ಹವ್ಯಾಸಿ ಯಕ್ಷಗಾನ ಕಲಾವಿದ ಬಾಬು ಆಚಾರ್ಯ ಬೆದ್ರಾಡಿ ನಿಧನ

0

ನೆಲ್ಯಾಡಿ: ಬಲ್ಯ ಗ್ರಾಮದ ಗೋಣಿಗುಡ್ಡೆ ಬೆದ್ರಾಡಿ ನಿವಾಸಿ, ಹವ್ಯಾಸಿ ಯಕ್ಷಗಾನ ಕಲಾವಿದ ಬಾಬು ಆಚಾರ್ಯ (87ವ.)ರವರು ಫೆ.12ರಂದು ಬೆಳಿಗ್ಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಾಬು ಆಚಾರ್ಯ ಅವರನ್ನು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾದರು. ಬಾಬು ಆಚಾರ್ಯ ಅವರು ಮೂಲತಃ ಕೃಷಿಕರಾಗಿದ್ದು ಯಕ್ಷಗಾನದ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಶ್ರೀ ವಿನಾಯಕ ಯಕ್ಷಗಾನ ಮಂಡಳಿ ರಾಮನಗರ ಬಲ್ಯ-ನೆಲ್ಯಾಡಿ ಇದರ ಸಕ್ರಿಯ ಸದಸ್ಯರಾಗಿದ್ದರು. ತಾಳಮದ್ದಳೆಯಲ್ಲಿ ಹವ್ಯಾಸಿ ಭಾಗವತರಾಗಿ ಹಾಗೂ ಹಾಸ್ಯ ಕಲಾವಿದರಾಗಿ ತೊಡಗಿಸಿಕೊಳ್ಳುತ್ತಿದ್ದರು. ಚಿಮಿಣಿ ದೀಪದ ಬೆಳಕಿನಲ್ಲಿ ಶಾಲೆ, ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಭಾಗವಹಿಸಿದ ಅನುಭವಗಳನ್ನು ಅವರು ಯುವ ಕಲಾವಿದರೊಂದಿಗೆ ಹಂಚಿಕೊಂಡು ಮಾರ್ಗದರ್ಶನ ನೀಡುತ್ತಿದ್ದರು. ಆಕಾಶವಾಣಿಯಲ್ಲಿ ಪ್ರಸಾರವಾಗುವ ಯಕ್ಷಗಾನ ತಾಳಮದ್ದಳೆಯನ್ನು ಆಲಿಸುವ ಮತ್ತು ಸ್ಥಳೀಯವಾಗಿ ನಡೆಯುವ ತಾಳಮದ್ದಳೆಯಲ್ಲಿ ಭಾಗವಹಿಸುವ ಕಲಾಭಿಮಾನಿಯಾಗಿದ್ದರು. ಇವರ ಕಲಾ ಸೇವೆಗಾಗಿ ದೊಂತಿಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಮತ್ತು ವಿನಾಯಕ ಯಕ್ಷಗಾನ ಮಂಡಳಿ ಬಲ್ಯ ಇದರ ವತಿಯಿಂದ ಇವರನ್ನು ಗೌರವಿಸಲಾಗಿತ್ತು. ಮೃತರು ಪತ್ನಿ ರಾಧಮ್ಮ, ಪುತ್ರಿಯರಾದ ಯಶೋಧ, ರಾಜೀವಿ ಹಾಗೂ ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here