ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕುಂದಾಪುರದ ಬೆಟಗೇರಿ ನಿವಾಸಿ ರಾಕೇಶ್ ಬಿ.ರವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿದೆ ಸಂತ್ರಸ್ತೆಯ ಪರವಾಗಿ ಹೈಕೋರ್ಟ್ ವಕೀಲ ಅರಿಯಡ್ಕ ಏಳ್ನಾಡುಗುತ್ತು ಹರೀಶ್ ಟಿ. ಭಂಡಾರಿಯವರು ವಾದಿಸಿದ್ದರು. ಕುಮಟಾದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರಾಗಿ ಸೇವೆ ಸಲ್ಲಿಸುತ್ತಿದ್ದ ರಾಕೇಶ್ ಬಿ. ಎಂಬವರು ಬಿಇಡಿ ಓದುತ್ತಿದ್ದ ತನ್ನ ನೆರೆಯ ಯುವತಿಯ ಜೊತೆ ಪ್ರೇಮ ಸಂಬಂಧ ಹೊಂದಿದ್ದರು. 2015ರಲ್ಲಿ ಕುಂದಾಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಯುವತಿಯನ್ನು ಕುಂದಾಪುರಕ್ಕೆ ಕರೆಸಿಕೊಂಡಿದ್ದ ರಾಕೇಶ್‌ರವರು ಯುವತಿಯ ಒಪ್ಪಿಗೆ ಪಡೆಯದೆ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪದಲ್ಲಿ ಆತನ ವಿರುದ್ಧ ಕುಂದಾಪುರ ಠಾಣೆಯಲ್ಲಿ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.
ಕುಂದಾಪುರ ನ್ಯಾಯಾಲಯವು ಆರೋಪಿಯನ್ನು ದೋಷ ಮುಕ್ತಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತ ಯುವತಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರಭಾಕರ ಶಾಸ್ತ್ರಿ ಮತ್ತು ಉಮೇಶ್ ಆಡಿಗ ಅವರನ್ನೊಳಗೊಂಡ ಹೈಕೋರ್ಟ್‌ನ ದ್ವಿ ಸದಸ್ಯ ನ್ಯಾಯಪೀಠ ಆರೋಪಿ ರಾಕೇಶ್ ಬಿ ದೋಷಿ ಎಂದು ಪರಿಗಣಿಸಿ ಅಪರಾಧಿಗೆ 7 ವರ್ಷ ಜೈಲು ಶಿಕ್ಷೆ, ರೂ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಕಟ್ಟಲು ವಿಫಲರಾದರೆ ಮತ್ತೆ ಆರು ತಿಂಗಳ ಜೈಲು ಸಜೆ ಪ್ರಕಟಿಸಿದೆ. ಮೋಸ ಸಾಬೀತಾದ ಹಿನ್ನೆಲೆಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ನೀಡಲಾಗಿದ್ದು ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕು ಎಂದು ಕೋರ್ಟ್ ಆದೇಶಿಸಿದೆ. ದಂಡದಲ್ಲಿ 45 ಸಾವಿರ ರೂಪಾಯಿ ಸಂತ್ರಸ್ತೆಗೆ ಮತ್ತು 5000 ರೂ.ಗಳನ್ನು ರಾಜ್ಯ ಸರಕಾರಕ್ಕೆ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕುಂದಾಪುರದ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.