ರಾಮಕುಂಜ: ಸ್ಕೂಟರ್ ಹಾಗೂ ಟಿಪ್ಪರ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊಯಿಲ ಕೆ.ಸಿ.ಫಾರ್ಮ್ ಗೇಟ್ ಬಳಿ ಫೆ.7ರಂದು ಬೆಳಿಗ್ಗೆ ನಡೆದಿದೆ.
ಸ್ಕೂಟರ್ ಸವಾರ, ರಾಮಕುಂಜ ಗ್ರಾಮದ ನೀರಾಜೆ ನಿವಾಸಿ ಆದಂ ಎನ್.,(52ವ.)ಎಂಬವರು ಗಂಭೀರ ಗಾಯಗೊಂಡವರಾಗಿದ್ದಾರೆ. ಇವರು ತನ್ನ ಸ್ಕೂಟರ್ (ಕೆಎ21 ವೈ7245)ನಲ್ಲಿ ನೀರಾಜೆ ಕಡೆಯಿಂದ ಬಂದು ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಗೆ ಹೋಗುತ್ತಿರುವಾಗ ಕೊಯಿಲ ಕೆ.ಸಿ ಫಾರ್ಮ್ ಗೇಟ್ ಬಳಿ ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ (ಕೆಎ ಸಿ4448) ಚಾಲಕನು ರಸ್ತೆಯ ತೀರಾ ಬಲಬದಿಗೆ ಟಿಪ್ಪರ್ ಲಾರಿಯನ್ನು ಚಲಾಯಿಸಿಕೊಂಡು ಬಂದು ಡಿಕ್ಕಿಯನ್ನುಂಟು ಮಾಡಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಸ್ಕೂಟರ್ ಸವಾರ ಆದಂರವರು ಸ್ಕೂಟರ್ ವಾಹನ ಸಮೇತ ಟಿಪ್ಪರ್ ಲಾರಿ ಅಡಿಗೆ ಬಿದ್ದು ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡಿರುವ ಆದಂ ಅವರು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಘಟನೆ ಬಗ್ಗೆ ನೀರಾಜೆ ನಿವಾಸಿ ಶರೀಫ್ ಎಂಬವರು ನೀಡಿದ ದೂರಿನಂತೆ ಟಿಪ್ಪರ್ ಲಾರಿ ಚಾಲಕನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ 21/2024ಕಲಂ:279.337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.