ನಾಪತ್ತೆಯಾಗಿದ್ದ ಕಬ್ಬಿಣದ ಪ್ಲೇಟ್‌ಗಳು ಪತ್ತೆ-ಕಳವಾಗಿರುವ ಬಗ್ಗೆ ಪ್ರಕರಣ ದಾಖಲು

0

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಗುತ್ತಿಗೆದಾರ ಸಂಸ್ಥೆಯಾದ ಕೆಎನ್‌ಆರ್‌ಗೆ ಸೇರಿದ ಕಬ್ಬಿಣದ 40 ಪ್ಲೇಟ್‌ಗಳು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.

ಬಜತ್ತೂರು ಗ್ರಾಮದ ಕಾಂಚನ ಕ್ರಾಸ್ ಬಳಿಯಿರುವ ಕೆಎನ್‌ಆರ್ ಸಂಸ್ಥೆಯ ಘಟಕ ದಿಂದ 2023ರ ನವೆಂಬರ್ 10 ಸಂಜೆ 6 ಗಂಟೆಯಿಂದ ನ.11ರ ಬೆಳಗ್ಗೆ 8 ಗಂಟೆಯ ನಡುವೆ ಕಬ್ಬಿಣದ 40 ಪ್ಲೇಟ್‌ಗಳು ಕಳವಾಗಿತ್ತು. ಇವುಗಳು ಕಾಣೆಯಾಗಿರುವ ಬಗ್ಗೆ ಕೆಎನ್‌ಆರ್ ಕನ್‌ಸ್ಟ್ರಕ್ಷನ್ ಲಿಮಿಟೆಡ್‌ನ ಪಿಆರ್‌ಒ ನಂದ ಕುಮಾರ್ ಆರ್. ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ 2023ರ ನ.18ರಂದು ದೂರು ನೀಡಿದ್ದರು. ಬಳಿಕ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಅಲ್ಲಿನ ಪೊಲೀಸರು ಕಳ್ಳರನ್ನು ಹಿಡಿದಾಗ ಅವರ ಬಳಿ ಈ ಪ್ಲೇಟ್‌ಗಳು ಪತ್ತೆಯಾಗಿತ್ತು.

ಈ ವಿಚಾರ ತಿಳಿದು ನಂದ ಕುಮಾರ್ ಅವರು 2024ರ ಫೆ.9ರಂದು ಬೆಳ್ತಂಗಡಿ ಠಾಣೆಗೆ ತೆರಳಿ ಅಲ್ಲಿನ ಪೊಲೀಸರು ವಶಪಡಿಸಿಕೊಂಡ ವಸ್ತುಗಳನ್ನು ನೋಡಿದ್ದು, ಅದು ಇವರ ಸಂಸ್ಥೆಯಿಂದಲೇ ಕಾಣೆಯಾದ ಪ್ಲೇಟ್‌ಗಳೆಂದು ತಿಳಿದು ಬಂತು. ಬಳಿಕ ಉಪ್ಪಿನಂಗಡಿ ಪೊಲೀಸರಿಗೆ ಕಳವು ಪ್ರಕರಣದ ಬಗ್ಗೆ ನಂದ ಕುಮಾರ್ ಅವರು ದೂರು ನೀಡಿದ್ದು, ಈ ಕಬ್ಬಿಣದ ಪ್ಲೇಟ್‌ಗಳನ್ನು ಕಾಮಗಾರಿಗಾಗಿ ಅಲ್ಲಿಂದ ಬೇರೆ ಬೇರೆ ಕಡೆ ತೆಗೆದುಕೊಂಡು ಹೋಗುತ್ತಿದ್ದು, ಆದ್ದರಿಂದ ಅದು ಕಾಣೆಯಾಗಿರಬಹುದು ಎಂದು ತಪ್ಪು ತಿಳುವಳಿಕೆಯಿಂದ  ಅಂದು ಕಾಣೆಯಾಗಿರುವ ಬಗ್ಗೆ ದೂರು ನೀಡಲಾಗಿದೆ. ಆದರೆ ಈಗ ಇದು ಕಳವಾಗಿರುವುದಾಗಿದ್ದು, ಆದ್ದರಿಂದ ಕಳವು ದೂರು ದಾಖಲಿಸಿದ್ದಾರೆ. ಕಳವಾದ ಕಬ್ಬಿಣದ ಪ್ಲೇಟ್‌ಗಳ ಮೌಲ್ಯ ಒಂದು ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here