ಪುತ್ತಿಲರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸ್ಥಾನ ಕೊಟ್ಟರೆ…ಮಾತೃಪಕ್ಷದ ಜೊತೆ ಪುತ್ತಿಲ ಪರಿವಾರ ವಿಲೀನ-ತಪ್ಪಿದರೆ ಎಲ್ಲಾ ಚುನಾವಣೆಯಲ್ಲೂ ಸ್ಪರ್ಧೆ:ಸಾಮಾಜಿಕ ಚಟುವಟಿಕೆಗಳಿಗೆ ಪುತ್ತಿಲ ಪರಿವಾರ, ರಾಜಕೀಯ ಮಾತೃಪಕ್ಷಕ್ಕೆ:ಪುತ್ತಿಲ ಪರಿವಾರದ ಕಾರ್ಯಕರ್ತರ ಜಿಲ್ಲಾ ಸಮಾಲೋಚನಾ ಸಮಾವೇಶದಲ್ಲಿ ನಿರ್ಣಯ

0

ಪುತ್ತೂರು:ವಿಧಾನಸಭಾ ಚುನಾವಣೆಯ ಬಳಿಕದ ಬೆಳವಣಿಗೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಮತ್ತು ಪುತ್ತಿಲ ಪರಿವಾರದ ಬಿಜೆಪಿ ಸೇರ್ಪಡೆ ವಿಚಾರ ಸಹಿತ ಮುಂದಿನ ನಡೆಯ ಕುರಿತು ಚರ್ಚಿಸಿ ಜಿಲ್ಲೆಯಾದ್ಯಂತ ಯೋಜನೆ ರೂಪಿಸಿ, ಸಂಘಟನೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಅಭಿಪ್ರಾಯದೊಂದಿಗೆ ಮಹತ್ವದ ನಿರ್ಣಯ ಕೈಗೊಳ್ಳಲು ಪುತ್ತಿಲ ಪರಿವಾರದ ದೇವದುರ್ಲಭ ಕಾರ್ಯಕರ್ತರ ಜಿಲ್ಲಾ ಸಮಾಲೋಚನಾ ಸಮಾವೇಶ ಫೆ.5ರಂದು ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ನಡೆದಿದೆ.ಪುತ್ತಿಲ ಪರಿವಾರ ಮಾತೃ ಪಕ್ಷದೊಂದಿಗೆ ವಿಲೀನಗೊಳ್ಳಲು ಮೂರು ಮಹತ್ವದ ನಿರ್ಣಯವನ್ನು ಸಮಾವೇಶದಲ್ಲಿ ಕೈಗೊಳ್ಳಲಾಗಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷತೆಯನ್ನು ಅರುಣ್ ಕುಮಾರ್ ಪುತ್ತಿಲ ಅವರಿಗೆ ನೀಡಬೇಕು.ಅಧ್ಯಕ್ಷ ಸ್ಥಾನ ಕೊಟ್ಟರೆ ಮಾತ್ರ ಮಾತೃಪಕ್ಷದೊಂದಿಗೆ ಪುತ್ತಿಲ ಪರಿವಾರ ವಿಲೀನಗೊಳಿಸುವುದು.ಮುಂದೆ ಪುತ್ತಿಲ ಪರಿವಾರವನ್ನು ಸಾಮಾಜಿಕ ಚಟುವಟಿಕೆಗಳಿಗೆ ಮಾತ್ರ ತೊಡಗಿಸಿಕೊಂಡು ರಾಜಕೀಯದಲ್ಲಿ ಮಾತೃಪಕ್ಷದೊಂದಿಗೆ ಕೆಲಸ ಮಾಡಲಿದೆ.ಒಂದು ವೇಳೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸ್ಥಾನ ಕೊಡುವಲ್ಲಿ ಮಾತೃಪಕ್ಷ ವಿಫಲವಾದರೆ ಮುಂದಿನ ಎಲ್ಲಾ ಚುನಾವಣೆಯಲ್ಲೂ ಪುತ್ತಿಲ ಪರಿವಾರ ಪ್ರತ್ಯೇಕವಾಗಿ ಸ್ಪರ್ಧಿಸುವ ಕುರಿತು ಪುತ್ತಿಲ ಪರಿವಾರ ಸಮಾವೇಶದಲ್ಲಿ ಮಹತ್ವದ ಮೂರು ನಿರ್ಣಯ ಕೈಗೊಂಡಿದೆ.ಈ ನಿರ್ಣಯವನ್ನು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರು ಅಧ್ಯಕ್ಷೀಯ ಭಾಷಣದಲ್ಲಿ ಘೋಷಣೆ ಮಾಡಿದರು.

ಅರುಣಣ್ಣನ ಲೀಡರ್‌ಶಿಪ್ ಇಲ್ಲದೆ ಜನ ಸೇರಿಸಲು ಪುತ್ತೂರಿನಲ್ಲಿ ಯಾರಿಗೂ ಸಾಧ್ಯವಿಲ್ಲ: ಪುತ್ತಿಲ ಪರಿವಾರದ ವಕ್ತಾರ, ಧಾರ್ಮಿಕ ಚಿಂತಕ ಶ್ರೀಕೃಷ್ಣ ಉಪಾಧ್ಯಾಯ ಅವರು ಸಂಘಟನಾ ಸಂದೇಶ ನೀಡಿ ಮಾತನಾಡಿ, ಅರುಣಣ್ಣನಿಗೆ ಹುದ್ದೆ ಯಾಕೆ ಬೇಕೆಂದು ಒತ್ತಡ ಹಾಕುವುದು ಯಾಕೆ ಗೊತ್ತಾ,ಇಲ್ಲಿ ಬಹುದೊಡ್ಡ ಪಡೆ ಇದೆ.ಪುತ್ತೂರಿನ ಚುನಾವಣೆ ಹೈಲೆಟ್ ಆದದ್ದು ಯಾಕೆಂದರೆ ಅರುಣಣ್ಣನಿಗೆ ಸಿಕ್ಕಿದ ಟೀಮ್ ಬೇರೆ ಯಾರಿಗೂ ಸಿಗಲಿಲ್ಲ ಎಂದರು.ನಾನು ಎಷ್ಟೋ ಸಮಾವೇಶಕ್ಕೆ ಹೋಗಿದ್ದೇನೆ.ಆದರೆ ಅರುಣ್ ಕುಮಾರ್ ಪುತ್ತಿಲ ಅವರ ಲೀಡರ್‌ಶಿಪ್ ಇಲ್ಲದೆ ಪುತ್ತೂರಿನಲ್ಲಿ ಜನ ಸೇರಿಸಲು ಯಾರಿಗೂ ಸಾಧ್ಯವಿಲ್ಲ.ಇವತ್ತು ಹೈಕಮಾಂಡ್‌ಗೆ ಅರುಣಣ್ಣ ಒಳಗೆ ಬರಲು ಮನಸ್ಸಿದೆ.ಆದರೆ ಪುತ್ತೂರು ಬಿಜೆಪಿಯ ಸ್ಥಾಪಿತ ಬೆರಳೆಣಿಕೆಯ ಜನರ ಅಡ್ಡಿಯಿದೆ.ಇವತ್ತು ಹಿಂದುತ್ವ ಗೆಲ್ಲುವುದು ಅನಿವಾರ್ಯವಾಗಿದ್ದರೆ ಸ್ವಪ್ರತಿಷ್ಟೆಗಿಂತ ಧರ್ಮವೇ ಮುಖ್ಯವಾಗಿದ್ದರೆ, ಎಲ್ಲ ಅಹಂಕಾರಗಳಿಗಿಂತ ನರೇಂದ್ರ ಮೋದಿ ಮತ್ತೆ ಗೆದ್ದು ಭಾರತದ ಅಡಳಿತ ಚುಕ್ಕಾಣಿ ಹಿಡಿಯುವುದು ಮುಖ್ಯ ಆಗಿದ್ದರೆ ಎಲ್ಲರ ಹಿತಾಸಕ್ತಿಗಳನ್ನು ಬದಿಗಿಟ್ಟು ಅರುಣಣ್ಣನನ್ನು ಒಳಗೆ ಕರೆದುಕೊಳ್ಳದೆ ಬೇರೆ ವಿಧಿಯೇ ಇಲ್ಲ.ಅದೇ ರೀತಿ ನರೇಂದ್ರ ಮೋದಿಯನ್ನು ಕಳೆದುಕೊಳ್ಳಲು ಪುತ್ತಿಲ ಪರಿವಾರ ಯಾವತ್ತೂ ಬಯಸುವುದಿಲ್ಲ.ಇದು ನನ್ನ ವೈಯಕ್ತಿಕ ಮಾತಲ್ಲ. ಪುತ್ತಿಲ ಪರಿವಾರದ ಅಧಿಕೃತ ಮಾಹಿತಿ.ಅವರೆಲ್ಲರ ಮಾತಿಗೆ ಶಬ್ದ ತೀರ್ಮಾನ ಮಾತ್ರ ಕೊಡುತ್ತೇನೆ.ನರೇಂದ್ರ ಮೋದಿಗಾಗಿ ಕೆಲಸ ಮಾಡಲು ಈ ಕ್ಷಣದಲ್ಲಿ ನಮ್ಮೆಲ್ಲರ ನೆತ್ತರು ಕಾಯುತ್ತಿದೆ ಎಂದ ಅವರು,ನಾನು ಅನ್ಯಾಯವನ್ನು ಪ್ರತಿಭಟಿಸಿ ಭಾಷಣ ಮಾಡಿದ ಬಳಿಕ ತೀರ್ಮಾನ ಕೈಗೊಂಡರೆ ನಿಮ್ಮ ಹಾಗೆ ಜೀವಮಾನ ಉಸಿರು ಇರುವ ತನಕ ಅರುಣಣ್ಣನ ಕೈ ಬಿಡುವುದಿಲ್ಲ ಎಂದರು.

ಜಿಲ್ಲೆಯಲ್ಲಿ ಪ್ರೀತಿ ವಿಶ್ವಾಸದ ರಾಜಕಾರಣ ಮಾಡಿದ್ದು ಅರುಣ್ ಕುಮಾರ್ ಪುತ್ತಿಲ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರು ಮಾತನಾಡಿ ಇವತ್ತು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಮಾತ್ರ ಅಪೇಕ್ಷಿತರನ್ನಾಗಿ ಕರೆದಿದ್ವೆದೆಏ.ಒಂದು ಬೂತ್‌ಗೆ ಕೇವಲ 5 ಆಮಂತ್ರಣವನ್ನು ಮಾತ್ರ ಕೊಟ್ಟಿದ್ದೇವೆ.ಬೂತ್ ಅಧ್ಯಕ್ಷರ ಕಾರ್ಯಕ್ರಮ ಮಾಡಿದ್ದಕ್ಕೆ ಇವತ್ತು ಕೊಟೇಚಾ ಹಾಲ್ ತುಂಬಿ ತುಳುಕಿದೆ.ಎಲ್ಲಿಯಾದರೂ ನಾವು ಹಿತೈಷಿಗಳನ್ನು, ಮತದಾರರ ಸಭೆಯನ್ನು ಇಲ್ಲಿ ಮಾಡುತ್ತಿದ್ದರೆ ಕೊಟೇಚಾ ಹಾಲ್‌ನ ಪರಿಸ್ಥಿತಿ ಏನಾಗುತ್ತಿತ್ತು.ಕೊಟೇಚಾ ಹಾಲ್ ಸಾಕಾಗುತ್ತಿರಲಿಲ್ಲ.ಇವತ್ತು ರಾಜ್ಯದಲ್ಲಿ ಪುತ್ತಿಲ ಪರಿವಾರ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.ಎಲ್ಲಾ ಗ್ರಾಮ, ವಿಧಾನಸಭಾ ಕ್ಷೇತ್ರಗಳಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದೇವೆ.ಅರುಣ್ ಕುಮಾರ್ ಪುತ್ತಿಲ ಅವರು ಮಾತೃಪಕ್ಷದ ಹಿರಿಯರು, ಸಂಘದ ಹಿರಿಯರ ಮೇಲೆ ಒಂದೇ ಒಂದು ಅಗೌರವದ ಮಾತನ್ನಾಡಿಲ್ಲ.ಸಂಘದ ಹಿರಿಯರು, ಪಕ್ಷದ ಹಿರಿಯರೊಂದಿಗೆ ಸಂಪೂರ್ಣ ಗೌರವವಿದೆ. ಮಾತೃ ಪಕ್ಷದ ಜವಾಬ್ದಾರಿಯುತ ಕೆಲವು ವ್ಯಕ್ತಿಗಳು ಮತ್ತು ನಾವು ಸಂಧಾನ ಮುಗಿಸಿ ಮನೆಗೆ ಬಂದಾಗ, ಸಂಧಾನದಲ್ಲಿ ಏನೇನು ಮಾತುಕತೆ ನಡೆದಿದೆಯೋ ಅದು ಮರುದಿನ ಪತ್ರಿಕೆಯಲ್ಲಿ ಬರುತ್ತಿತ್ತು.ಗೌಪ್ಯದ ಸಂಧಾನದ ವಿಷಯ ಗೊತ್ತಾದ ಬಳಿಕ ಪ್ರತಿಕ್ರಿಯೆಗಳು ಸಾಕಷ್ಟು ಬಂದಿವೆ.ಇವತ್ತು ನಮ್ಮ ನಿರ್ಣಯವನ್ನು ನಿಮ್ಮ ಸಮ್ಮುಖದಲ್ಲಿಡಲು ಸಮಯ ಬಂದಿದೆ ಎಂದ ಅವರು ಮೂರು ನಿರ್ಣಯವನ್ನು ಸಭೆಗೆ ಮಂಡಿಸಿದರು.ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನವನ್ನು ಮಾತೃಪಕ್ಷದ ಜವಾಬ್ದಾರಿಯುತ ವ್ಯಕ್ತಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ನೀಡಿದಲ್ಲಿ ಮಾತೃಪಕ್ಷದ ಜೊತೆ ಪುತ್ತಿಲ ಪರಿವಾರವನ್ನು ವಿಲೀನಗೊಳಿಸಲು ನಾವು ಸಿದ್ಧ ಎಂದರು.ಇದಕ್ಕೆ ಸಭೆಯಲ್ಲಿ ಚಪ್ಪಾಳೆಯ ಸಮ್ಮತಿ ಸಿಕ್ಕಿತು.ನಾವೆಲ್ಲ ಬಿಜೆಪಿ ಸಂಘ ಪರಿವಾರ, ನಮ್ಮ ಹಿತೈಷಿ, ಮತದಾರರು ಬಿಜೆಪಿಯವರೇ ಆದರೂ ಕಳೆದ 10 ತಿಂಗಳಿನಿಂದ ಮಾತುಕತೆ ನಡೆಯುತ್ತಿದೆ.ಸಂಧಾನ ಪ್ರಕ್ರಿಯೆಗಳು ಮಾತ್ರ ನಡೀತಾ ಇದೆ.ಆದರೆ ಅರುಣಣ್ಣನಿಗೆ ಹುದ್ದೆ ಮಾತ್ರ ಘೋಷಣೆಯಾಗುತ್ತಿಲ್ಲ.ಒಂದು ವೇಳೆ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷತೆಯನ್ನು ನಮ್ಮೆಲ್ಲರ ನಾಯಕನಿಗೆ ನೀಡಲು ವಿಫಲವಾದರೆ ಜಿಲ್ಲೆಯಲ್ಲೇ ದೊಡ್ಡ ರಾಜಕೀಯ ವಿಪ್ಲವ ನಡೆಯಲಿದೆ.ಜಿಲ್ಲೆಯ ರಾಜಕೀಯದಲ್ಲಿ ಸುನಾಮಿ ಬರಲಿ, ಬಿರುಗಾಳಿ ಬರಲಿ ಭೂಕಂಪವೇ ಆಗಲಿ.ನಾವು ಮುಂದೆ ಬರುವ ಎಲ್ಲಾ ಚುನಾವಣೆಗಳಲ್ಲಿ ನಾವು ಸ್ಪರ್ಧಿಸಿಯೇ ಸಿದ್ಧ.ಹಿಂದುತ್ವ ಮತ್ತು ಕೇಸರಿ ಧರ್ಮರಕ್ಷಣೆಗಾಗಿ ಪುತ್ತಿಲ ಪರಿವಾರ ಯಾವತ್ತೂ ಸಿದ್ದ ಎಂದು ಘೋಷಣೆ ಮಾಡುತ್ತೇನೆ ಎಂದ ಅವರು, ಅಧ್ಯಕ್ಷ ಸ್ಥಾನವನ್ನು ಮಾತೃಪಕ್ಷ ಜವಾಬ್ದಾರಿಯುತ ವ್ಯಕ್ತಿ ಅರುಣ್ ಕುಮಾರ್ ಅವರಿಗೆ ನೀಡಿದಲ್ಲಿ ಪುತ್ತಿಲ ಪರಿವಾರ ವಿಲೀನವಾಗುತ್ತದೆ.ಒಂದು ವೇಳೆ ಅಧ್ಯಕ್ಷತೆಯನ್ನು ನೀಡಲು ವಿಫಲವಾದರೆ ಈ ಜಿಲ್ಲೆಯಲ್ಲಿ ದೊಡ್ಡ ರಾಜಕೀಯ ಸಂಘಟನೆಯಾಗಿ ಮುಂದೆ ಬರುವ ಎಲ್ಲಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದೇವೆ ಎಂದರು.

ಪರಿವಾರ ಸಂಘಟನೆ ಇಟ್ಟ ಹೆಜ್ಜೆಗಳಿಗೆ ಕಟಿಬದ್ದನಾಗಿರುತ್ತೇನೆ: ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ, ನಮ್ಮೆಲ್ಲ ಚಿಂತನೆಗಳಿಗೆ ತಾರ್ಕಿಕವಾದ ಅಂತ್ಯ ಕೊಡಬೇಕೆಂಬ ಯೋಚನೆಯ ಅಡಿಯಲ್ಲಿ ಸಮಾಲೋಚನಾ ಸಮಾವೇಶ ಆಯೋಜಿಸಲಾಗಿದೆ.ಹಿಂದು ಸಮಾಜಕ್ಕೆ ಸಮಸ್ಯೆ ಆಗಿರುವ ಸಂದರ್ಭದಲ್ಲಿ ಕಾರ್ಯಕರ್ತರ ಜೊತೆಗೆ ಸ್ಪಂದನೆ ನೀಡಿದ ಪರಿಣಾಮ ಇವತ್ತು 224ಬೂತ್‌ಗಳ ಪದಾಧಿಕಾರಿಗಳು ನೂರು ಶೇಕಡ ಭಾಗವಹಿಸುವ ಮೂಲಕ ಒಂದು ಪಕ್ಷಕ್ಕೆ ಸಂದೇಶ ನೀಡುವ ಕೆಲಸ ಆಗಿದೆ.ಸಣ್ಣ ಅಂತರದಿಂದ ಸೋಲನ್ನು ಅನುಭವಿಸಿ ಮತದಾರರ ಭಾವನೆಗಳಿಗೆ ಶಕ್ತಿಕೊಡುವ ನಿಟ್ಟಿನಲ್ಲಿ ಪ್ರತಿಪಕ್ಷದ ನೆಲೆಯಲ್ಲಿ ಸಾಮಾಜಿಕವಾದ ನ್ಯಾಯಕೊಡುವ ಕಾರ್ಯ ಮಾಡುತ್ತಾ ಬಂದಿದ್ದೇವೆ.ಹಿಂದು ವಿರೋಧಿ ನೀತಿಗಳು, ಧಾರ್ಮಿಕ ಅಪಮಾನ, ಹಿಂದು ಕಾರ್ಯಕರ್ತರ ಮೇಲೆ ಕೇಸು ದಾಖಲು, ಗಡಿಪಾರು ಮಾಡುವ ಕೆಲಸ ಕಾಂಗ್ರೆಸ್ ಸರಕಾರ ಮಾಡುತ್ತಿದೆ.ಸಾಮಾಜಿಕ ಬದ್ದತೆಯ ಜೊತೆಗೆ ಕರ್ನಾಟಕದಲ್ಲಿ ಸರಕಾರ ನಡೆಸಬೇಕಾದ ಕಾಂಗ್ರೆಸ್ ಅಧಿಕಾರಕ್ಕಾಗಿ ಮತಾಂಧ ಓಲೈಕೆ ಮಾಡುತ್ತಿದೆ.ಈ ಹಿಂದು ವಿರೋಧಿ ಕಾಂಗ್ರೆಸ್ ಸರಕಾರದ ಅಧಿಕಾರದ ಶವಪೆಟ್ಟಿಗೆಗೆ ಅಂತಿಮ ಮೊಳೆಯನ್ನು ಹಾಕುವ ಸಂಕಲ್ಪ ನಾವು ಮಾಡಬೇಕಾಗಿದೆ.ಅದಕ್ಕಾಗಿ ಜಾಗೃತ ಸಮಾಜ ನಿರ್ಮಾಣದ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ ಎಂದರು.ಸ್ವಜನಪಕ್ಷಪಾತ, ಸ್ವಪ್ರತಿಷ್ಠೆಯ ಮೂಲಕ ಹಿಂದುಸಮಾಜದ ಕಾರ್ಯಕರ್ತರಿಗೆ ನೋವು ಮಾಡಿದಾಗ ಕಾರ್ಯಕರ್ತರ ಭಾವನೆ ಅರಿತು ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ.ಚುನಾವಣೆಯಲ್ಲಿ ಸಿಕ್ಕಿರುವ 62,400 ಮತಗಳು ಇವತ್ತು 85ಸಾವಿರ ಮತಗಳ ತನಕ ಎತ್ತರಕ್ಕೆ ಹೋಗಿದೆ ಎಂಬ ವಿಶ್ವಾಸವಿದೆ.ಮುಂದಿನ ದಿನ ಪ್ರತಿಪಕ್ಷ ಮಾಡಬೇಕಾದ ಕೆಲಸ ಕಾರ್ಯದ ಸಿದ್ಧತೆಯನ್ನು ಜತೆಗೆ ಸಂಘಟನೆಗೆ ಶಕ್ತಿಯನ್ನು ಕೊಡುವ ನಿಟ್ಟನಲ್ಲಿ ಸಂಕಲ್ಪ ಮಾಡಬೇಕು.ನಾನು ಪಕ್ಷವನ್ನು ಎತ್ತರಕ್ಕೆ ಏರಿಸಿದ ಕಾರ್ಯಕರ್ತರ ಜೊತೆಗೆ ಇರಬೇಕೆಂದು ಸ್ಪರ್ಧಿಸಿದ್ದೆ ಹೊರತು ಅಧಿಕಾರದ ಫಲಾಪೇಕ್ಷೆಗೆ ಸ್ಪರ್ಧಿಸಿಲ್ಲ ಎಂದು ಹೇಳಿದ ಪುತ್ತಿಲ,ಮಾತೃಪಕ್ಷದಲ್ಲಿ ಪರಿವಾರದ ಪ್ರಸನ್ನ ಕುಮಾರ್ ಮಾರ್ತ ಮತ್ತು ಉಮೇಶ್ ಕೊಡಿಬೈಲು ಅವರಿಗೆ ಸ್ಥಾನಮಾನ ಕೊಡಿ ನಾನು ಅವರೊಂದಿಗೆ ನಿಂತು ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ.ಚುನಾವಣೆ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ನನಗೆ 3 ಕೋಟಿ ರೂ.ನೀಡಿದ್ದಾರೆ ಎಂಬ ಅಪವಾದ ಮಾಡಲಾಗಿದೆ.ನಾನು ಯಾವುದೇ ಪಕ್ಷದಿಂದ ಒಂದು ರೂಪಾಯಿಯಾದರೂ ಸ್ವೀಕಾರ ಮಾಡಿದ್ದೇನೆ ಎಂದಾಗಿದ್ದರೆ ಇದನ್ನು ಯಾವ ಕ್ಷಣದಲ್ಲಿ ಬೇಕಾದರೂ ಮಹಾಲಿಂಗೇಶ್ವರ ದೇವರ ನಡೆಗೆ ಬಂದು ಪ್ರಮಾಣ ಮಾಡಲು ಸಿದ್ದನಿದ್ದೇನೆ ಎಂದರು.ಸಂಘದ ತತ್ವ ಸಿದ್ದಾಂತ.ನಾವೆಲ್ಲ ಹಿಂದುಗಳು ಕಾರ್ಯಕರ್ತರ ಅಪೇಕ್ಷೆಯಂತೆ ಯಾವತ್ತೂ ಕೂಡಾ ಕಾರ್ಯಕರ್ತರ ಭಾವನೆಗಳಿಗೆ ನೋವನ್ನು ಯಾವತ್ತೂ ಮಾಡಲಾರೆ.ಒಂದು ಕಾರ್ಯಕರ್ತನಿಗೆ ಆಗುವ ನೋವು ನನ್ನ ನೋವು.ಕಾರ್ಯಕರ್ತರ ಜೊತೆಗೆ ಮುಂದಿನ ದಿನ ಕ್ರಿಯಾಶೀಲರಾಗಿ ಹಿಂದುತ್ವವನ್ನು ಪ್ರತಿಪಾದನೆ ಮಾಡುತ್ತೇನೆ ಎಂದ ಅವರು ಪರಿವಾರ ಸಂಘಟನೆಗಳ ಪದಾಧಿಕಾರಿಗಳು ಯಾವ ಯೋಚನೆಯಲ್ಲಿ ಹೆಜ್ಜೆ ಇಡುತ್ತಾರೋ ಅವರೆಲ್ಲರ ಯೋಚನೆಗಳಿಗೆ ಕಟಿಬದ್ದನಾಗಿ ಅವರು ಹೇಳಿರುವ ಕೆಲಸ ಕಾರ್ಯ ನಿರ್ವಹಿಸಲು ಬದ್ದನಿದ್ದೇನೆ ಎಂದರು.

ಕಾರ್ಯಕರ್ತರ ಅಭಿಪ್ರಾಯಗಳು: ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸುನಿಲ್ ಬೋರ್ಕರ್ ಅವರು ಮಾತನಾಡಿ ಸಂಘಟನೆ ಕಾರ್ಯಚಟುವಟಿಕೆಯ ವಿವರಣೆ ಕೇಳಿದರು.ಮಹೇಂದ್ರ ವರ್ಮ ಅವರು ಮಾತನಾಡಿ ನಾವು ಬಿಜೆಪಿಗೆ ಸೇರಿದರೆ ಪುತ್ತಿಲ ಪರಿವಾರದ ಮುಂದಿನ ವ್ಯವಸ್ಥೆ ಏನೆಂದು ಪ್ರಶ್ನಿಸಿದರು.ಸುಳ್ಯದ ಕಾರ್ಯಕರ್ತರೊಬ್ಬರು ಮಾತನಾಡಿ ಅರುಣಣ್ಣ ಬಿಜೆಪಿಗೆ ಸೇರುವಾಗ ಕ್ಷಮೆ ಕೇಳಬೇಕೆಂದು ಹೇಳಿರುವುದು ಹೌದಾ ಎಂದು ಪ್ರಶ್ನಿಸಿದರು.ಗಿರೀಶ್‌ರಾಜ್ ಮುಕ್ವೆ ಅವರು ಮಾತನಾಡಿ ವಿಲೀನ ಆಗಲು ವಿರೋಧ ಇದೆಯೇ ಎಂದು ಪ್ರಶ್ನಿಸಿದರು.ವಿವೇಕ್ ರೈ ಅವರು ಮಾತನಾಡಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಮಾತೃಪಕ್ಷದಿಂದ ಲೋಕಸಭಾ ಟಿಕೆಟ್ ಘೋಷಣೆ ಮಾಡಬೇಕೆಂದರು.ವಿಜಯಪ್ರಕಾಶ್ ಎಂಬವರು ಮಾತನಾಡಿ ಕಾಂಗ್ರೆಸ್‌ನಿಂದ ಅರುಣ್ ಪುತ್ತಿಲರಿಗೆ ಹಣ ಪಾವತಿಯಾಗಿರುವುದು ಹೌದಾ ಎಂದು ಪ್ರಶ್ನಿಸಿದರು.ಅನ್ನಪೂರ್ಣ ಅವರು ಮಾತನಾಡಿ ಲೋಕಸಭಾ ಚುನಾವಣೆಗೆ ಪರಿವಾರದ ನಡೆಯ ಕುರಿತು ಪ್ರಶ್ನಿಸಿದರು.ರಾಜರಾಮ್ ಭಟ್ ಅವರು ಮಾತನಾಡಿ ಅರುಣಣ್ಣನ ಆಶಯಗಳಿಗೆ ಪೂರಕವಾಗಿ ಸ್ಪಂದಿಸುತ್ತೇನೆ ಎಂದರು.ಸುರೇಶ್ ಪ್ರಭು ಅವರು ಮಾತನಾಡಿ ಬಿಜೆಪಿಯಿಂದ ನಿಮಗೆ ಮೂರು ಶರತ್ತು ವಿಧಿಸಿದ್ದಾರೆಂದು ಱಸುದ್ದಿೞಯಲ್ಲಿ ಪ್ರಕಟಗೊಂಡ ಕುರಿತು ಪ್ರಸ್ತಾಪಿಸಿದರು.ಇನ್ನೂ ಹಲವು ಕಾರ್ಯಕರ್ತರು ಅಭಿಪ್ರಾಯ, ಸಲಹೆ ನೀಡಿದರು.ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಅರುಣ್ ಕುಮಾರ್ ಪುತ್ತಿಲ, ಪ್ರಸನ್ನ ಕುಮಾರ್ ಮಾರ್ತ ಅವರು ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಕೊಟೇಚಾ,ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಶ್ರೀನಿವಾಸ ಕಲ್ಯಾಣೋತ್ಸವ ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್, ಪುತ್ತಿಲ ಪರಿವಾರದ ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಿಕಾಪ್ರಸಾದ್, ವಕೀಲ ರಾಜೇಶ್ ಕೆ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಉಷಾ ಬೆಳ್ಳಿಪ್ಪಾಡಿ ಪ್ರಾರ್ಥಿಸಿದರು.ಪುತ್ತಿಲ ಪರಿವಾರದ ಕಾರ್ಯದರ್ಶಿ ರವಿ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪುತ್ತಿಲ ಪರಿವಾರದ ನಗರ ಅಧ್ಯಕ್ಷ ಅನಿಲ್ ತೆಂಕಿಲ, ನವೀನ್ ಕುಮಾರ್ ಪಂಜಳ ಕಾರ್ಯಕ್ರಮ ನಿರೂಪಿಸಿದರು.ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು ಅವರು ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಲೆಕ್ಕಪತ್ರವನ್ನು ಕಾರ್ಯಕ್ರಮದ ನಡುವೆ ಮಂಡಿಸಿದರು.ಸಭೆಯ ಆರಂಭದಲ್ಲಿ ಭಾರತಮಾತೆಯ ಮತ್ತು ಸಂಘದ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಕೊಟೇಚಾ ದೀಪ ಪ್ರಜ್ವಲಿಸಿದರು.

718 ವಾಟ್ಸಪ್ ಗ್ರೂಪ್- ಜಿಲ್ಲೆಯಲ್ಲಿ 4.23ಲಕ್ಷ ಕಾರ್ಯಕರ್ತರು
ನಗರ ಮತ್ತು ಗ್ರಾಮಾಂತರವನ್ನು ಒಂದು ಮಂಡಲ ಮಾಡಿ ಅದರ ಅಧ್ಯಕ್ಷ ಸ್ಥಾನ ಕೊಡಬೇಕೆಂದು ನಮ್ಮ ಪರಿವಾರದ ಪದಾಧಿಕಾರಿಗಳು, ಹಿತೈಷಿಗಳು ಒಂದಷ್ಟು ತೀರ್ಮಾನ ಕೈಗೊಂಡಿದ್ದಾರೆ.ಈ ತೀರ್ಮಾನಕ್ಕೆ ನಾನು ಬದ್ಧ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 718 ವಾಟ್ಸಪ್ ಗ್ರೂಪ್‌ಗಳಲ್ಲಿ 4.23 ಲಕ್ಷ ಮಂದಿ ಕಾರ್ಯಕರ್ತರು ನಮ್ಮ ವಾಟ್ಸಪ್ ಗ್ರೂಪ್‌ನಲ್ಲಿ ಇದ್ದಾರೆ.ಚುನಾವಣೆಯಲ್ಲಿ ಗೆಲ್ಲಲು ನಮಗೇನೂ ದೊಡ್ಡ ಸಂಗತಿಯ ವ್ಯವಸ್ಥೆ ಆಗಬೇಕಾಗಿಲ್ಲ.ಆದರೆ ಇವತ್ತು ಸಂಘ ಪರಿವಾರದಲ್ಲಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಕ್ಷಣವನ್ನು ಪಡೆದಿzವೆ.ಮಾತೃಪಕ್ಷಕ್ಕಾಗಿ ರಕ್ತವನ್ನು ಬೆವರು ಮಾಡಿ ದುಡಿದವರಿದ್ದಾರೆ.ನಮ್ಮ ಪರಿವಾರದ ತೀರ್ಮಾನವನ್ನು ಪುರಸ್ಕರಿಸಿ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಶಾಂತಿ ಸಹೋದರತೆ, ಪ್ರೀತಿ ವಿಶ್ವಾಸ ರಾಷ್ಟ್ರದ ಏಕತೆಯ ದೃಷ್ಟಿಕೋನದಿಂದ ಮಾತೃಪಕ್ಷದವರು ಸೂಕ್ತವಾದ ನಿರ್ಧಾರ ಮಾಡಬೇಕು.ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಆಪಾದನೆ ಮಾಡಿದ್ದಾರೆ.ಆದರೆ ನಾನು ಯಾರೇ ಹಿರಿಯರಿಗೂ ಕೆಳಮಟ್ಟದ ಭಾಷೆಯಲ್ಲಿ ಮಾತನಾಡಿಲ್ಲ.ಕಾರ್ಯಕರ್ತರ ಭಾವನೆಗಳಿಗೆ ಪೂರಕವಾದ ನಿರ್ಧಾರವನ್ನು ಮಾತೃಪಕ್ಷದವರು ತೆಗೆದುಕೊಳ್ಳದಿದ್ದರೆ ಮುಂದಿನ ದಿನ ಪುತ್ತೂರಿನ ನಡೆಯು ವಿದ್ಯಮಾನ ಇಡೀ ಕರ್ನಾಟಕದಲ್ಲಿ ನಡೆಯುವುದಕ್ಕೆ ಸಿದ್ಧತೆ ಆಗುತ್ತಿದೆ ಎಂದು ಸೂಕ್ಷ್ಮತೆಯನ್ನು ಅರಿಯಬೇಕು- ಅರುಣ್ ಕುಮಾರ್ ಪುತ್ತಿಲ

ತುಂಬಿ ತುಳುಕಿದ ಸಭೆ
ಸಮಾಲೋಚನಾ ಸಭೆಯಲ್ಲಿ ಕೊಟೇಚಾ ಹಾಲ್ ಪೂರ್ತಿ ಕಾರ್ಯಕರ್ತರಿಂದ ತುಂಬಿ ತುಳುಕಿತ್ತು..ಸಭೆಗೆ ಆಸನಗಳು ಭರ್ತಿಯಾಗಿ ಬಹುತೇಕ ಮಂದಿ ನಿಂತುಕೊಂಡೇ ಕಾರ್ಯಕ್ರಮ ವೀಕ್ಷಣೆ ಮಾಡಿದರು. ಕಾರ್ಯಕರ್ತರು ಕೇಸರಿ ಶಲ್ಯವನ್ನು ಎತ್ತಿ ತಿರುಗಿಸುವ ಮೂಲಕ ಅರುಣ್ ಕುಮಾರ್ ಪುತ್ತಿಲರ ನಡೆಗೆ ಬೆಂಬಲ ಸೂಚಿಸಿದರು.ಸಭೆಯ ಆರಂಭದಲ್ಲಿ ಅರುಣ್ ಕುಮಾರ್ ಪುತ್ತಿಲ ಸಭೆಗೆ ಎಂಟ್ರಿ ಆದಾಗ ಕಾರ್ಯಕರ್ತರು ಪುತ್ತಿಲರಿಗೆ ಜೈಕಾರ ಘೋಷಣೆ ಕೂಗಿದರು.



ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ
ಸಂಘದಿಂದ ನೋವಾಗಿ ಹೊರಗೆ ಹೋದ ಪ್ರತಿಯೊಬ್ಬರೂ ಬೈದಿದ್ದಾರೆ.ಆದರೆ ಅರುಣ್ ಕುಮಾರ್ ಪುತ್ತಿಲ ಯಾರಿಗಾದರೂ ಇಲ್ಲಿನ ತನಕ ಬೈದಿರುವ ಉದಾಹರಣೆಯೇ ಇಲ್ಲ. ಇವತ್ತು ಈ ಅನ್ಯಾಯದ ಪರಂಪರೆ ಪುತ್ತೂರಿನಲ್ಲಿ ಎಂಡ್ ಆಗಬೇಕು.ರಾಮಾಯಣದಲ್ಲಿ ಭರತ ಮತ್ತು ರಾಮ, ರಾಜಕೀಯದಲ್ಲಿ ಅಡ್ವಾಣಿ, ವಾಜಪೇ ಅವರು ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ.ಆದರೆ ಕಳೆದ 35 ವರ್ಷದಿಂದ ಕೆಲಸ ಮಾಡಿದ ಅರುಣ್ ಕುಮಾರ್ ಪುತ್ತಿಲ ಒಳಗೆ ಬಂದರೆ ನಮ್ಮ ಕುರ್ಚಿಗೆ ಪೆಟ್ಟು ಬೀಳುತ್ತದೆ ಎಂದು ಹೇಳುತ್ತಿದ್ದಾರೆ.ಪುತ್ತೂರಿನ ಒಂದು, ಎರಡು, ಮೂರು, ನಾಲ್ಕು ಮಂದಿ ಮಾತ್ರ ಅಡ್ಡಿಪಡಿಸುತ್ತಿದ್ದಾರೆ.ಅದು ಬಿಟ್ಟರೆ 32 ಸಾವಿರದಲ್ಲಿ ಯಾರದ್ದೂ ಅಡ್ಡಿಯಿಲ್ಲ.ಈ ಸ್ವಾರ್ಥಿಗಳ ಮನವೊಲಿಸಿ ನಾವು ಒಂದಾಗಬೇಕು.ನಾವು ಒಂದಾಗಲು ಸಿದ್ದರಿದ್ದೆವೆ.ಯಾರನ್ನೂ ನಾವು ಬೈದಿಲ್ಲ.ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ.ಇದು ಪುತ್ತಿಲ ಪರಿವಾರದ ಅಧಿಕೃತ ತೀರ್ಮಾನ.ನರೇಂದ್ರ ಮೋದಿಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಬೇಕೆಂಬ ಮನಸ್ಸಿದೆ.ಇದಕ್ಕೆ ನಾವೇ ಮುಹೂರ್ತ ಫಿಕ್ಸ್ ಮಾಡುತ್ತೇವೆ.ಇವತ್ತಿನಿಂದ ಮೂರು ದಿನದೊಳಗೆ ಅಡ್ಡಿಪಡಿಸುವ ನಾಲ್ಕು ಮಂದಿಯನ್ನು ಸರಿ ಮಾಡಿ.ಇವತ್ತಿನಿಂದ ಮೂರು ದಿನದೊಳಗೆ ಪುತ್ತೂರು ರಾಜಕೀಯ ಸರಿಯಾಗಲಿಲ್ಲ ಎಂದಾದರೆ ಪುತ್ತಿಲ ಪರಿವಾರ ಒಂದು ಸಾಮಾಜಿಕ ಸಂಘಟನೆ ಅಂತ ನಾವು ಒಪ್ಪಿಕೊಂಡಿದ್ದರೂ ಮುಂದೆ ಅನಿವಾರ್ಯವಾಗಿ ರಾಜಕೀಯ ಕ್ಷೇತ್ರಕ್ಕೆ ಟೊಂಕ ಕಟ್ಟಿ ನಿಲ್ಲುವುದು ಗ್ಯಾರೆಂಟಿ- ಶ್ರೀಕೃಷ್ಣ ಉಪಾಧ್ಯಾಯ

LEAVE A REPLY

Please enter your comment!
Please enter your name here