜೊತೆಯಾಗಿ ಕೆಲಸ ನಿರ್ವಹಿಸೋಣ. ಪೂರ್ಣ ಕುಂಭ ಸ್ವಾಗತದೊಂದಿಗೆ ರಥವನ್ನು ತರುವ ವ್ಯವಸ್ಥೆ ಮಾಡೋಣ. ಎಲ್ಲರೂ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ ಎಂದರು.

ಪುತ್ತೂರು ಶ್ರೀ ಮಾಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ಮಾತನಾಡಿ, ಇಲ್ಲಿ ಇನ್ನಷ್ಟು ಕೆಲಸ ಕಾರ್ಯಗಳು ನಡೆಯಲಿದ್ದು, ಅವೆಲ್ಲವೂ ಜನಾರ್ದನ ದೇವರ ಕೃಪೆಯಿಂದ ನಿಸ್ಸಾರವಾಗಿ ನಡೆಯಲಿದೆ. ನೇರ ನಡೆನುಡಿಯ ವ್ಯಕ್ತಿತ್ವ ನಮ್ಮದಾಗಬೇಕು. ಬ್ರಹ್ಮಕಲಶದ ಯಶಸ್ವಿ ಸ್ವಯಂಸೇವಕರ ಕೈಯ್ಯಲ್ಲಿದೆ‌.

ವ್ಯಕ್ತಿಗೋಸ್ಕರ ವ್ಯವಸ್ಥೆಯ ಬದಲಾವಣೆ ಸಲ್ಲದು. ಎಲ್ಲರೂ ಒಂದಾಗಿ ಒಟ್ಟಾಗಿ ಕೆಲಸ ಕಾರ್ಯಮಾಡಿದಾಗ ಯಶಸ್ಸಾಗಲು ಸಾಧ್ಯ. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕುಶಿ ಮಂದಹಾಸ ಇರಬೇಕು. ಜಿಲ್ಲೆಯ ಮೇಲ್ಪಂಕ್ತಿಯ ಬ್ರಹ್ಮಕಲಶ ಇದಾಗಬೇಕು ಎಂದು ಹೇಳಿದ ಅವರು ಸಲಹೆ ಸೂಚನೆಗಳನ್ನು ನೀಡಿದರು.

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ ರವರು ಮಾತನಾಡಿ, ಜನಾರ್ದನ ಎಂದರೆ ಮನುಷ್ಯನ ಜೀವನವನ್ನು ಬೆಳಗಿಸುವವನು ಎಂದರ್ಥ. ಧ್ವಜಸ್ಥಂಭ ಪ್ರತಿಷ್ಠೆಗೆ ಅದರದೇ ಆದ ಪಾವಿತ್ರತೆ ಇದೆ.

ನಮ್ಮ ಈ ಬ್ರಹ್ಮಕಲಶದ ಮೂಲಕ ದೇಶದಲ್ಲೇ ಕೊಡಿಪಾಡಿ ಗ್ರಾಮವನ್ನು ಗುರುತಿಸುವ ಕೆಲಸವಾಗುತ್ತದೆ. ಉತ್ತಮ ತಂಡ ಈ ಕ್ಷೇತ್ರದಲ್ಲಿರುವುದರಿಂದ ಕಾರ್ಯಕ್ರಮ ಯಶಸ್ಸಾಗಲು ಸಾಧ್ಯ. ಎಲ್ಲರೂ ಒಂದಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜನಾರ್ದನ ಎರ್ಕಡಿತ್ತಾಯರವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಗ್ರಾಮದ ಭಕ್ತಾಧಿಗಳ ಹಲವಾರು ವರುಷಗಳ ಕನಸು ಇದೀಗ ನನಸಾಗಿದೆ. ಹಲವಾರು ಅಡೆತಡೆಗಳನ್ನು ನಿವಾರಿಸಿಕೊಂಡು ಇದೀಗ ಧ್ವಜಸ್ಥಂಭ ಸ್ಥಾಪನೆ ಮಾಡುವ ಹಂತಕ್ಕೆ ನಾವು ತಲುಪಿದ್ದೇವೆ. ಭ್ರಹರಥದ ಕೆಲಸ ಕಾರ್ಯಗಳು ಸಂಪೂರ್ಣವಾಗಿದೆ. ಭಕ್ತಾಧಿಗಳ ಶ್ರಮಸೇವೆಯಿಂದ ಹಲವಾರು ಕೆಲಸಕಾರ್ಯಗಳು ಕ್ಷೇತ್ರದಲ್ಲಿ ನಡೆದಿದೆ. ಅವರ ಶ್ರಮಕ್ಕೆ ನಾವು ಸದಾ ಆಭಾರಿಯಾಗಿದ್ದೇವೆ. ಬ್ರಹ್ಮಕಲಶೋತ್ಸವದ ಬಳಿಕವೂ ಗ್ರಾಮಸ್ಥರು ಇದೇ ರೀತಿಯ ಸಹಕಾರವನ್ನು ನೀಡಬೇಕಾಗಿದೆ. ಗ್ರಾಮಸ್ಥರೆಲ್ಲರೂ ಒಂದೇ ಮನಸ್ಸಿ‌ನಿಂದ ಶ್ರೀ ಜನಾರ್ದನ ಸ್ವಾಮಿಯ ಬ್ರಹ್ಮಕಲಶ ಹಾಗೂ ದೇವರ ಜಾತ್ರೋತ್ಸವವನ್ನು ನಡೆಸುವಲ್ಲಿ ಶ್ರಮಿಸೋಣ. ಒಂದು ಮಾದರಿ ಬ್ರಹ್ಮಕಲಶವಾಗಿ ಮಾಡೋಣ ಎಂದರು.

ಕ್ಷೇತ್ರದ ಪವಿತ್ರಪಾಣೆ ಡಾ.ಹೇಮಂತ ಮೂರ್ತಿ ಎರ್ಕಡಿತ್ತಾಯ, ಪ್ರಗತಿಪರ ಕೃಷಿಕರಾದ ನವೀನ್ ಚಂದ್ರ ನಾಯ್ಕ್ ಕಜೆ, ಲಿಂಗಪ್ಪ ಗೌಡ ಹಿರ್ಕುಡೇಲು, ಕೊಡಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೋಮಪ್ಪ ಪೂಜಾರಿ ಓಜಾಲ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು‌. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಅತಿಥಿಗಳನ್ನು ಗೌರವಿಸಲಾಯಿತು.

ಆಮಂತ್ರಣ ಪತ್ರ ಬಿಡುಗಡೆ:
ಕ್ಷೇತ್ರದಲ್ಲಿ ಮಾ.20ರಿಂದ ಎ.2ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ವೇದಿಕೆಯಲ್ಲಿದ್ದ ಗಣ್ಯರು ಹಾಗೂ ವಿವಿಧ ಸಮಿತಿ ಸದಸ್ಯರುಗಳು ಬಿಡುಗಡೆ ಮಾಡಿದರು.

ಕೃತಿ ನಂದನ, ಚೈತನ್ಯ ಗಡಿಮಾರು ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಕೃಷ್ಣರಾಜ ಎರ್ಕಡಿತ್ತಾಯರವರು ಸ್ವಾಗತಿಸಿದರು. ಅಭಿಜಿತ್ ಕೊಳಕ್ಕಿಮಾರ್ ವಂದಿಸಿದರು. ಮನ್ಮತ ಕಾರ್ಯಕ್ರಮ ನಿರೂಪಿಸಿದರು.

ಧ್ವಜಸ್ಥಂಭ ಪ್ರತಿಷ್ಠೆ ವೇಳೆ ಗರುಡಾಗಮನ

ಕ್ಷೇತ್ರದಲ್ಲಿ ಬೆಳಗ್ಗಿನಿಂದಲೇ ದ್ವಜಸ್ತಂಭದ ಆಧಾರ ಶಿಲಾಪ್ರತಿಷ್ಠೆ, ರತ್ನಾನ್ಯಾಸ, ಧ್ವಜಸ್ತಂಭ ಸ್ಥಾಪನೆಯ ವೈದಿಕ ಕಾರ್ಯಗಳು ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ನಡೆಯುತ್ತಿತ್ತು. ಮಧ್ಯಾಹ್ನದ ವೇಳೆ ಮುಹೂರ್ತಕ್ಕೆ ಧ್ವಜಸ್ಥಂಭ ಪ್ರತಿಷ್ಠಾಪನೆ ಕಾರ್ಯ ನಡೆಯುತ್ತಿದ್ದಂತೆ ದೇವಾಲಯದ ಮೇಲ್ಭಾಗ ಆಕಾಶದಲ್ಲಿ ಗರುಡನ ಹಾರಾಟ ಕಂಡು ಬಂತು. ಕೆಲ ಸಮಯಗಳ ಹಿಂದೆ ಕ್ಷೇತ್ರದಲ್ಲಿ ಪ್ರಶ್ನಾಚಿಂತನೆ ನಡೆಸಿದ ವೇಳೆ ತೆಂಕಣ ಕಾಡಿನಲ್ಲಿ ಕ್ಷೇತ್ರದ ಧ್ವಜಸ್ಥಂಭ ಪ್ರತಿಷ್ಠಾಪನೆಯ ಸಮಯಕ್ಕಾಗಿ ಗರುಡವೊಂದು ಕಾದುಕುಳಿತಿರುವುದಾಗಿ ಕಂಡು ಬಂದಿತ್ತು. ಇದೀಗ ಧ್ವಜಸ್ಥಂಭ ಪ್ರತಿಷ್ಠಾಪನೆ ವೇಳೆ ಗರುಡಾಗಮನ ಆಗಿರುವುದು ಭಕ್ತರಲ್ಲಿ ಭಯ ಭಕ್ತಿ ಹುಟ್ಟಿಸಿದಲ್ಲದೇ ಕ್ಷೇತ್ರದ ಕಾರಣಿಕತೆಯ ನಂಬಿಕೆಗೆ ಇನ್ನಷ್ಟು ಪುಷ್ಟಿ ನೀಡಿತು‌.

ಧ್ವಜಸ್ಥಂಬ ಪ್ರತಿಷ್ಠಾಪನೆಗೆ ಸಾಕ್ಷಿಯಾದ ಭಕ್ತ ಸಾಗರ
ಬೆಳಗ್ಗಿನಿಂದಲೇ ಕೊಡಿಪಾಡಿ ಶ್ರೀ ಕ್ಷೇತ್ರಕ್ಕೆ ಭಕ್ತರ ದಂಡೇ ಹರಿದು ಬಂದಿದ್ದು, ಧ್ವಜಸ್ತಂಭದ ತಳಭಾಗಕ್ಕೆ ಹಾಕಲು ಚಿನ್ನ, ಬೆಳ್ಳಿ, ನವರತ್ನಗಳನ್ನು ಸಮರ್ಪಿಸುತ್ತಿರುವುದು ಕಂಡುಬಂತು. ಊರ ಪರವೂರ ನೂರಾರು ಭಕ್ತಾಧಿಗಳು ಧ್ವಜಸ್ಥಂಭ ಪ್ರತಿಷ್ಠಾಪನೆಗೆ ಸಾಕ್ಷಿಯಾಗಿ ಪ್ರಸಾದ ಪಡೆದು ಅನ್ನಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here