ರಾಮಕುಂಜ: ರಾಮಕುಂಜ ಹಾಗೂ ಕೊಯಿಲ ಗ್ರಾಮ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ನಿರಂತರವಾಗಿ ಜಾನುವಾರು ಕಳ್ಳತನ ಆಗುತ್ತಿರುವ ಬಗ್ಗೆ ದೂರುಗಳು ವ್ಯಕ್ತವಾಗಿದೆ. ಇದಕ್ಕೆ ಪುಷ್ಠಿ ಎಂಬಂತೆ ಫೆ.9ರಂದು ಒಂದೇ ದಿನ ರಾತ್ರಿ ಬೆಳಗಾಗುವುದರೊಳಗಾಗಿ 8 ಜಾನುವಾರು ಕಳವು ಆಗಿರುವುದು ವರದಿಯಾಗಿದೆ.
ಕೊಯಿಲ ಗ್ರಾಮದ ದೇವಳ ಬಳಿ ನಿವಾಸಿಗಳಾದ ಇಬ್ಬು ಎಂಬವರಿಗೆ ಸೇರಿದ 2 ಹೋರಿ, ರಜಾಕ್ ಎಂಬವರ 1 ಹೋರಿ, ಅಬೂಬಕ್ಕರ್ ಎಂಬವರ 2 ಹೋರಿ, ಮೋನು ಎಂಬವರಿಗೆ ಸೇರಿದ 1 ಹಸು, ಆತೂರು ಪೇಟೆ ನಿವಾಸಿಯೋರ್ವರ 1 ಹಸು, 1 ಹೋರಿ ಸೇರಿದಂತೆ ಕೊಯಿಲ ಮತ್ತು ಆತೂರು ಪರಿಸರದಿಂದ 8ಕ್ಕೂ ಅಧಿಕ ಜಾನುವಾರು ಕಳವು ಆಗಿರುವುದಾಗಿ ಹೇಳಲಾಗಿದೆ. ತಿಂಗಳ ಹಿಂದೆ ಕೊಯಿಲ ಗ್ರಾಮದ ಗಂಡಿಬಾಗಿಲು ಪರಿಸರದಿಂದಲೂ ಜಾನುವಾರು ಕಳವು ಆಗಿದ್ದು, ಈ ಪ್ರದೇಶದಲ್ಲಿ ನಿರಂತರವಾಗಿ ಜಾನುವಾರು ಕಳ್ಳತನ ನಡೆಯುತ್ತಿರುವುದಾಗಿ ಗ್ರಾಮಸ್ಥರು ದೂರಿಕೊಂಡಿದ್ದಾರೆ. ಕೆಲ ದಿನಗಳಿಂದ ಆತೂರು ಪರಿಸರದಲ್ಲಿ ರಾತ್ರಿ ಹೊತ್ತಿನಲ್ಲಿ ಪಿಕ್‌ಆಪ್ ವಾಹನವೊಂದು ಓಡಾಟ ನಡೆಸುತ್ತಿದ್ದು, ಯಾರೋ ಕಳ್ಳರು ಜಾನುವಾರುಗಳನ್ನು ಕಳವು ಮಾಡಿ ಕಸಾಯಿಖಾನೆಗಳಿಗೆ ಸಾಗಾಟ ಮಾಡಿರುವ ಸಾಧ್ಯತೆ ಬಗ್ಗೆ ಸಂಶಯ ವ್ಯಕ್ತವಾಗಿದೆ.