ಪುರುಷರಕಟ್ಟೆ: ಮದ್ರಸ ವಠಾರದಲ್ಲಿ ಧಾರ್ಮಿಕ ಮತಪ್ರವಚನ

0

ಧರ್ಮಗಳ ಬಗ್ಗೆ ಪರಸ್ಪರ ಅರಿತುಕೊಂಡರೆ ಸೌಹಾರ್ದತೆ ನೆಲೆಸಲು ಸಾಧ್ಯ: ಶಾಸಕ ಅಶೋಕ್ ರೈ

ಪುತ್ತೂರು: ನಾನೇ ಶ್ರೇಷ್ಠ, ನನ್ನ ಧರ್ಮ ಮಾತ್ರ ಶ್ರೇಷ್ಠ, ಉಳಿದವು ಶೂನ್ಯ ಎಂಬ ಭಾವನೆ ನಮ್ಮಲ್ಲಿ ಇರಬಾರದು, ಎಲ್ಲಾ ಧರ್ಮಗಳು ಒಳಿತನ್ನೇ ಕಲಿಸುತ್ತದೆ, ಧರ್ಮಗಳ ಬಗ್ಗೆ ಪರಸ್ಪರ ಅರಿತುಕೊಂಡಲ್ಲಿ ಸಮಾಜದಲ್ಲಿ ಸೌಹಾರ್ದತೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಪುರುಷರಕಟ್ಟೆ ಮದ್ರಸ ವಠಾರದಲ್ಲಿ ನಡೆಯುತ್ತಿರುವ ಧಾರ್ಮಿಕ ಮತಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.‌ ಮಕ್ಕಳಿಗೆ ಸಣ್ಣ ಪ್ರಾಯದಲ್ಲೇ ನಮ್ಮ ಧರ್ಮದ ಆಚಾರ ವಿಚಾರಗಳನ್ನು ಕಲಿಸಬೇಕು. ತನ್ನ ಧರ್ಮವನ್ನು ಅರಿತುಕೊಳ್ಳುವುದರ ಜೊತೆಗೆ ಸಹೋದರ ಧರ್ಮದ ಬಗ್ಗೆ ಅರಿವು ಮೂಡಿಸಿಕೊಂಡಲ್ಲಿ ಪರಸ್ಪರ ಜ್ಞಾನ ವೃದ್ದಿಯಾಗುತ್ತದೆ. ಧರ್ಮದ ಬಗ್ಗೆ ತಿಳುವಳಿಕೆಯ ಕೊರತೆಯಿಂದಲೇ ಇಂದು ಸಮಾಜದಲ್ಲಿ ಧರ್ಮ ದಂಗಲ್‌ಗಳು ನಡೆಯುತ್ತದೆ ಎಂದು ಹೇಳಿದರು. ಭಾರತ ವಿಶ್ವ ಗುರುವಾಗಬೇಕಾದರೆ ದೇಶದಲ್ಲಿ ಸೌಹಾರ್ದತೆ ನೆಲಸಬೇಕು. ಸೌಹಾರ್ದತೆಯ ಭಾಷಣ ಮಾಡಿದ ಮಾತ್ರಕ್ಕೆ ಭಾರತ ವಿಶ್ವಗುರುವಾಗಲು ಸಾಧ್ಯವಿಲ್ಲ. ದೇಶದಲ್ಲಿರುವ ಎಲ್ಲಾ ಧರ್ಮದ ಸಹೋದರರು ಅಣ್ಣ ತಮ್ಮಂದಿರಂತೆ ಬಾಳಿದರೆ ಮಾತ್ರ ನಾವು ವಿಶ್ವಕ್ಕೆ ಗುರುವಾಗಲು ಸಾಧ್ಯವಾಗುತ್ತದೆ. ಧರ್ಮ, ಜಾತಿ ಹೆಸರಿನಲ್ಲಿ ಯಾರೂ ಕಚ್ಚಾಟ ಮಾಡಬಾರದು. ಎಲ್ಲರೂ ಉಸಿರಾಡುವ ಗಾಳಿಯೊಂದೇ, ರಕ್ತವೂ ಒಂದೇ ಹೀಗಿರುವಾಗ ನಾವು ವಿಭಜನೆಯ ಹಾದಿಯನ್ನು ಹಿಡಿಯಬಾರದು. ಜನರು ಪರಸ್ಪರ ಹತ್ತಿರವಾದಾಗ ಮಾತ್ರ ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಭರತ ಭೂಮಿಯಲ್ಲಿ ಸಾಧನೆ ಮಾಡಿದವರು ಯಾರೂ ಇಲ್ಲ ಎಂದು ಹೇಳಿದರು.

ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಎಲ್ಲರನ್ನೂ ಪ್ರೀತಿಸುವುದೇ ಹಿಂದುತ್ವವಾಗಿದೆ. ಅನ್ಯ ಧರ್ಮದವರನ್ನು ದ್ವೇಷಿಸುವುದು ಹಿಂದುತ್ವ ಎಂದು ನಂಬಿಕೊಂಡ ಅಲ್ಪಜ್ಞಾನಿಗಳು ನಮ್ಮೊಳಗಿದ್ದಾರೆ. ಪರಸ್ಪರ ಸಹೋದರತ್ವ ಭಾನವೆಯಿದ್ದಲ್ಲಿ ಮಾತ್ರ ನಾವು ಮನುಷ್ಯರಾಗಲು ಸಾಧ್ಯವಾಗುತ್ತದೆ. ಮಾನವೀಯ ಧರ್ಮವೇ ಶ್ರೇಷ್ಠ ಎಂಬ ಭಾವನೆ ನಮ್ಮಲ್ಲಿ ಮಾಡಿದಾಗ ಸಹೋದರತ್ವ ಮೂಡುತ್ತದೆ ಅದು ಇಲ್ಲದವರು ಮನುಷ್ಯರಾಗಲು ಸಾಧ್ಯವಿಲ್ಲ ಎಂದು ಹೇಳಿದರು. ವೇದಿಕೆಯಲ್ಲಿ ಧಾರ್ಮಿಕ ಮುಖಂಡರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here