ಸಂಪ್ಯದಮೂಲೆಯಲ್ಲಿ ಗೋಲೋಕೋತ್ಸವ-ಧರ್ಮಸಭೆ

0

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ಗೋಸೇವಾ ಬಳಗದ ನೇತೃತ್ವದಲ್ಲಿ ಮೊಟ್ಟೆತ್ತಡ್ಕ ಎನ್.ಆರ್.ಸಿ.ಸಿ. ಸಮೀಪದ ಸಂಪ್ಯದಮೂಲೆಯಲ್ಲಿರುವ ಗೋವಿಹಾರ ಧಾಮದಲ್ಲಿ ಎರಡು ದಿನಗಳ ಕಾಲ ನಡೆದ ಗೋಲೋಕೋತ್ಸವ ಕಾರ್ಯಕ್ರಮದ ಅಂಗವಾಗಿ ಫೆ.4ರಂದು ಧರ್ಮಸಭೆ ನಡೆಯಿತು.

ಆಶೀರ್ವಚನ ನೀಡಿದ ಉಡುಪಿ ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿಯವರು, ಮನೆ ಮಂದಿಗೆ ಬರುವ ಆಪತ್ತನ್ನು ಗೋವು ಪಡೆದುಕೊಳ್ಳುತ್ತವೆ. ಅಕ್ಕಪಕ್ಕದ ದೇಶದಿಂದ ದೇಶಕ್ಕೆ ಬರುವ ಆಪತ್ತುಗಳಿಂದ ಪಾರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಸಾಕಬೇಕು. ಗೋವುಗಳ ಸೇವೆ ಮಾಡಬೇಕು. ಪ್ರತಿ ಮನೆಯಲ್ಲಿಯೂ ಗೋ ಸಾಕಾಣಿಕೆಯ ಮೂಲಕ ದೇಶದ ಒಳಿತಿಗೆ ಕೊಡುಗೆ ನೀಡಬೇಕು ಎಂದು ಹೇಳಿದ ಅವರು, ರಾಮಮಂದಿರ ಪ್ರತಿಷ್ಠಾಪನೆಯಾಗುವ ಮೂಲಕ ರಾಮರಾಜ್ಯದ ಉಗಮವಾಗಿದೆ. ರಾಮನಿಗೆ ಒಂದು ಮನೆ ಕೊಟ್ಟಂತೆ ಮುಂದಿನ 5 ವರ್ಷದಲ್ಲಿ ಕೃಷ್ಣನಿಗೂ ಮನೆ ಕೊಡುವ ಯೋಗ ಬರಲಿ ಎಂದು ಹೇಳಿದರು. ಅಧಿಕಾರದ ಕುರ್ಚಿ ಪಡೆಯಲು ರಾಮ ಬೇಕು. ಅಧಿಕಾರ ಪಡೆದ ಬಳಿಕ ರಾವಣನ ವರ್ತನೆ ತೋರುವವರನ್ನು ತೊಲಗಿಸಲು ನಾವು ಕಟಿಬದ್ಧರಾಗಬೇಕು. ಯಾವುದೇ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದಲ್ಲಿ ಯಶಸ್ವಿಯಾಗುತ್ತದೆ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಉದಾಹರಣೆ. ಮಹಿಳೆ, ಗೋವುಗಳ ರಕ್ಷಣೆ ಹಾಗೂ ರಾಮಮಂದಿರ ನಿರ್ಮಾಣವನ್ನು ಅವರು ಸಾಕಾರಗೊಳಿಸಿದ್ದಾರೆ ಎಂದು ಹೇಳಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ, ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ ಗೌಡ, ವೀಣಾ ಬಿ.ಕೆ., ಸುಧಾ ಎಸ್.ರಾವ್, ಬಜರಂಗದಳದ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ಗೋವಿಹಾರ ಧಾಮದ ಪ್ರಮುಖರಾದ ಗೋಪಾಲಕೃಷ್ಣ ಭಟ್, ವಿಜಯ ಬಿ.ಎಸ್., ರಮೇಶ್ ಪ್ರಭು, ವಿನಯ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಸ್ವಾಗತಿಸಿದರು. ಉಪನ್ಯಾಸಕರಾದ ರಶ್ಮಿ, ರಾಜೇಶ್ ಬೆಜ್ಜಂಗಳ, ದಾಮೋದರ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು.


ಗೋವು-ನಾವು ವಿಚಾರ ಸಂಕಿರಣದ ಹಾಗೂ ಧಾರ್ಮಿಕ ಶಿಕ್ಷಣದ ಮಕ್ಕಳು ಮತ್ತು ವಿದ್ಯಾರ್ಥಿ ಸಮಾವೇಶ:

ಬೆಳಿಗ್ಗೆ ನಡೆದ ಗೋವು-ನಾವು ವಿಚಾರ ಸಂಕಿರಣ ಹಾಗೂ ಧಾರ್ಮಿಕ ಶಿಕ್ಷಣದ ಮಕ್ಕಳು ಮತ್ತು ವಿದ್ಯಾರ್ಥಿ ಸಮಾವೇಶವನ್ನು ಉದ್ಘಾಟಿಸಿದ ಗೋಕುಲ ಟ್ರಸ್ಟ್ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಮಾತನಾಡಿ, ಗೋವು ಇದ್ದಲ್ಲಿ ಆಮ್ಲಜನಕ ಹೆಚ್ಚಿರುತ್ತದೆ ಎಂಬುದನ್ನು ಹಿರಿಯರು ತಿಳಿದುಕೊಂಡ ಕಾರಣದಿಂದ ಮನೆಯ ಬಳಿಯಲ್ಲೇ ಹಟ್ಟಿಗಳ ನಿರ್ಮಾಣ ಮಾಡುತ್ತಿದ್ದರು. ಕ್ಷೀರ ಕ್ರಾಂತಿಯ ಚಳುವಳಿಯ ಕಾರಣದಿಂದ ಹೆಚ್ಚು ಹಾಲು ನೀಡುವ ಹೈಬ್ರೀಡ್ ದನಗಳ ಸಾಕಣೆಗೆ ಮುಂದಾಗಿದ್ದೇವೆ. ದೇಸಿ ದನದ ಹಾಲಿನ ಸೇವನೆಯ ಬಳಿಕ ಆರೋಗ್ಯ ವೃದ್ಧಿಯಾಗಿದೆ. ದೇಸಿ ದನಗಳಲ್ಲೇ ಉತ್ತಮ ಹಾಲಿನ ತಳಿ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕು. ಟ್ರಸ್ಟಿನ ಕಡೆಯಿಂದ ಕಾರ್ಯಕ್ರಮಕ್ಕೆ 50ಸಾವಿರ ನೆರವು ನೀಡಲಾಗುವುದು ಎಂದು ಹೇಳಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮಾತನಾಡಿ, ಭಾರತೀಯತೆಯನ್ನು ಅಧ್ಯಯನ ಮಾಡಿಕೊಂಡು, ಸಮಾಜಕ್ಕೆ ನೀಡುತ್ತಾ ಇರುವವರೇ ನಿಜವಾದ ತಜ್ಞರು. ಗೋಶಾಲೆಯ ಕೆಲಸದವರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕಂಪನಿಯ ರೂಪದ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದರು. ಧಾರ್ಮಿಕ ಶಿಕ್ಷಣದ ವಿದ್ಯಾರ್ಥಿಗಳಿಗೆ ನಡೆಸಿದ ರಸಪ್ರಶ್ನೆಯ ಬಹುಮಾನ ವಿತರಣೆ ಮಾಡಲಾಯಿತು. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್, ಬದಿಯಡ್ಕ ನೆಕ್ಕರೆ ಕಲೆಯ ಸುಬ್ರಹ್ಮಣ್ಯ ಪ್ರಸಾದ್, ಪ್ರಾಂತೀಯ ಗೋಸೇನಾ ಪ್ರಮುಖ್ ಪ್ರವೀಣ್ ಸರಳಾಯ ಗೋವು – ನಾವು ವಿಚಾರ ಸಂಕಿರಣದಲ್ಲಿ ವಿಚಾರಗಳನ್ನು ಮಂಡಿಸಿದರು. ಪಶುವೈದ್ಯ ಡಾ. ಎಂ.ಕೆ ಕೃಷ್ಣಭಟ್ ಮುಕ್ತಾಯದ ಮಾತುಗಳನ್ನು ಹೇಳಿದರು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ಐತ್ತಪ್ಪ ನಾಯ್ಕ, ರಾಮದಾಸ ಗೌಡ, ರವೀಂದ್ರನಾಥ ರೈ, ವೀಣಾ ಬಿ.ಕೆ., ಮುಳಿಯ ಜ್ಯುವೆಲ್ಸ್ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ಗೋ ವಿಹಾರ ಧಾಮ ಗೋಪಾಲಕೃಷ್ಣ ಭಟ್, ವಿಜಯ ಬಿ.ಎಸ್, ಪಶುವೈದ್ಯಾಽಕಾರಿ ಡಾ.ಪ್ರಸನ್ನ ಹೆಬ್ಬಾರ್, ಪ್ರಗತಿಪರ ಹೈನಗಾರ ಜಯಗುರು ಆಚಾರ್ ಹಿಂದಾರ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕರಾದ ರಶ್ಮಿ ಕೆ. ಹಾಗೂ ಡಾ. ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು. ಸಂಜೆ ನಾಟ್ಯರಂಗ ಪುತ್ತೂರು ಇದರ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರಿಂದ ‘ಧರ್ಮದೇನು’ ನೃತ್ಯರೂಪಕ ವಿಶೇಷ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಬೆಳಿಗ್ಗೆ ಹೋಮ, ಗೋಪೂಜೆ, ಪಶುಪತಿನಾಥ ಮಂಟಪದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನೆರವೇರಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ಕುದುರೆ ಸವಾರಿ, ಗಾಣದ ಮೂಲಕ ಕಬ್ಬುಜ್ಯೂಸ್ ತೆಗೆಯುವ ಪ್ರಾತ್ಯಕ್ಷಿಕೆ, ವಿವಿಧ ತಳಿಯ ಗೋವುಗಳ ಪ್ರದರ್ಶನ ಹಾಗೂ ವ್ಯಾಪಾರ ಮಳಿಗೆಗಳು ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆಯಿತು.

ರಾಘವೇಶ್ವರ ಶ್ರೀಗಳಿಂದ ಪಶುಪತಿನಾಥ ಮಂದಿರದ ನೀಲ ನಕಾಶೆ ಬಿಡುಗಡೆ:
ಗೋವಿಹಾರ ಧಾಮದಲ್ಲಿ ನಿರ್ಮಾಣವಾಗಲಿರುವ ಪಶುಪತಿನಾಥ ಭಜನಾ ಮಂದಿರದ ನೀಲ ನಕಾಶೆಯನ್ನು ಹೊಸನಗರ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ ಹಾಗೂ ಸದಸ್ಯರು ನೀಲ ನಕಾಶೆಯನ್ನು ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು. ಧಾರ್ಮಿಕ ಶಿಕ್ಷಣದ ನಿರ್ವಾಹಕರಿಗೆ ಇದೇ ವೇಳೆ ಸಾಮೂಹಿಕ ಮಂತ್ರಾಕ್ಷತೆ ವಿತರಿಸಲಾಯಿತು. ಕೃಷ್ಣವೇಣಿ ಮುಳಿಯ, ಉಪನ್ಯಾಸಕಿ ಡಾ.ವಿಜಯ ಸರಸ್ವತಿ, ನಗರ ಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್ ಈ ವೇಳೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here