ಬನ್ನೂರು ಶನೀಶ್ವರ ಸನ್ನಿಧಿಯಲ್ಲಿ 19ನೇ ವರ್ಷದ ಶನೀಶ್ವರ ಪೂಜೆ,ಸ್ಪೂರ್ತಿ ಯುವ ಸಂಸ್ಥೆಗಳ 34ನೇ ವಾರ್ಷಿಕೋತ್ಸವ

0

ಪುತ್ತೂರು:ಬನ್ನೂರು ಸ್ಪೂರ್ತಿ ಮೈದಾನದಲ್ಲಿರುವ ಶ್ರೀ ಶನೀಶ್ವರ ಸನ್ನಿಧಿಯಲ್ಲಿ 19ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸ್ಪೂರ್ತಿ ಯುವಕ ಮಂಡಲ, ಮಹಿಳಾ ಮಂಡಲ ಹಾಗೂ ಬಾಲ ಸಭಾದ 34ನೇ ವಾರ್ಷಿಕೋತ್ಸವವು ಫೆ.10ರಂದು ನಡೆಯಿತು.


ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ಮಾರ್ಗದರ್ಶನದಲ್ಲಿ, ಅರ್ಚಕ ಹರೀಶ್ ಶಾಂತಿ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಶನೀಶ್ವರ ಪೂಜೆ ಆರಂಭ, ಕುಣಿತ ಭಜನೆ, ಮಧ್ಯಾಹ್ನ ದೇವರಿಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಬನ್ನೂರು ಶನೀಶ್ವರ ಕುಣಿತಾ ಭಜನಾ ತಂಡದವರಿಂದ ನಡೆದ ಕುಣಿತ ಭಜನೆಯನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ದೀಪ ಬೆಳಗಿಸಿ ಉದ್ಘಾಟಿಸಿದರು.


ಸ್ಪೂರ್ತಿ ಯುವ ಸಂಸ್ಥೆಗಳ ವಾರ್ಷಿಕೋತ್ಸವ:
ಸಂಜೆ ನಡೆದ ಸ್ಫೂರ್ತಿ ಯುವ ಸಂಸ್ಥೆಗಳ 34ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ತನ್ನ ಧರ್ಮವನ್ನು ಪಾಲಿಸುವುದರ ಜೊತೆಗೆ ಸಹೋದರ ಧರ್ಮವನ್ನು ಗೌರವಿಸುವ ಪೃವೃತ್ತಿ ನಮ್ಮಲ್ಲಿರಬೇಕು. ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ತಮ್ಮ ಧರ್ಮದ ಆಶಯವನ್ನು ಕಲಿಸಬೇಕು. ಧರ್ಮದ ಬಗ್ಗೆ ಪರಸ್ಪರ ತಿಳುವಳಿಕೆ ಇದ್ದಲ್ಲಿ ಅಪನಂಬಿಕೆಗಳು ದೂರವಾಗುತ್ತದೆ. ಎಲ್ಲಾ ಧರ್ಮಗಳ ಮೂಲ ಆಶಯ ಶಾಂತಿ, ನೆಮ್ಮದಿಯಾಗಿದೆ. ಇಲ್ಲಿ ಅಶಾಂತಿಯನ್ನು, ಹಿಂಸೆಯನ್ನು ಕಲಿಸುವ ಯಾವ ಧರ್ಮಗಳೂ ಇಲ್ಲ. ಎಲ್ಲಾ ಧರ್ಮಗಳಲ್ಲೂ ಪ್ರಾರ್ಥನೆ ಎಂದರೆ ದೇವರನ್ನು ಹೊಗಳುವುದು, ಹಿಂದೂ ಧರ್ಮದವರು ಭಜನೆ ಹಾಡುವ ಮೂಲಕ ದೇವರನ್ನು ಹತ್ತಿರವಾಗಲು ಪ್ರಯತ್ನ ಮಾಡುತ್ತೇವೆ. ಭಜನೆ ದೇವರಿಗೆ ಅತಿ ಇಷ್ಟವಾದ ಆರಾಧನೆಯಾಗಿದೆ, ಇತರೆ ಧರ್ಮದವರೂ ಅವರವರ ಶೈಲಿಯಲ್ಲಿ ದೇವರನ್ನು ಆರಾಧನೆ ಮಾಡುತ್ತಾರೆ ಎಲ್ಲರ ಆಶಯವೂ ಒಂದೇ ಆಗಿದೆ ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವೀಚಾರಕ ಶ್ರೀಕಾಂತ್ ಪೂಜಾರಿ ಬಡಾವು ಮಾತನಾಡಿ, ಸ್ಫೂರ್ತಿ ಯುವ ಸಂಸ್ಥೆಗಳ ಸಾಮಾಜಿಕ ಸೇವೆ ಹಾಗೂ ಸಾಧನೆಗಳ ಶ್ಲಾಘಿಸಿ ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.


ಸಭಾ ಕಾರ್ಯಕ್ರಮವನ್ನು ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ರಾಜಣ್ಣ ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು. ನಗರ ಸಭಾ ಸದಸ್ಯೆ ಗೌರಿ ಬನ್ನೂರು, ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಸಂಯೋಜನೆಯ ಮಾಜಿ ನೋಡೆಲ್ ಅಧಿಕಾರಿ ಡಾ.ಅನಿಲ ದೀಪಕ್ ಶೆಟ್ಟಿ, ಭಾರತೀಯ ದಂತ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಉಮೇಶ್ ನಾಯಕ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಯುವಕ ಮಂಡಲದ ಅಧ್ಯಕ್ಷ ಸೂರ್ಯ ಕೋಟ್ಯಾನ್, ಯುವತಿ ಮಂಡಲದ ಅಧ್ಯಕ್ಷೆ ಲಾವಣ್ಯ, ಮಹಿಳಾ ಮಂಡಲದ ಉಪಾಧ್ಯಕ್ಷ ಜ್ಯೋತಿ, ಬಾಲ ಸಭಾದ ಅಧ್ಯಕ್ಷ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸ್ಫೂರ್ತಿ ಶ್ರೀ ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ಹಾಗೂ ರಂಗಭೂಮಿ ಕಲಾವಿದ ಸುಬ್ಬು(ಸುಬ್ರಹ್ಮಣ್ಯ) ಸಂಟ್ಯಾರ್ ಇವರಿಗೆ ಸ್ಫೂರ್ತಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತ ಪೋಸ್ಟ್ ಮಾಸ್ಟರ್ ಗುಡ್ಡಪ್ಪ ಗೌಡ ಜೈನರಗುರಿ, ಕುಣಿತ ಭಜನಾ ತರಬೇತುದಾರರಾದ ಕಾರ್ತಿಕ್ ಆರ್ಯಾಪು, ನಾಗೇಶ್ ಸಾಜರವರಿಗೆ ಸನ್ಮಾನ ಹಾಗೂ ಬನ್ನೂರು ಹಿ.ಪ್ರಾ ಶಾಲೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾದ ಭವಿತ್ ಕುಮಾರ್ ಹಾಗೂ ಯಶವಂತರವರಿಗೆ ಪ್ರತಿಭಾ ಪುರಸ್ಕಾರ, ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಹಕರ ಸಂಘದ ನಿರ್ದೇಶಕರಾಗಿ ಹಾಗೂ ತಾಲೂಕು ಭಜನಾ ಪರಿಷತ್‌ನ ಉಪಾಧ್ಯಕ್ಷರಾಗಿ ಆಯ್ಕೆಯಾದ ದಿನೇಶ್ ಸಾಲಿಯಾನ್, ಯುವ ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಯುವಕ ಮಂಡಲದ ಪ್ರಮೋದ್ ಗೌಡ ಹಾಗೂ ಬಾಲ ಸಭಾದ ಹಿತೇಶ್‌ರವರನ್ನು ಗೌರವಿಸಲಾಯಿತು.


ಕಿರು ಚಲನಚಿತ್ರದ ಪೋಸ್ಟರ್ ಬಿಡುಗಡೆ:
ಬನ್ನೂರು ಶನೀಶ್ವರ ಟೈಗರ‍್ಸ್‌ರವರಿಂದ ನಿರ್ಮಾಣಗೊಂಡಿರುವ ‘ಅಗೋಚರ’ ಎಂಬ ಕಿರು ಚಲನ ಚಿತ್ರದ ಪೋಸ್ಟರ್‌ನ್ನು ಶಾಸಕ ಅಶೋಕ್ ಕುಮಾರ್ ರೈ ಬಿಡುಗಡೆ ಮಾಡಿದರು.
ಸ್ಫೂರ್ತಿ ಬಾಲ ಸಭಾದ ಸದಸ್ಯರಾದ ಸಾನ್ವಿ, ಯಜ್ಷಶ್ರೀ ಹಾಗೂ ಲಿಖಿತಾ ಪ್ರಾರ್ಥಿಸಿದರು. ಸ್ಫೂರ್ತಿ ಯುವ ಸಂಸ್ಥೆಗಳ ಸಂಚಾಲಕ ದಿನೇಶ್ ಸಾಲಿಯಾನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸ್ಫೂರ್ತಿ ಯುವತಿ ಮಂಡಲದ ಭಕ್ತಿ ಡಿ.ಎಸ್ ವರದಿ ವಾಚಿಸಿದರು. ಯುವಕ ಮಂಡಲದ ಕೋಶಾಧಿಕಾರಿ ನಿತಿನ್ ಕೆ.ಆರ್ ವಂದಿಸಿದರು. ಅಮರನಾಥ ಬಿ.ಪಿ., ಹಾಗೂ ದೇವಿಕಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀದುರ್ಗಾ ರಂಗಕಲಾ ಚಾವಡಿ ಪುತ್ತೂರು ಇವರಿಂದ ‘ಕುಸಲ್ದ ನಿಧಿ’ ಯಕ್ಷ ಹಾಸ್ಯ ಸೌರಭ ನಡೆಯಿತು. ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here