ದಲಿತ ಸಂಘಟನೆ, ಹಿಂದೂಪರ ಸಂಘಂಟನೆಗಳ ಜಮಾವಣೆ, ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಕೆ
ಕಡಬ: ಕಡಬ ಗ್ರಾಮದ ಪಿಜಕಳ ಎಂಬಲ್ಲಿ ದಲಿತರೋರ್ವರ ಹೆಸರಿನಲ್ಲಿರುವ ಸ್ಥಿರಾಸ್ಥಿಯನ್ನು ವ್ಯಕ್ತಿಯೋರ್ವರು ಅತಿಕ್ರಮಿಸಿಕೊಂಡು ಜೆಸಿಬಿ ಮೂಲಕ ಸಮ ತಟ್ಟುಗೊಳಿಸಿದ್ದಾರೆ ಎಂದು ಆರೋಪಿಸಿ ಬುಧವಾರ ಕಡಬದ ದಲಿತ ಸಂಘಟನೆ ಮತ್ತು ಹಿಂದೂಪರ ಸಂಘಟನೆಗಳು ಸ್ಥಳದಲ್ಲಿ ಪ್ರತಿಭಟಿಸಿದರು. ಬಳಿಕ ಸ್ಥಳಕ್ಕೆ ಬಂದ ಕಂದಾಯ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮನವಿ ನೀಡಿದರು.
ಈ ವೇಳೆ ಮಾತನಾಡಿದ ಬೀಮ್ ಆರ್ಮಿ ಕಡಬ ತಾಲೂಕು ಅಧ್ಯಕ್ಷ ರಾಘವ ಕಳಾರ, ಪರಿಶಿಷ್ಟ ಜಾತಿಗೆ ಸೇರಿದ ಕುಂಞ ಮೇರ ಎಂಬುವವರಿಗೆ ಸೇರಿದ ಸರ್ವೆ ನಂಬ್ರ 121/2 ರಲ್ಲಿ ಇರುವ 0.99 ಎಕ್ರೆ ಜಾಗವನ್ನು ಕುಂಞ ಮೇರ ಮೃತಪಟ್ಟ ಬಳಿಕ ಅವರ ಪತ್ನಿ ಮಾಣಿಗ ಎಂಬವವರ ಹೆಸರು ದಾಖಲಾಗಿದ್ದು ಬಳಿಕ ಮಾಣಿಗ ನಿಧನರಾದ ನಂತರ ಅವರಿಗೆ ವಾರಿಸುದಾರರು ಇಲ್ಲದ ಕಾರಣ ಆ ಜಾಗವನ್ನು ಅನ್ಯ ವ್ಯಕ್ತಿಗಳು ಅತಿಕ್ರಮಿಸಿರುವುದು ಕಂಡು ಬಂದಿದೆ ತಕ್ಷಣ ಅತಿಕ್ರಮಣವನ್ನು ತೆರವುಗೊಳಿಸಿ ಸೂಕ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಮೋಹನ್ ದಾಸ್ ಪಿ ದೋಳ್ಪಾಡಿ ಮಾತನಾಡಿ, ದಲಿತ ವ್ಯಕ್ತಿಗಳ ಭೂಮಿಯನ್ನು ಅತಕ್ರಮಿಸಿದಲ್ಲದೆ, ಪಕ್ಕದಲ್ಲಿದ್ದ ಕೊರಗಜ್ಜನ ಕಟ್ಟೆಯನ್ನು ದ್ವಂಸ ಮಾಡಿ ಕಟ್ಟೆಯ ಸುತ್ತ ಇರುವ ಸರ್ಕಾರಿ ಜಾಗವನ್ನು ಅತಿಕ್ರಮಿಸಿದ್ದಾರೆ. ಕಂದಾಯ ಇಲಾಖೆ ಹಾಗು ಪಟ್ಟಣ ಪಂಚಾಯಿತಿ ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ವಾರಸುದಾರರು ಇಲ್ಲದ ಖಾಸಗಿ ಹಾಗೂ ಸರ್ಕಾರಿ ಭೂಮಿಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಉಪಯೋಗಕ್ಕೆ ಮೀಸಲಿಡಬೇಕೆಂದು ಆಗ್ರಹಿಸಿದರು. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಬಂದ ಕಡಬ ತಾಲೂಕು ಪ್ರಭಾರ ಕಂದಾಯ ನಿರೀಕ್ಷಕ ಶೇಷಾದ್ರಿ ಅವರಿಗೆ ಎರಡು ಸಂಘಟನೆಯ ಕಡೆಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತೈಕ ಮನವಿ ನೀಡಲಾಯಿತು. ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಕಂದಾಯ ಅಧಿಕಾರಿ ಜೊತೆ ಗ್ರಾಮ ಸೇವಕರಾದ ರಮೇಶ್ ರಾವ್, ವಿಜಯ ಇದ್ದರು. ಹಿಂದೂ ಪರ ಸಂಘಟನೆಯ ಮುಖಂಡರಾದ ರವಿರಾಜ್ ಶೆಟ್ಟಿ, ಅಜಿತ್ ಆರ್ತಿಲ, ಪ್ರಮೋದ್ ರೈ ನಂದುಗುರಿ, ಆಶೋಕ್ ಕುಮಾರ್, ಬೀಮ್ ಆರ್ಮಿ ಸಂಘಟನೆ ಕಡಬ ತಾಲೂಕು ಪ್ರದಾನ ಕಾರ್ಯದರ್ಶಿ ತಾರನಾಥ ಕಡಿರಡ್ಕ, ಮುಖಂಡರಾದ ಮಹಾಬಲ ಪಡುಬೆಟ್ಟು, ಲೋಕೇಶ್ ಕಡಿರಡ್ಕ, ಶೀನ ಬಾಳಿಲ, ವಸಂತ ಕುಬಲಾಡಿ,ಕಾರ್ತಿಕ್ ಪಿಜಕಳ ಮೊದಲಾದವರು ಇದ್ದರು. ಹಿಂದೂ ಪರ ಸಂಘಟನೆಯ ಕಾರ್ತಿಕ್ ಸ್ವಾಗತಿಸಿ ವಂದಿಸಿದರು.
ನಕಲಿ ದಾಖಲೆ ಸೃಷ್ಟಿ, ಮೇಲ್ನೋಟಕ್ಕೆ ಕಂಡು ಬರುತ್ತಿದೆ-ಶೇಷಾದ್ರಿ
ಈ ಬಗ್ಗೆ ಪ್ರಭಾರ ಕಂದಾಯ ನಿರಿಕ್ಷಕ ಶೇಷಾದ್ರಿ ಪ್ರತಿಕ್ರಿಯೆ ನೀಡಿ, ಈ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅತಿಕ್ರಮಿಸಿದ್ದಾರೆ ಎನ್ನಲಾದ ವ್ಯಕ್ತಿಯಲ್ಲಿರುವ ದಾಖಲೆಯನ್ನು ಇಲಾಖೆಗೆ ಸಲ್ಲಿಸುವಂತೆ ಹೇಳಲಾಗಿದೆ. ಕಂದಾಯ ಇಲಾಖೆಯ ಮುಖಾಂತರ ಸರ್ವೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಜಾಗವಾದರೆ ವಶಕ್ಕೆ ಪಡೆಯಲಾಗುವುದು.