*ಆಚಾರ ವಿಚಾರಗಳಲ್ಲಿ ಮರಾಟಿ ಸಮಾಜ ಮಾದರಿ – ಸಂಜೀವ ಮಠಂದೂರು
*ಪ್ರತಿಭಾನ್ವಿತರನ್ನು ಬೆಳಕಿಗೆ ತರುವ ಕಾರ್ಯ – ಅಶೋಕ್ ನಾಯ್ಕ್
*ಮರಾಟಿ ಸಮಾಜ ಹೆಮ್ಮೆಪಡುವ ಕ್ರೀಡಾಕೂಟವಾಗಿದೆ – ಪಿ.ಜಿ. ಜಗನ್ನೀವಾಸ ರಾವ್
*ಮರಾಟಿ ಸಮಾಜವನ್ನು ಯಾರೂ ಮೇಲಕ್ಕೆತ್ತುತ್ತಿಲ್ಲ – ಸತೀಶ್
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟ ಫೆ. 11 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.
ಆಚಾರ ವಿಚಾರಗಳಲ್ಲಿ ಮರಾಟಿ ಸಮಾಜ ಮಾದರಿ – ಸಂಜೀವ ಮಠಂದೂರು:
ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ’ಒಂದು ಸಮಾಜ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಮುಂದಿನ ಸಮಾಜಕ್ಕೆ ಒಂದು ಸಂದೇಶವನ್ನು ಕೊಡುವ ಕೆಲಸವನ್ನು ಈ ಕ್ರೀಡಾಕೂಟದ ಮೂಲಕ ಮರಾಟಿ ಸಂರಕ್ಷಣಾ ಸಮಿತಿ ಮಾಡುತ್ತಿದೆ. ಆಧುನಿಕ ಸಮಾಜದಲ್ಲಿ ಒಂದಾಗಿರುವ ಮರಾಟಿ ಸಮಾಜ ಸ್ವಾಭಿಮಾನದಿಂದ ಬೆಳೆಯುವ ಕೆಲಸವಾಗಿದೆ. ಸಾಧಕರ ಗುರುತಿಸಿ ಬೆಳೆಸುವ, ನಿರ್ಮಿಸುವ ಕಾರ್ಯವನ್ನು ಸಮಿತಿ ಮಾಡುತ್ತಿದೆ. ಮಾನಸಿಕ ಚೈತನ್ಯ ವೃದ್ಧಿಗಾಗಿ ಕ್ರೀಡಾಕೂಟ ಸಹಕಾರಿಯಾಗಿದೆ. ಸಂಘಟನಾತ್ಮಕವಾಗಿ ಬಲಪ್ರದರ್ಶನಕ್ಕೂ ಇದು ವೇದಿಕೆಯಾಗಿದೆ ಎಂದರು.
ಪ್ರತಿಭಾನ್ವಿತರನ್ನು ಬೆಳಕಿಗೆ ತರುವ ಕಾರ್ಯ – ಅಶೋಕ್ ನಾಯ್ಕ್:
ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಶೋಕ್ ನಾಯ್ಕ್ ಕೆದಿಲ ಮಾತನಾಡಿ, ಕಳೆದ ಐದು ವರ್ಷಗಳಿಂದ ಸಮುದಾಯದ ಕಷ್ಟಕಾರ್ಪಣ್ಯಗಳಿಗೆ, ಆಶೋತ್ತರಗಳಿಗೆ ಸ್ಪಂದಿಸುತ್ತಾ ಬಂದಿರುವ ನಮ್ಮ ಸಂಘಟನೆಯು ಕ್ರೀಡೆ, ಸಾಂಸ್ಕೃತಿಕವಾಗಿ ಸಮಾಜದ ಯುವಕರನ್ನು ಬೆಳೆಸುವ ಕಾರ್ಯವನ್ನು ನಮ್ಮ ಸಮಿತಿ ಮಾಡುತ್ತಿದೆ. ಪ್ರತಿಭಾನ್ವಿತರನ್ನು ಬೆಳಕಿಗೆ ತರುವ ಕೆಲಸ ಮಾಡಲಾಗುತ್ತಿದೆ. ಎಲ್ಲರಿಗೂ ಅವಕಾಶ ಸಿಗಬೇಕೆಂಬುದು ಸಾಕಷ್ಟು ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಮರಾಟಿ ಸಮಾಜ ಹೆಮ್ಮೆಪಡುವ ಕ್ರೀಡಾಕೂಟವಾಗಿದೆ – ಪಿ.ಜಿ. ಜಗನ್ನೀವಾಸ ರಾವ್
ಅಂಕಣವನ್ನು ಉದ್ಘಾಟಿಸಿದ ನಗರಸಭಾ ಸದಸ್ಯ ಪಿ.ಜಿ. ಜಗನ್ನೀವಾಸ ರಾವ್ ರವರು ’ಮರಾಟಿ ಸಮಾಜ ಹೆಮ್ಮೆಪಡುವ ಕೆಲಸ ಅಮೈ ಮಹಾಲಿಂಗ ನಾಯ್ಕ ರವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಾಗ ಆಗಿದೆ. ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಸರಿದೂಗುವ ರೀತಿಯಲ್ಲಿ ಈ ಸಂಘಟನೆಯಿಂದ ಕ್ರೀಡಾಕೂಟ ಆಯೋಜನೆಯಾಗಿದೆ. ಕೇಂದ್ರ ಸರಕಾರದಿಂದ ಎಸ್‌ಟಿ ಸಮಾಜಕ್ಕೆ ಅನೇಕ ಸವಲತ್ತುಗಳಿವೆ. ಅವೆಲ್ಲವನ್ನು ಪಡೆಯುವಲ್ಲಿಯೂ ಸಮಾಜ ಕಾರ್ಯತತ್ಪರರಾಗಬೇಕೆಂದು ಕರೆ ನೀಡಿ ಶುಭ ಹಾರೈಸಿದರು.
ಮರಾಟಿ ಸಮಾಜವನ್ನು ಯಾರೂ ಮೇಲಕ್ಕೆತ್ತುತ್ತಿಲ್ಲ – ಸತೀಶ್
ಮುಖ್ಯ ಅತಿಥಿಯಾಗಿ, ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದ ಎಂಆರ್‌ಪಿಎಲ್‌ನ ಎಚ್ ಆರ್ ಜನರಲ್ ಮ್ಯಾನೇಜರ್ ಸತೀಶ್ ಮಾತನಾಡಿ, ಮರಾಟಿ ಸಮಾಜವನ್ನು ಮೇಲಕ್ಕೆತ್ತುವ ಕಾರ್ಯವನ್ನು ಯಾರೂ ಮಾಡುತ್ತಿಲ್ಲ. ಆದರೆ ಜಿಲ್ಲಾ ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸುವ ಮೂಲಕ ಮರಾಟಿ ಸಂರಕ್ಷಣಾ ಸಮಿತಿ ಉತ್ತಮ ಕಾರ್ಯ ಮಾಡಿದೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲೆಂದು ಶುಭ ಹಾರೈಸಿದರು.
ಪುಣಚ ಜೈ ಮರಾಠಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಬಾಬು ನಾಯ್ಕ ರವರು ಮಾತನಾಡಿ ’ಮರಾಟಿ ಸಮಾಜವು ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸಿ ಮುಂದೆ ಬರಬೇಕು. ಸಮಾಜದ ಕೀರ್ತಿಯನ್ನು ದೇಶವ್ಯಾಪಿ ಹರಡಿಸುವ ಕೆಲಸವಾಗಬೇಕು. ವಿದ್ಯಾರ್ಥಿ ವಿದ್ಯಾರ್ಥಿನಿಯರೂ ಪ್ರತಿಭಾನ್ವಿತಾಗಬೇಕೆಂದು ಹೇಳಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಪುತ್ತೂರು ಕೆನರಾ ಬ್ಯಾಂಕ್ ಮ್ಯಾನೇಜರ್ ಬಾಲಕೃಷ್ಣ ನಾಯ್ಕ, ವಿಶೇಷ ಆಹ್ವಾನಿತರಾಗಿ ಉಪ್ಪಿನಂಗಡಿಯ ಕಂದಾಯ ನಿರೀಕ್ಷಕ ಚಂದು ನಾಯ್ಕ, ಸಮಿತಿಯ ಕ್ರೀಡಾ ಸಂಚಾಲಕ ಯಶವಂತ ನಾಯ್ಕ್ ಮಂಡೆಕೋಲು ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ತರಲಾದ ಕ್ರೀಡಾಜ್ಯೋತಿಯನ್ನು ಸಮಾಜದ ಕ್ರೀಡಾಪಟು, ಅಂತಾರಾಷ್ಟ್ರೀಯ ತ್ರೋಬಾಲ್ ತಂಡದ ಪ್ರತಿನಿಧಿ ಯಶ್ವಿತಾ ಬೆಳ್ಳೂರುರವರು ಮಾಜಿ ಶಾಸಕರಿಗೆ ಹಸ್ತಾಂತರಿಸಿದರು.
ಸಂಚಾಲಕ ಶ್ರೀಧರ ನಾಯ್ಕ, ತಿರುಮಲೇಶ್ವರ ಪೆರುವಾಯಿ, ಆನಂದ ನಾಯ್ಕ ಪೆರುವಾಯಿ, ವೀಣಾಲತಾ ಮಂಗಳೂರು, ಉಪಾಧ್ಯಕ್ಷ ಬಾಲಕೃಷ್ಣ, ಯಶವಂತ, ಜ್ಯೋತಿ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಕುಶಾಲಪ್ಪ ನಾಯ್ಕ ಅತಿಥಿಗಳನ್ನು ಗೌರವಿಸಿದರು.
ಸಮಿತಿಯ ಕಾರ್ಯದರ್ಶಿ ವಿಮಲಾ ದೈತೋಟರವರು ಸ್ವಾಗತಿಸಿ, ಸಮಿತಿಯ ಜಿಲ್ಲಾ ಸಂಚಾಲಕ ಶ್ರೀಧರ ನಾಯ್ಕ ಮುಂಡೋವುಮೂಲೆ ವಂದಿಸಿದರು. ರವಿಕಿರಣ್ ಸೂರಂಬೈಲ್ ಮತ್ತು ಉಷಾ ಕಿರಣ್ ಕೆ.ಎಸ್ ರವರು ಕಾರ್ಯಕ್ರಮ ನಿರೂಪಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಹುಮಾನ ವಿತರಿಸಿದರು. ದ.ಕ ಜಿಲ್ಲಾ ಮರಾಟ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ ಅಧ್ಯಕ್ಷತೆ ವಹಿಸಿದ್ದರು. ರೈಲ್ವೇ ಇಲಾಖೆ ನಿವೃತ್ತ ಅಧಿಕಾರಿ ಮಹಾಲಿಂಗ ನಾಯ್ಕ, ಪೆರ್ಲ ಶಾರದಾ ಮರಾಟಿ ಬೋರ್ಡಿಂಗ್ ಮಹಿಳಾ ಘಟಕದ ಅಧ್ಯಕ್ಷೆ ವಾರಿಜ, ಮೂಡಬಿದರೆ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ರಾಮಚಂದ್ರ ಕೆಂಬಾರೆ, ಮಾಜಿ ಯೋಧ ಪುಟ್ಟ ನಾಯ್ಕ ಹರಿಹರ, ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಜಿಲ್ಲಾ ಕ್ರೀಡಾ ಸಂಚಾಲಕ ಯಶವಂತ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೊಳ್ತಿಗೆ ಮರಾಟಿ ಸಮಾಜ ಸೇವಾ ಸಂಘದ ಸಂಘಟನಾ ಕಾರ್ಯದರ್ಶಿ ಸುಬ್ಬಯ್ಯ ನಾಐಕ, ವಿಟ್ಲ ಮರಾಟಿ ಯುವ ವೇದಿಕೆ ಅಧ್ಯಕ್ಷ ಉಮೇಶ್ ನಾಯ್ಕ, ಅಡ್ಯನಡ್ಕ ಮಹಮ್ಮಾಯಿ ಮರಾಟಿ ಸಮಾಜ ಸೇವಾ ಸಂಘದ ಮಾಜಿ ಕಾರ್ಯದರ್ಶಿ ಸುರೇಶ್ ಕೋಡಂದೂರು, ಪುತ್ತೂರು ಕೆನರಾ ಬ್ಯಾಂಕ್ ವ್ಯವಸ್ಥಾಪಕ ಬಾಲಕೃಷ್ಣ ನಾಯ್ಕ, ಬೆಂಗಳೂರು ಓರಿಯಂಟಲ್ ಇನ್ಸೂರೆನ್ಸ್‌ನ ನಿವೃತ್ತ ಮ್ಯಾನೇಜರ್ ಎ.ವಿ ನಾಯ್ಕ, ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಈಶ್ವರ ನಾಯ್ಕ ನರಿಮೊಗರು, ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರು ನಾಯ್ಕ, ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆಯ ಭರತ್ ನಾಯ್ಕ, ಕಡಬ ಮೆಸ್ಕಾಂನ ಸಹಾಯಕ ಇಂಜಿನಿಯರ್ ಸತ್ಯನಾರಾಯಣ ನಾಯ್ಕ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು, ರಾಜ್ಯ ರಾಷ್ಟ್ರ ಮಟ್ಟದಲ್ಲಿ ವಿವಿಧ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅಂಗನವಾಡಿ ಪುಟಾಣಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ಕಿರಿಯರಿ ಜಾಗು ಹಿರಿಯರ ವಿಭಾಗದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಕಬಡ್ಡಿಯಲ್ಲಿ 14 ತಂಡ, ಕ್ರಿಕೆಟ್‌ನಲ್ಲಿ 34 ತಂಡ, ಹಗ್ಗ ಜಗ್ಗಾಟದಲ್ಲಿ 26ತಂಡ ಹಾಗೂ ತ್ರೋಬಾಲ್‌ನಲ್ಲಿ 8 ತಂಡಗಳು ಭಾಗವಹಿಸಿದ್ದವು. ಶಿವಾಜಿ ಫ್ರೆಂಡ್ಸ್ ಉಜಿರೆ(ಪ್ರ)ಮಹಮ್ಮಾಯಿ ಫ್ರೆಂಡ್ಸ್(ದ್ವಿ) ಉಪ್ಪಿನಂಗಡಿ, ಬೆಸ್ಟ್ ರೈಡರ್ ಆಗೊ ಸೂರ್ಯ, ಬೆಸ್ಟ್ ಡಿಫೆಂಡರ್- ಜಗದೀಶ್, ಆಲ್ ರೌಂಡರ್ ಆಗಿ ಕಿರಣ್ ಕಕ್ಯ ಪದವು, ಕ್ರಿಕೆಟ್ ಪಂದ್ಯಾಟನಲ್ಲಿ ಮಹಮ್ಮಾಯಿ ಮರಾಟಿ ಸಂಘ ,ಸಾಜ(ಪ್ರ) ನಾಯ್ಕ್ ಬ್ರದರ್ಸ್, ಪದ್ರೆಂಗಿ(ದ್ವಿ) ಬೆಸ್ಟ್ ಬೌಲರ್ ಆಗಿ ಅರುಣ್ ನಾಯ್ಕ್, ಬೆಸ್ಟ್ ಬ್ಯಾಟ್ಸ್ ಮೆನ್ ಆಗಿ ರಂಜಿತ್, ಸರಣಿ ಶ್ರೇಷ್ಟ ಆಗಿ ನಿರಂಜನ ಪುರುಷರ ಹಗ್ಗಜಗ್ಗಾಟದಲ್ಲಿ ಶಿವಾಜಿ ಫ್ರೆಂಡ್ಸ್ – ಉಜಿರೆ(ಪ್ರ) ಮಾತೃಶ್ರೀ ಫ್ರೆಂಡ್ಸ್ – ಪುತ್ತೂರು(ದ್ವಿ), ಮಹಿಳೆಯರ ಹಗ್ಗಜಗ್ಗಾಟ ಮರಾಟಿ ಸಂಘ – ಕೊಳ್ತಿಗೆ (ಪ್ರ) ಮರಾಟಿ ಸಮಾಜ ಸೇವಾ ಸಂಘ -ಮೂಡಬಿದ್ರೆ(ದ್ವಿ)
ತ್ರೋ ಬಾಲ್-ಟ್ಟೀಮ್ ಪಟ್ಟೆ(ಪ್ರ) ಚೈತ್ರ ಮತ್ತು ತಂಡ(ದ್ವಿ) ಬಹುಮಾನ ಪಡೆದುಕೊಂಡಿದೆ.