ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಿರ್ಗಮಿತ ವ್ಯವಸ್ಥಾಪನಾ ಸಮಿತಿಗೆ ದೇವಳದಿಂದ ಸನ್ಮಾನ

0

ಕಣ್ಣಿಗೆ ಕಾಣುವುದಕ್ಕಿಂತ ಕಣ್ಣಿಗೆ ಕಾಣದ ಕೆಲಸ ಪ್ರಧಾನ-ನವೀನ್ ಭಂಡಾರಿ
ದೇವಸ್ಥಾನಕ್ಕೆ ಆದಾಯ ಬರುವ ಕಾರ್ಯಕ್ರಮ ಅಗತ್ಯ – ಎನ್.ಕೆ.ಜಗನ್ನಿವಾಸ ರಾವ್
ಮೂರು ವರ್ಷದಲ್ಲಿ ಏನು ಮಾಡಲು ಸಾಧ್ಯ-ಕಿಟ್ಟಣ್ಣ ಗೌಡ
ಕ್ಷೇತ್ರೇಶರ ತಂಡ ಯಶಸ್ವಿ ಕಾರ್ಯ ನಿರ್ವಹಿಸಿದೆ – ಪಿ.ಜಿ.ಜಗನ್ನಿವಾಸ ರಾವ್
ಸ್ವಯಂ ಸೇವಕರಾಗಿ ನಾವು ಖಂಡಿತಾ ನಿಮ್ಮ ಮುಂದೆ ಇರುತ್ತೇವೆ-ಕೇಶವಪ್ರಸಾದ್ ಮುಳಿಯ

ಪುತ್ತೂರು:ಇತಿಹಾಸ ಪ್ರಸಿದ್ದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅವಧಿ ಮುಗಿದು ನಿರ್ಗಮಿಸಿರುವ ಕೇಶವಪ್ರಸಾದ್ ಮುಳಿಯ ನೇತೃತ್ವದ ವ್ಯವಸ್ಥಾಪನಾ ಸಮಿತಿಯನ್ನು ದೇವಳದ ವತಿಯಿಂದ ಗೌರವಿಸಿ ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮ ಫೆ.16ರಂದು ನಡೆಯಿತು.


ಕಣ್ಣಿಗೆ ಕಾಣುವುದಕ್ಕಿಂತ ಕಣ್ಣಿಗೆ ಕಾಣದ ಕೆಲಸ ಪ್ರಧಾನ:
ದೇವಳದ ಆಡಳಿತಾಧಿಕಾರಿ ನವೀನ್ ಭಂಡಾರಿ ಅವರು ಅಭಿನಂದನಾ ನುಡಿಯನ್ನಾಡಿದರು.ಕೇಶವಪ್ರಸಾದ್ ನೇತೃತ್ವದ ಸಮಿತಿಯಿಂದ ದೇವಸ್ಥಾನದಲ್ಲಿ ಮೋಡೆಲ್ ಅಭಿವೃದ್ಧಿಯಾಗಿದೆ. ಯಾಕೆಂದರೆ ಕಣ್ಣಿಗೆ ಕಾಣುವ ಅಭಿವೃದ್ಧಿಯೊಂದು ಕಡೆಯಾದರೆ ಕಣ್ಣಿಗೆ ಕಾಣದ ಹಲವು ವಿಷಯಗಳಿವೆ.ಅವುಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.ದೊಡ್ಡ ದೊಡ್ಡ ಕಟ್ಟಡದ ಬದಲು ಮುಂದೆ ಬರುವ ಭಕ್ತರಿಗೆ ಭಕ್ತಿಯ ಪರಾಕಾಷ್ಟೆಗಾಗಿ ಏನೆಲ್ಲ ಬೇಕೋ ಅದನ್ನು ಮಾಡಿದ್ದಾರೆ.ಅದರಲ್ಲೂ ಪ್ರಮುಖವಾಗಿ ರಾಜ್ಯದಲ್ಲೇ ಪ್ರಥಮವಾಗಿ ದೇವಸ್ಥಾನದಲ್ಲೊಂದು ಧಾರ್ಮಿಕ ಗ್ರಂಥಾಲಯ ತೆರೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.ಇಂತಹ ಹಲವು ಕಾರ್ಯ ಅವರ ಸಮಿತಿಯಿಂದ ಆಗಿದೆ ಎಂದರು.


ದೇವಸ್ಥಾನಕ್ಕೆ ಆದಾಯ ಬರುವ ಕಾರ್ಯಕ್ರಮ ಅಗತ್ಯ:
ದೇವಳದ ಮಾಜಿ ಆಡಳಿತ ಮೊಕ್ತೇಸರ,ರಾಜ್ಯ ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯರೂ ಆಗಿರುವ ಎನ್.ಕೆ.ಜಗನ್ನಿವಾಸ ರಾವ್ ಅವರು ಮಾತನಾಡಿ ದೇವಸ್ಥಾನದಲ್ಲಿ ಆದಾಯ ಬರುವಂತಹ ಕಾರ್ಯಕ್ರಮ ಅಗತ್ಯ.ಮುಳಿಯ ಟೀಮ್ ಶ್ರದ್ದೆಯಿಂದ ಕೆಲಸ ಮಾಡಿದ್ದೀರಿ.ಆದರೆ ಕೆಲಸದಲ್ಲಿ ಬದಲಾವಣೆ ಬೇಕಿತ್ತು ಎಂದು ಹೇಳಿ ಕೆಲವೊಂದು ಸಲಹೆ, ಸೂಚನೆಗಳನ್ನು ನೀಡಿದರು.


ಮೂರು ವರ್ಷದಲ್ಲಿ ಏನು ಮಾಡಲು ಸಾಧ್ಯ:
ಹಿರಿಯರಾದ ಕಿಟ್ಟಣ್ಣ ಗೌಡ ಬಪ್ಪಳಿಗೆ ಅವರು ಮಾತನಾಡಿ ದೇವಸ್ಥಾನದ ಆಡಳಿತ ಸಮಿತಿ ಅಧಿಕಾರ ಸಿಗುವಾಗ ಕೊರೋನಾವಿತ್ತು.ಈ ಕೊರೋನಾವನ್ನು ನೋಡುವುದಾ ಅಭಿವೃದ್ಧಿ ಮಾಡುವುದಾ ಎಂಬ ಚಿಂತನೆಯ ನಡುವೆ ಮೂರು ವರ್ಷದಲ್ಲಿ ಅವರಿಂದ ಆದಷ್ಟು ಕೆಲಸ ಮಾಡಿದ್ದಾರೆ.ದೇವಳದ ಉತ್ಪತ್ತಿ ಊಟ ಮತ್ತು ಸಂಬಳ ಕೊಡಲು ಮಾತ್ರ ಸಾಧ್ಯ ಅನ್ನುವ ಮಟ್ಟಿಗೆ ಇತ್ತು.ಇನ್ನು ಅಭಿವೃದ್ಧಿಗೆ ರೂ.50 ಕೋಟಿ ರಾಜ್ಯ ಸರಕಾರದಿಂದ ಬರಬೇಕಾಗಿದೆ. ಅದನ್ನು ನಮ್ಮ ಶಾಸಕರು ತಂದೇ ತರುತ್ತಾರೆ ಎಂದರು.


ಕ್ಷೇತ್ರೇಶರ ತಂಡ ಯಶಸ್ವಿ ಕಾರ್ಯ ನಿರ್ವಹಿಸಿದೆ:
ದೇವಳದ ವಾಸ್ತು ಇಂಜಿನಿಯರ್ ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ಕ್ಷೇತ್ರೇಶರ ತಂಡ ಬಹಳ ಉತ್ತಮ ಕಾರ್ಯ ನಿರ್ವಹಿಸಿದೆ.ಮುಂದೆ ಅವರು ಭಕ್ತರಾಗಿ ಬರುತ್ತಾರೆ. ಅವರು ಮಾಡಿದ ಕೆಲಸ ದೇವರಿಗೆ ತೃಪ್ತಿಯಾಗಿದೆಯೋ ಎಂಬುದನ್ನು ದೇವರು ನೋಡುತ್ತಾರೆ.ಆದರೆ ಸಣ್ಣ ಅವಧಿಯಲ್ಲಿ ಧಾರ್ಮಿಕ ಶಿಕ್ಷಣ, ಕೆರೆಯ ಕಟ್ಟೆ ನಿರ್ಮಾಣ ಸಹಿತ ಮಹತ್ವದ ಮಾಸ್ಟರ್ ಪ್ಲಾನ್ ಮಾಡಿರುವುದು ದೊಡ್ಡ ಕೆಲಸ.ಅದನ್ನು ಎಲ್ಲರು ಮೆಚ್ಚಬೇಕೆಂದರು.


ಸ್ವಯಂ ಸೇವಕರಾಗಿ ನಾವು ಖಂಡಿತಾ ನಿಮ್ಮ ಮುಂದೆ ಇರುತ್ತೇವೆ:
ದೇವಳದ ವತಿಯಿಂದ ಸನ್ಮಾನ ಸ್ವೀಕರಿಸಿದ ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ನಾವು ಅಡಳಿತಕ್ಕೆ ಬಂದಾಗ ರೂ.4 ಕೋಟಿಯಷ್ಟು ಆದಾಯವಿದ್ದ ದೇವಸ್ಥಾನವನ್ನು ಪ್ರಸ್ತುತ ರೂ. 6 ಕೋಟಿಯಷ್ಟು ಆದಾಯ ಬರುವಂತೆ ವ್ಯವಸ್ಥೆ ಮಾಡಿzವೆ.ಇವೆಲ್ಲ ದೇವರ ಪ್ರೀತಿಯಂತೆ ನಡೆದ ಕಾರ್ಯಕ್ರಮದಿಂದಾಗಿದೆ. ದೇವಳದ ಅಭಿವೃದ್ಧಿ ಕಾರ್ಯಗಳಿಗೆ ಟೆಂಡರ್ ಕರೆದಾಗಿದೆ.ಮುಂದಿನ ಸಮಿತಿ ಬರುವ ಮುಂದೆಯೇ ಕೆಲಸ ಪೂರ್ಣಗೊಳ್ಳಲಿದೆ.ಇಲ್ಲಿ ಅವಧಿಗಿಂತ ದೇವಳದ ಕೆಲಸ ಮುಖ್ಯ ಎಂಬ ನೆಲೆಯಲ್ಲಿ ನಾವು ಸೇವೆ ಮಾಡಿzವೆ.ಮಹಾಲಿಂಗೇಶ್ವರನ ಸೇವೆ ಮಾಡಲು ಅಧಿಕಾರ ಬೇಡ. ಎಲ್ಲರ ಸಹಕಾರ ಇದ್ದಾಗ ಕೆಲಸ ಆಗುತ್ತದೆ. ಹಾಗಾಗಿ ಮುಂದೆ ಸ್ವಯಂ ಸೇವಕರಾಗಿ ನಾವು ಖಂಡಿತಾ ನಿಮ್ಮ ಮುಂದೆ ಇರುತ್ತೇವೆ ಎಂದರು.ದೇವಳದ ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯ ಅವರು ಮಾತನಾಡಿ ದೇವಳದ ಒಳಗಿನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದಕ್ಕೆ ಅಭಿನಂದಿಸಿದರು.ದೇವಳದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ್ ರೈ ಬಳ್ಳಮಜಲು, ಡಾ.ಸುಧಾ ಎಸ್ ರಾವ್, ರಾಮದಾಸ್ ಗೌಡ, ವೀಣಾ ಬಿ.ಕೆ, ಪ್ರಧಾನ ಅರ್ಚಕ ವೇ.ಮೂ.ವಿ.ಎಸ್.ಭಟ್, ಕಾರ್ಯನಿರ್ವಹಣಾಧಿಕಾರಿ ಕೆ.ವಿ.
ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಡಾ|ಪಿ.ಕೆ.ಗಣೇಶ್, ಶೋಭಾ, ಚಂದ್ರಶೇಖರ್, ಹರೀಶ್, ರೇಖಾ,ಹೇಮ, ಪದ್ಮನಾಭ, ಯಶವಂತ ಸಹಿತ ದೇವಳದ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಶಿವಪ್ರಸಾದ್ ಶೆಟ್ಟಿ, ರತ್ನಾಕರ್ ನಾಕ್, ಮಾಧವ ಸ್ವಾಮಿ, ಭಾಸ್ಕರ್ ಬಾರ್ಯ, ವಿನಯ ಸವಣೂರು, ಸುದೇಶ್ ಚಿಕ್ಕಪುತ್ತೂರು, ಕಿರಣ್‌ಶಂಕರ್ ಮಲ್ಯ, ವಿದ್ವಾನ್ ಗಿರೀಶ್ ಕುಮಾರ್ ಸಹಿತ ನಿತ್ಯ ಕರಸೇವಕರು ಉಪಸ್ಥಿತರಿದ್ದರು.ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ವಂದಿಸಿದರು.

ಮೂರು ವರ್ಷ ದೇವಳದ ಸಮಿತಿಯೊಂದಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಹಿನ್ನೆಲೆಯಲ್ಲಿ ದೇವಳದ ಅರ್ಚಕರು,ಸಿಬ್ಬಂದಿ ವರ್ಗ,ಚಾಕ್ರಿಯವರು, ನಿತ್ಯ ಕರಸೇವಕರು ಮತ್ತು ಆಪ್ತ ಬಳಗಕ್ಕೆ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಶಲ್ಯ, ಸ್ಪಟಿಕದ ಮಾಲೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here