ನಾವು ತಿರಸ್ಕರಿಸಿದ್ದ ಪಿಡಿಓ ಪುರಸ್ಕರಿಸುವಂತೆ ಮಾಡಿದ್ದಾರೆ..! – ವರ್ಗಾವಣೆಗೊಂಡ ನೆ.ಮುಡ್ನೂರು ಗ್ರಾ.ಪಂ ಪಿಡಿಓರನ್ನು ಬೀಳ್ಕೊಟ್ಟು ಗುಣಗಾನ ಮಾಡಿದ ಸದಸ್ಯರು

0

ಪುತ್ತೂರು: ನೆ.ಮುಡ್ನೂರು ಗ್ರಾಮ ಪಂಚಾಯತ್‌ನಲ್ಲಿ ಕಳೆದ 6 ತಿಂಗಳಿನಿಂದ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಸೀಂ ಗಂಧದ್ ಅವರು ವರ್ಗವಣೆಗೊಂಡಿದ್ದು ಅವರಿಗೆ ಗ್ರಾ.ಪಂ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಫೆ.8ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಅವರಿಗೆ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಗ್ರಾ.ಪಂ ಅಧ್ಯಕ್ಷೆ ಫೌಝಿಯಾ ಮಾತನಾಡಿ ಪಿಡಿಓ ವಸೀಂ ಗಂಧದ ಅವರು ನಮ್ಮ ಪಂಚಾಯತ್‌ಗೆ ಪಿಡಿಓ ಆಗಿ ಬರುತ್ತಾರೆ ಎನ್ನುವ ಮಾಹಿತಿ ನಮಗೆ ಸಿಕ್ಕಿದಾಗ ನಾವು ವಿರೋಧಿಸಿದ್ದೆವು, ವಯಸ್ಸಲ್ಲಿ ಸಣ್ಣವರಾದ ಕಾರಣ ಅನನುಭವಿ ಇರಬಹುದು, ಅಭಿವೃದ್ಧಿ ಕಾರ್ಯಕ್ಕೆ ತೊಂದರೆಯಾಗಬಹುದು ಎಂದು ಭಾವಿಸಿ ಅವರು ಇಲ್ಲಿಗೆ ಬರುವುದು ಬೇಡ, ನಮ್ಮಲ್ಲಿಗೆ ಬೇರೆ ಪಿಡಿಓ ಕೊಡಿ, ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರಲ್ಲಿ ನಾವು ಕೇಳಿಕೊಂಡಿದ್ದೆವು, ಆಗ ಕಾರ್ಯನಿರ್ವಹಣಾಧಿಕಾರಿಯವರು, ನೀವು ಒಂದು ತಿಂಗಳು ಇವರ ಕೆಲಸ ನೋಡಿ ಮತ್ತೆ ಬೇಡ ಎಂದಾದರೆ ಬದಲಾಯಿಸುವ ಎಂದು ಹೇಳಿದ್ದರು, ಆದರೆ ವಸೀಂ ಗಂಧದ ಅವರು ಪಿಡಿಓ ಆಗಿ ಬಂದು ಎರಡು ವಾರದಲ್ಲೇ ಅದ್ಭುತ ಕಾರ್ಯವೈಖರಿ ಮೂಲಕ ಸದಸ್ಯರ ಹಾಗೂ ಗ್ರಾಮಸ್ಥರ ಮನ ಗೆದ್ದಿದ್ದರು, ಗ್ರಾ.ಪಂನ ಅಭಿವೃದ್ಧಿಗೆ ಇನ್ನಿಲ್ಲದ ವೇಗ ನೀಡಿದ್ದರು ಎಂದು ಶ್ಲಾಘಿಸಿದರು.

ಉಪಾಧ್ಯಕ್ಷ ರಾಮ ಮೇನಾಲ ಮಾತನಾಡಿ ಪಿಡಿಓ ವಸೀಂ ಗಂಧದ ಅವರು ಇಲ್ಲಿಂದ ಹೋಗುವುದು ಅತೀವ ಬೇಸರ ಆಗುತ್ತಿದೆ. ಏಕೆಂದರೆ ಅವರು ನಮ್ಮ ಗ್ರಾ.ಪಂ ಪಿಡಿಓ ಆಗಿ ಬಂದ ಬಳಿಕ ಪಂಚಾಯತ್‌ನ ಎಲ್ಲ ಕೆಲಸ ಕಾರ್ಯಗಳು ಬಹಳ ವೇಗವಾಗಿ ಆಗುತ್ತಿತ್ತು. ಜನರ ಬಗ್ಗೆ ಅವರಿಗೆ ಕಾಳಜಿ ಇತ್ತು. ವಯಸ್ಸಲ್ಲಿ ಸಣ್ಣವರಾದರೂ ಕೂಡಾ ಅವರ ಕಾರ್ಯವೈಖರಿ ಅತ್ಯುತ್ತಮವಾಗಿತ್ತು. ಇಂತಹ ಪಿಡಿಓಗಳಿದ್ದರೆ ಯಾವುದೇ ಪಂಚಾಯತ್ ಅಭಿವೃದ್ಧಿ ಹೊಂದಲು ಸುಲಭ ಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸದಸ್ಯ ಚಂದ್ರಹಾಸ ಮಾತನಾಡಿ ಪಿಡಿಓ ವಸೀಂ ಗಂಧದ ಅವರ ಬಗ್ಗೆ ಬಹಳ ಹೆಮ್ಮೆಯಿದೆ. ಏಕೆಂದರೆ ಅವರು ಮಾಡುತ್ತಿದ್ದ ಕೆಲಸ ಬಹಳ ಅಚ್ಚುಕಟ್ಟಾಗಿತ್ತು. ಅವರು ಕೇವಲ ಆರು ತಿಂಗಳು ಇಲ್ಲಿ ಪಿಡಿಓ ಆಗಿದ್ದರೂ ಕೂಡಾ ಆರು ವರ್ಷ ಮಾಡುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಪಂಚಾಯತ್‌ಗೆ ನಾವು ಯಾರನ್ನೇ ಕಳುಹಿಸಿದರೂ ಅವರ ಕೆಲಸವನ್ನು ಕ್ಷಿಪ್ರವಾಗಿ ಮಾಡಿಕೊಡುತ್ತಿದ್ದುದಲ್ಲದೇ ಬೇರೆ ಏನಾದರೂ ಕೆಲಸ ಆಗಬೇಕಿದ್ದರೆ ಈಗಲೇ ಹೇಳಿ ಇನ್ನೊಮ್ಮೆ ಪಂಚಾಯತ್‌ಗೆ ಬರುವುದು ಬೇಡ ಎಂದು ಹೇಳುತ್ತಿದ್ದರು. ರೋಗಿಯೊಬ್ಬರಿಗೆ ರಕ್ತದ ಅವಶ್ಯಕತೆ ಬಂದಾಗ ರಕ್ತ ಕೊಡುವವರು ಯಾರಾದರೂ ಇದ್ದಾರಾ ಎಂದು ನಾನು ಪಿಡಿಓ ಅವರಲ್ಲಿ ಕೇಳಿದಾಗ ನಾನೇ ರಕ್ತ ಕೊಡುತ್ತೇನೆ ಎಂದು ಹೇಳಿ ಸ್ವತಃ ಪುತ್ತೂರಿಗೆ ಹೋಗಿ ರಕ್ತದಾನ ಮಾಡಿದ್ದರು ಎಂದು ಅವರು ಗುಣಗಾನ ಮಾಡಿದರು.

ಸದಸ್ಯ ರಮೇಶ್ ರೈ ಸಾಂತ್ಯ ಮಾತನಾಡಿ ಒಳ್ಳೆಯ ಪಿಡಿಓ ಎಂಬ ಹೆಸರು ಗಳಿಸಿ ವಸೀಂ ಗಂಧದ ಇಲ್ಲಿಂದ ನಿರ್ಗಮಿಸುತ್ತಿದ್ದಾರೆ. ಅವರು ಬಂದ ಬಳಿಕ ಪಂಚಾಯತ್‌ನ ಕೆಲಸಗಳು ಕ್ಪಿಪ್ರ ಗತಿಯಲ್ಲಿ ಆಗುವುದನ್ನು ನೋಡಿದ್ದೇವೆ, ಅವರಿಗೆ ಉಜ್ವಲ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಸದಸ್ಯ ಇಬ್ರಾಹಿಂ ಕೆ ಮಾತನಾಡಿ ವಸೀಂ ಗಂಧದ ಅವರು ನಮ್ಮ ಪಂಚಾಯತ್‌ಗೆ ಪಿಡಿಓ ಆಗಿ ಬರುವುದು ನಮಗೆ ಇಷ್ಟವಿರಲಿಲ್ಲ. ಆದರೆ ಅವರು ಬಂದ ಬಳಿಕ ಅವರು ಏನು ಎನ್ನುವುದು ತಿಳಿಯಿತು. ಅವರಿಗೆ ಕೆಲಸದಲ್ಲಿರುವ ನಿಯ್ಯತ್ತು, ನಿಷ್ಠೆ ಮತ್ತು ಬಡವರ ಪರವಾದ ಅವರ ಕಾಳಜಿ ಮೆಚ್ಚಲೇಬೇಕು. ನಾವು ಅಂದುಕೊಂಡದ್ದು ತಪ್ಪು ಎಂದು ಅವರು ಕೆಲಸದ ಮೂಲಕ ಸಾಬೀತುಪಡಿಸಿದ್ದರು ಎಂದು ಪ್ರಶಂಸಿಸಿದರು.
ಗ್ರಾ.ಪಂ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here