ಶಾಲೆಗೆಂದು ಬಂದ ಬಾಲಕಿ ನಾಪತ್ತೆಯಾದ ಪ್ರಕರಣಕ್ಕೆ ಸುಖಾಂತ್ಯ-ಕಾಸರಗೋಡಿನಲ್ಲಿ ಪತ್ತೆಯಾದ ಬಾಲಕಿ

0

ಪುತ್ತೂರು: ಇಂದು ಬೆಳಿಗ್ಗೆ ಮನೆಯಿಂದ ಶಾಲೆಗೆಂದು ಬಂದ ವಿದ್ಯಾರ್ಥಿನಿಯೊಬ್ಬಳು ಶಾಲೆಗೂ ಬಾರದೆ, ಮನೆಗೂ ಹಿಂದಿರುಗದೆ ನಾಪತ್ತೆಯಾಗಿದ್ದ ಫಾತಿಮಾ ಅಫ್ನ ಪತ್ತೆಯಾಗಿದ್ದಾಳೆ.

ಬಳ್ಕಾಡ್ ನಿವಾಸಿ ಅಶ್ರಫ್‌ ಎಂಬವರ ಪುತ್ರಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ಫಾತಿಮಾ ಅಫ್ನ ನಾಪತ್ತೆಯಾಗಿರುವುದಾಗಿ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಫಾತಿಮಾ ಅಫ್ನ ಕಾಸರಗೋಡಿನಲ್ಲಿ ಪತ್ತೆಯಾಗಿದ್ದು, ಪುತ್ತೂರಿಗೆ ಕರೆತರಲು ಮನೆಮಂದಿ ಪೊಲೀಸರೊಂದಿಗೆ ಕಾಸರಗೋಡಿಗೆ ತೆರಳಿದ್ದಾರೆ.

ನಗರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಅಫ್ನ ಎಂದಿನಂತೆ ಬೆಳಿಗ್ಗೆ ಮನೆಯಿಂದ ಇತರ ಮಕ್ಕಳ ಜೊತೆ ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಶಾಲೆಗೆಂದು ಬಂದಿದ್ದಳು. ಇಂದು ಶಾಲೆಯಲ್ಲಿ ಪರೀಕ್ಷೆ ಇತ್ತು ಎನ್ನಲಾಗಿದ್ದು, ಅಫ್ನ ಶಾಲೆಗೆ ಹೋಗದೆ ನೇರವಾಗಿ ಪರ್ಲಡ್ಕದ ಬಾಲವನಕ್ಕೆ ತೆರಳಿದ್ದಳು. ಐಡಿ ಕಾರ್ಡ್‌ ಇಲ್ಲದ ಕಾರಣ ಬಾಲವನದ ಸಿಬ್ಬಂದಿ ಆಕೆಯನ್ನು ಒಳಗೆ ಬಿಟ್ಟಿರಲಿಲ್ಲ. ಅಲ್ಲಿಂದ ಹಿಂದಿರುಗಿ ಬಂದ ಅಫ್ನ ಪರ್ಲಡ್ಕದಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ತೆರಳಿ ನಾನು ಶಾಲೆಗೆ ಹೋಗಿಲ್ಲ, ಇಂದು ಇಲ್ಲಿ ಇರುವುದಾಗಿ ಹೇಳಿದ್ದಾಳೆ. ಸಂಬಂಧಿಕರ ಮನೆಮಂದಿ ಆಕೆಯನ್ನು ಶಾಲೆಗೆ ಬಿಟ್ಟು ಬರಲು ಮುಂದಾದಾಗ ಅಫ್ನ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಮನೆಯ ಅಕ್ಕಪಕ್ಕದಲ್ಲಿ ಹುಡುಕಾಟ ನಡೆಸಿದರೂ ಆಕೆ ಕಾಣಸಿಕ್ಕಿರಲಿಲ್ಲ. ಸಂಬಂಧಿಕರಿಂದ ಮಾಹಿತಿ ಪಡೆದ ಮನೆಯವರು ಬೆಳಗ್ಗಿನಿಂದಲೇ ಅಫ್ನಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆದರೆ ಅಫ್ನ ಎಲ್ಲಿಯೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನಗರದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಾಲಕಿ ಪತ್ತೆಯಾಗುವುದರೊಂದಿಗೆ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

LEAVE A REPLY

Please enter your comment!
Please enter your name here