ಅಕ್ರಮ ಚಟುವಟಿಕೆ ತಡೆಗೆ ಪೊಲೀಸರಿಗೆ ಸಹಕರಿಸಿ: ಪಿಎಸ್‌ಐ ಅಭಿನಂದನ್
ರಾಮಕುಂಜ: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪುತ್ತೂರು ಉಪವಿಭಾಗ, ಉಪ್ಪಿನಂಗಡಿ ವೃತ್ತ ಕಡಬ ಪೊಲೀಸ್ ಠಾಣೆ ಹಾಗೂ ರಾಮಕುಂಜ, ಕೊಯಿಲ ಗ್ರಾಮ ಪಂಚಾಯತ್, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಲ ಶಾಖೆ ಮತ್ತು ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಯಿಲ ಹಾಗೂ ರಾಮಕುಂಜ ಗ್ರಾಮಗಳ ನಾಗರಿಕರ ಪೊಲೀಸ್ ಜನಸಂಪರ್ಕ ಸಭೆ ಫೆ.16ರಂದು ಆತೂರಿನಲ್ಲಿರುವ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಪೊಲೀಸ್ ಇಲಾಖೆ ಕುರಿತು ಮಾಹಿತಿ ನೀಡಿದ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಅಭಿನಂದನ್ ಎಂ.ಎಸ್. ಅವರು, ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ ಹೆಚ್ಚಾಗುತ್ತಿದೆ. ಈ ರೀತಿಯ ವಂಚನೆಗೆ ಜನರು ಒಳಗಾದಲ್ಲಿ ಘಟನೆ ನಡೆದ 1 ಗಂಟೆಯ ಅವಧಿಯೊಳಗೆ 1930ಗೆ ದೂರು ನೀಡಿದಲ್ಲಿ ನಗದು ವರ್ಗಾಯಿಸಿಕೊಂಡವರ ಖಾತೆಯನ್ನು ಸ್ಥಗಿತಗೊಳಿಸಿ ಮುಂದಿನ ಹಂತದ ತನಿಖೆ ನಡೆಸಲಾಗುತ್ತದೆ. ಒಟಿಪಿ ಸಂಖ್ಯೆ ಹಂಚಿಕೆ, ಲಿಂಕ್ ಕ್ಲಿಕ್ ಮಾಡದೇ ಜಾಗರೂಕರಾಗಿರಬೇಕೆಂದು ಹೇಳಿದರು. 1 ವಾರ ಮನೆಗೆ ಬೀಗ ಹಾಕಿ ಹೋಗುವ ಸಂದರ್ಭದಲ್ಲಿ ಬೀಟ್ ಪೊಲೀಸರಿಗೆ ಮಾಹಿತಿ ನೀಡಿ. ಕಳ್ಳತನ ಸೇರಿದಂತೆ ಇತರೇ ಅಪರಾಧ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಮನೆಯಲ್ಲಿ ಸಿಸಿಟಿವಿ ಅಳವಡಿಸಿ. ಮದ್ಯ ಮಾರಾಟ, ಗಾಂಜಾ ಸೇವನೆ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆ ತಡೆಯುವ ನಿಟ್ಟಿನಲ್ಲಿ ಪೊಲೀಸರ ಜೊತೆ ಸಾರ್ವಜನಿಕರು ಸಹಕರಿಸುವಂತೆ ಅಭಿನಂದನ್ ಎಂ.ಎಸ್.ಅವರು ಹೇಳಿದರು.
ಸಾಂಪ್ರದಾಯಿಕ ಕೋಳಿ ಅಂಕಗಳಿಗೆ ಅನುಮತಿ ನೀಡಿ:
ಜಾತ್ರೆ, ನೇಮೋತ್ಸವದ ಸಂದರ್ಭ ಕೋಳಿ ಅಂಕ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದನ್ನು ಮುಂದುವರಿಸಲು ಅನುಮತಿ ನೀಡಬೇಕೆಂದು ರಾಮಕುಂಜ ಗ್ರಾ.ಪಂ.ಸದಸ್ಯ ಪ್ರಶಾಂತ ಆರ್.ಕೆ. ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಬ್‌ಇನ್ಸ್‌ಪೆಕ್ಟರ್ ಅಭಿನಂದನ್ ಎಂ.ಎಸ್.ಅವರು ಕೋಳಿ ಅಂಕದಲ್ಲಿ ಜೂಜಾಟ ನಡೆಯುತ್ತಿರುವುದರಿಂದ ಅನುಮತಿ ನೀಡದಂತೆ ಹಿರಿಯ ಅಧಿಕಾರಿಗಳಿಂದ ಕಟ್ಟುನಿಟ್ಟಿನ ಆದೇಶವಿದೆ ಎಂದರು. ಮೊಬೈಲ್ ಆಪ್ ಮೂಲಕ ಲಕ್ಷಾಂತರ ರೂ.ವಂಚನೆ ಮಾಡುವ ಜಾಲವೊಂದು ಸಕ್ರಿಯವಾಗಿದ್ದು ಇದರ ಬಗ್ಗೆಯೂ ಪೊಲೀಸ್ ಇಲಾಖೆ ಜಾಗರೂಕರಾಗಬೇಕೆಂದು ಪ್ರಶಾಂತ್ ಅವರು ಹೇಳಿದರು.
ಅಪ್ರಾಪ್ತರು ವಾಹನ ಚಲಾಯಿಸಿದಲ್ಲಿ ದಂಡ:
ಅಪ್ರಾಪ್ತರು ವಾಹನ ಚಲಾಯಿಸುವುದು ಅಪರಾಧ. ಈ ರೀತಿಯಾದಲ್ಲಿ ಪೋಷಕರಿಗೆ ಅಥವಾ ವಾಹನದ ಮಾಲೀಕರಿಗೆ 25ಸಾವಿರ ರೂ.ತನಕ ದಂಡ, 1 ತಿಂಗಳು ಕಾರಾಗೃಹ ಶಿಕ್ಷೆಗೆ ಕಾನೂನಿನಲ್ಲಿ ಅವಕಾಶವಿದೆ. ಆದ್ದರಿಂದ 18 ಕ್ಕಿಂತ ಕಡಿಮೆ ವಯೋಮಾನದವರಿಗೆ ವಾಹನ ಚಾಲನೆಗೆ ಅವಕಾಶ ನೀಡದಂತೆ ಹೇಳಿದರು. ಪ್ರಕರಣ ದಾಖಲಿಸಿ ದಂಡ ವಿಧಿಸಿದರೆ ಮಾತ್ರ ಕಾನೂನಿನ ಬಗ್ಗೆ ಭಯ ಮೂಡುತ್ತದೆ. ಇಲ್ಲದಿದ್ದರೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಕಾನೂನು ಪಾಲನೆ ಮಾಡದೆ ತಮ್ಮ ಪೋಷಕರಿಗೆ ಅಪಾಯ ತಂದೊಡ್ಡುತ್ತಾರೆ. ಹಾಗಾಗಿ ವಾರದಲ್ಲಿ ಒಂದರೆಡು ದಿನವಾದರೂ ಶಾಲಾ ಕಾಲೇಜು ಸಂಜೆ ಬಿಡುವ ಸಮಯದಲ್ಲಿ ಪೊಲೀಸರು ತಪಾಸನೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಅತಿವೇಗದ ಚಾಲನೆಗೆ ಕಡಿವಾಣ ಹಾಕಿ:
ಮರಳು, ಕೆಂಪುಕಲ್ಲು ಸಾಗಾಟದ ವಾಹನಗಳ ಚಾಲಕರು ಹೆದ್ದಾರಿಯಲ್ಲಿ ಅತೀ ವೇಗವಾಗಿ ವಾಹನ ಚಾಲನೆ ಮಾಡುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಇವುಗಳಿಗೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಒಳ ರಸ್ತೆಗಳಿಗೆ ಅಡ್ಡವಾಗಿ ಕೆಲವೊಂದು ಕಡೆ ಬ್ಯಾನರ್, ಫ್ಲೆಕ್ಸ್ ಹಾಕಲಾಗಿದೆ. ಇದೂ ಅಪಘಾತಕ್ಕೆ ಕಾರಣವಾಗುತ್ತಿದೆ ಎಂಬ ಅಭಿಪ್ರಾಯವೂ ಸಭೆಯಲ್ಲಿ ಕೇಳಿಬಂತು.
ಜಾನುವಾರು ಕಳ್ಳತನ:
ಏಳೆಂಟು ತಿಂಗಳ ಹಿಂದೆ ರಾಮಕುಂಜ ದೇವಸ್ಥಾನದ ವಠಾರದಿಂದ ಜಾನುವಾರು ಕಳ್ಳತನ ನಡೆದಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ. ಆ ಬಳಿಕವೂ ಇಲ್ಲಿ ಜಾನುವಾರು ಕಳ್ಳತನ ಆಗಿದೆ. ಪೊಲೀಸರಿಗೆ ಗೊತ್ತಿದ್ದರೂ ಯಾವುದೇ ಕ್ರಮ ಜರಗಿಸಲಿಲ್ಲ ಎಂದು ಶರತ್ ಭಂಡಾರಿ ದೂರಿದರು. ಪೊಲೀಸರಿಗೆ ಸವಾಲು ಹಾಕಿ ಜಾನುವಾರು, ಜಾನುವಾರು ಮಾಂಸ ಆತೂರು ಪರಿಸರದಲ್ಲಿ ನಿರಂತರವಾಗಿ ಸಾಗಾಟ ಆಗುತ್ತಿದೆ. ಇದರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಪ್ರಶಾಂತ್ ಆರ್.ಕೆ.ಹಾಗೂ ಇತರರು ಆಗ್ರಹಿಸಿದರು.
ಮೈಕ್ ಬಳಕೆಯಿಂದ ಕಿರಿಕಿರಿ:
ಬಾಲಕೃಷ್ಣ ಗೌಡ ಬೇಂಗದಪಡ್ಪು ಅವರು ಮಾತನಾಡಿ, ನನ್ನ ಮನೆಯ ಎದುರುಗಡೆ ಮಸೀದಿ ಇದ್ದು ಇಲ್ಲಿ ಬಂದು ಮೈಕ್ ಪ್ರಚಾರ ಮಾಡುವವರು ತುಂಬಾ ಹೊತ್ತು ವಾಹನ ನಿಲ್ಲಿಸಿ ಜೋರಾಗಿ ಮೈಕ್ ಅನೌನ್ಸ್ ಮಾಡುತ್ತಾರೆ. ಇದರಿಂದ ನಾವು ಕಿರಿಕಿರಿ ಅನುಭವಿಸುತ್ತಿದ್ದೇವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು. ಇದಕ್ಕೆ ಉತ್ತರಿಸಿದ ಎಸ್‌ಐ ಇನ್ನು ಮುಂದೆ ಮೈಕ್ ಪರವಾನಿಗೆ ನೀಡುವಾಗ ಸೂಚನೆ ನೀಡಲಾಗುವುದು ಎಂದರು.
ಲಕ್ಕಿ ಸ್ಕೀಮ್‌ಗೆ ಕಡಿವಾಣ ಹಾಕಿ:
ಸಂಪ್ಯದ ವ್ಯಕ್ತಿಯೊಬ್ಬರು ಆತೂರಿಗೆ ಬಂದು ಲಕ್ಕಿ ಸ್ಕೀಮ್ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಮೋಸ ಹೋಗುವ ಸಾಧ್ಯತೆ ಇದೆ. ಇಂತಹ ಲಕ್ಕಿ ಸ್ಕೀಮ್‌ಗಳಿಗೆ ಕಡಿವಾಣ ಹಾಕುವಂತೆಯೂ ಗ್ರಾಮಸ್ಥರು ಆಗ್ರಹಿಸಿದರು.
ತ್ಯಾಜ್ಯ ಎಸೆಯುವುದಕ್ಕೆ ಕಡಿವಾಣ ಹಾಕಿ:
ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂಡಾಜೆಯಲ್ಲಿರುವ ಕಿರು ಸೇತುವೆಯ ಅಡಿಗೆ ತ್ಯಾಜ್ಯ ತಂದು ಹಾಕಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಹಮೀದ್ ಕುಂಡಾಜೆ ಆಗ್ರಹಿಸಿದರು. ಕೊಲದಲ್ಲೂ ಕೋಳಿ,ಜಾನುವಾರು ತ್ಯಾಜ್ಯಗಳನ್ನು ತಂದು ಹಾಕಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್‌ಐ ಅಭಿನಂದನ್ ಅವರು, ಗ್ರಾಮ ಪಂಚಾಯತ್ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್ ಅಧ್ಯಕ್ಷತೆ ವಹಿಸಿದ್ದರು. ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಚೇತಾ ಬಿ., ಆತೂರು ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಅಹಮ್ಮದ್ ಕುಂಞಿ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖೆಯ ವ್ಯವಸ್ಥಾಪಕ ಆನಂದ ಗೌಡ ಪಜ್ಜಡ್ಕ, ಎಎಸ್‌ಐ ಸುರೇಶ್ ಸಿ.ಟಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಯಧುಶ್ರೀ ಆನೆಗುಂಡಿ ಸ್ವಾಗತಿಸಿದರು. ಕೊಯಿಲ ಬೀಟ್ ಪೊಲೀಸ್ ಹರೀಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಲಕ್ಷ್ಮೀನಾರಾಯಣ ರಾವ್ ಆತೂರು, ಅಶೋಕ್ ಕೊಯಿಲ, ಸಿದ್ದೀಕ್ ಎಸ್.ಕೆ., ಪುರುಷೋತ್ತಮ ಕೊಯಿಲ ಮತ್ತಿತರರು ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿದರು.
ಅಮಾಯಕ ಅಲ್ಲ, ರೌಡಿಶೀಟರ್:
ಕೊಯಿಲದಲ್ಲಿ ನಡೆದ ಅಡಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಅಮಾಯಕ ಯುವಕನನ್ನು ಬೆಂಗಳೂರಿನಲ್ಲಿ ಬಂಧಿಸಿ ಕೇಸು ದಾಖಲಿಸಲಾಗಿದೆ. ಆದರೆ ಆತ ಆ ಕೃತ್ಯದಲ್ಲಿ ಭಾಗಿಯಾಗಿಲ್ಲ. ಸುಖಾಸುಮ್ಮನೆ ಆತನ ವಿರುದ್ಧ ಕೇಸು ದಾಖಲಿಸಲಾಗಿದೆ. ಸಾರ್ವಜನಿಕವಾಗಿ ತಳವಾರು ಝಳಪಿಸಿ, ಪೊಲೀಸರಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿ ಈಗ ರಾಜರೋಷವಾಗಿ ತಿರುಗಾಡುತ್ತಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥ ಝಕರಿಯಾ ಅವರು ಎಸ್‌ಐ ಅವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಐ.ಅಭಿನಂದನ್ ಅವರು, ಎಲ್ಲಾ ರೀತಿಯಲ್ಲೂ ಪರಿಶೀಲನೆ ನಡೆಸಿದ ಬಳಿಕವೇ ಕೇಸು ದಾಖಲಿಸಲಾಗಿದೆ. ಠಾಣೆಗೆ ಬರುವಂತೆ ಸೂಚನೆ ನೀಡಿದರೂ ಆತ ಬಂದಿರಲಿಲ್ಲ. ಆ ಬಳಿಕ ಟ್ರೇಸ್ ಮಾಡಿ ಬಂಧಿಸಲಾಗಿದೆ. ಅಷ್ಟಕ್ಕೂ ಆತ ಅಮಾಯಕ ಅಲ್ಲ ಆತನ ವಿರುದ್ಧ ರೌಡಿಶೀಟರ್, ಎಂಒಬಿ ಕಾರ್ಡ್ ಸಹ ದಾಖಲಾಗಿದೆ ಎಂದು ಸ್ಪಷ್ಟಪಡಿಸಿದರು.