ವಂಚಕ ನೆಲ್ಯಾಡಿಯ ಸೆಬಾಸ್ಟಿಯನ್‌ರಿಂದ ಆಲಂಕಾರಿನಲ್ಲೂ ನಕಲಿ ಬಳೆಗಳನ್ನು ಅಡವಿಟ್ಟು ಸಾಲ ಪಡೆದು ವಂಚನೆ-ದೂರು

0

ನೆಲ್ಯಾಡಿ: ನೆಲ್ಯಾಡಿಯ ಕಾಮಧೇನು ಮಹಿಳಾ ಸಹಕಾರ ಸಂಘ ಹಾಗೂ ಒಡಿಯೂರು ವಿವಿದ್ದೋದ್ದೇಶ ಸೌಹಾರ್ದ ಸಹಕಾರ ಸಂಘದ ಉಪ್ಪಿನಂಗಡಿ ಶಾಖೆಯಲ್ಲಿ ನಕಲಿ ಬಳೆಗಳನ್ನು ಅಡವಿಟ್ಟು ಸಾಲಪಡೆದು ವಂಚಿಸಿರುವ ಆರೋಪಿ ನೆಲ್ಯಾಡಿಯ ಸೆಬಾಸ್ಟಿಯನ್(47 ವ.) ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆಯಲ್ಲೂ ನಕಲಿ ಬಳೆಗಳನ್ನು ಅಡವಿಟ್ಟು ವಂಚಿಸಿರುವುದು ಬೆಳಕಿಗೆ ಬಂದಿದೆ.

ಸೆಬಾಸ್ಟಿಯನ್ ಜ.30ರಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಆಲಂಕಾರು ಶಾಖೆಗೆ ಬಂದು ಮೇಲ್ನೋಟಕ್ಕೆ ನಕಲಿಯೆಂದು ಕಂಡುಬಾರದಿರುವಂತಹ 30.200 ಗ್ರಾಂ ತೂಕದ 4 ಚಿನ್ನದ ಬಳೆಗಳನ್ನು ಅಡಮಾನವಿರಿಸಿ 1.35 ಲಕ್ಷ ರೂ., ಸಾಲ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಂಘದ ಆಲಂಕಾರು ಶಾಖಾ ಪ್ರಬಂಧಕಿ ರೇವತಿ ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ :20/2024.ಕಲಂ:406.420 ಐ.ಪಿ.ಸಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ನೆಲ್ಯಾಡಿ ನಿವಾಸಿಯಾಗಿರುವ ಸೆಬಾಸ್ಟಿಯನ್ ಹಾಗೂ ಕೇರಳ ಮೂಲದ ಡಾನಿಶ್‌ರವರು ಜ.27ರಂದು ನೆಲ್ಯಾಡಿಯ ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ ಮೇಲ್ನೋಟಕ್ಕೆ ನಕಲಿ ಎಂದು ಕಂಡುಬಾರದಂತಹ 30 ಗ್ರಾಂ ತೂಕದ 4 ನಕಲಿ ಬಳೆಗಳನ್ನು ಅಡಮಾನವಿರಿಸಿ ಸಂಘದಿಂದ 1.40 ಲಕ್ಷ ರೂ.ವಂಚಿಸಿರುವುದಾಗಿ ಸಂಘದ ವ್ಯವಸ್ಥಾಪಕಿ ಚೈತನ್ಯ ಸಿ.ಹೆಚ್.ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಇದೇ ಆರೋಪಿಗಳು ಜ.31ರಂದು ಒಡಿಯೂರು ಶ್ರೀ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪ್ಪಿನಂಗಡಿ ಶಾಖೆಗೆ ಬಂದು ಮೇಲ್ನೋಟಕ್ಕೆ ನಕಲಿಯೆಂದು ಕಂಡುಬಾರದಂತಹ 40 ಗ್ರಾಮ್ ತೂಕದ 5 ನಕಲಿ ಬಳೆಗಳನ್ನು ಅಡಮಾನವಿರಿಸಿ, 1.70 ಲಕ್ಷ ರೂ. ಸಾಲ ಪಡೆದು ವಂಚಿಸಿರುವುದಾಗಿ ಶಾಖಾ ವ್ಯವಸ್ಥಾಪಕಿ ಕಮಲ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಆರೋಪಿಗಳು ಇನ್ನಷ್ಟೂ ಸಹಕಾರ ಸಂಘಗಳಲ್ಲಿ ನಕಲಿ ಬಳೆಗಳನ್ನು ಅಡವಿಟ್ಟು ವಂಚಿಸಿರುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here