ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ನೇಮಕಗೊಂಡಿದ್ದಾರೆ.
ರಾಜ್ಯದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಪ್ರವರ್ಗ “ಎ”ಗೆ ಸೇರಿದ ರಾಜ್ಯ ಧಾರ್ಮಿಕ ಪರಿಷತ್ ನಿರ್ಣಯಗಳಾನುಸಾರ ಮೂರು ವರ್ಷಗಳ ಅವಧಿಗೆ ರಚಿಸಲಾದ ವ್ಯವಸ್ಥಾಪನಾ ಸಮಿತಿಗಳ ಅವಧಿ ಮುಕ್ತಾಯವಾಗಲಿರುವುದರಿಂದ, ಅವಧಿ ಮುಕ್ತಾಯವಾಗುವ ದಿನಾಂಕದಿಂದ ಅನ್ವಯವಾಗುವಂತೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಅಧಿನಿಯಮ 2011ರ ಸೆಕ್ಷನ್ 29ರ ಅಡಿಯಲ್ಲಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ಕ್ರಮವಹಿಸುವಂತೆ ಫೆ.3ರಂದು ನಡೆದ 4ನೇ ರಾಜ್ಯ ಧಾರ್ಮಿಕ ಪರಿಷತ್ತಿನ 2ನೇ ಸಭೆಯ ವಿಷಯ ಸೂಚಿ ಸಂಖ್ಯೆ (4)ರ ನಿರ್ಣಯದಂತೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ.
ದೇವಾಲಯಗಳ ದೈನಂದಿನ ಆಡಳಿತ ನಿರ್ವಹಣೆ ಹಿತದೃಷ್ಟಿಯಿಂದ 7 ದೇವಸ್ಥಾನಗಳಿಗೆ ಅಧಿಕಾರಿಗಳನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಅಧಿನಿಯಮ 2011ರ ಸೆಕ್ಷನ್ 29ರನ್ವಯ ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ ಆದೇಶಿಸಿದೆ. ಈ ನಿಟ್ಟಿನಲ್ಲಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯನ್ನಾಗಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ನವೀನ್ ಭಂಡಾರಿ ಅವರು ಈ ಹಿಂದೆ ಇದೆ ದೇವಳದಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ದೇವಳದ ವ್ಯವಸ್ಥಾಪನಾ ಸಮಿತಿಯ ಅವಧಿ ಫೆ.4 ರಂದು ಕೊನೆಗೊಂಡ ಹಿನ್ನಲೆಯಲ್ಲಿ ಫೆ.6 ರಂದು ನವೀನ್ ಭಂಡಾರಿ ದೇವಳದ ಆಡಳಿತಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.