ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸರ್ವಾಧಿಕಾರಿಯಾಗಿ ಮುಂದೆ ಚುನಾವಣೆಯೇ ನಡೆಯದು- ಮಂಗಳೂರುನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯ ಮಟ್ಟದ ಸಮಾವೇಶದಲ್ಲಿ ಖರ್ಗೆ

0

ಬಿಜೆಪಿಯವರನ್ನು ಯಾವತ್ತೂ ನಂಬಬೇಡಿ-ಸಿದ್ಧರಾಮಯ್ಯ
ಗ್ಯಾರಂಟಿ ಯೋಜನೆಯಿಂದ `ಕೈ’ ಗಟ್ಟಿ, ಕರ್ನಾಟಕ ಸಮೃದ್ಧಿ-ಡಿಕೆಶಿ

ಮಂಗಳೂರು: ದೇಶದಲ್ಲಿ ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸರ್ವಾಧಿಕಾರಿ ಆಗುತ್ತಾರೆ. ಮುಂದೆ ಚುನಾವಣೆಯೇ ನಡೆಯದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮಂಗಳೂರು ಅಡ್ಯಾರ್‌ನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಫೆ.17 ರಂದು ನಡೆದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಗೆಲ್ಲಬೇಕು. ಅದಕ್ಕೆ ಪಕ್ಷದ ನಾಯಕರು, ಕಾರ್ಯಕರ್ತರು ಶ್ರಮಿಸಬೇಕು ಎಂದ ಅವರು, ಈಗಾಗಲೇ ನ್ಯಾಯಾಂಗ, ಇಡಿ, ಐಟಿ ಸೇರಿ ಎಲ್ಲಾ ಸ್ವಾಯತ್ತ ಸಂಸ್ಥೆಗಳನ್ನೂ ನಿಯಂತ್ರಣ ಮಾಡಲಾಗಿದೆ. ಮೋದಿಯವರಿಗೆ ಮತ್ತೆ ಅಧಿಕಾರ ಸಿಕ್ಕರೆ ಸರ್ವಾಧಿಕಾರಿ ಆಗ್ತಾರೆ. ಇಂಥವರಿಗೆ ಅಧಿಕಾರ ನೀಡಬೇಡಿ. ನಮ್ಮನ್ನು ಪೂರ್ತಿ ಮುಗಿಸಲು ಪಕ್ಷದ ಎಲ್ಲ ಅಕೌಂಟ್ ಸೀಝ್ ಮಾಡಿದರು.‌ ಆದರೆ ಬಿಜೆಪಿ 6 ಸಾವಿರ ಕೋಟಿ ರೂ.ಎಲೆಕ್ಷನ್ ಬಾಂಡ್‌ನ್ನು ಕಾಳಧನಿಕರಿಂದ ತೆಗೆದುಕೊಂಡಿದ್ದಾರೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಆಗಿದ್ದು, ರಾಜ್ಯದ ಮುಖ್ಯಮಂತ್ರಿ ದಿಲ್ಲಿಯಲ್ಲಿ ಸತ್ಯಾಗ್ರಹ ಮಾಡಬೇಕಾಯಿತು ಎಂದು ಹೇಳಿದರು.


ಧರ್ಮದ ಹೆಸರಲ್ಲಿ ರಾಜಕೀಯ ಮಾಡೋರು ಬಡವರು, ದಲಿತರನ್ನು ತುಳಿಯುವ ಗುರಿ ಇಟ್ಕೊಂಡಿದ್ದಾರೆ. ಇದಕ್ಕೆ ಜನರು ತಕ್ಕ ಉತ್ತರ ನೀಡಬೇಕು. ಕಾಂಗ್ರೆಸ್ ನೀಡಿದ, ಮಾಡಿದ ಸಾಧನೆಗಳನ್ನು ಕಾರ್ಯಕರ್ತರು ಜನರಿಗೆ ತಿಳಿಸಬೇಕು ಎಂದು ಹೇಳಿದ ಖರ್ಗೆಯವರು, ರಾಜ್ಯದಲ್ಲಿ ಗ್ಯಾರಂಟಿ ಯೋಜನೆ, ಬಜೆಟ್ ನೋಡಿದ ಮೇಲೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಲಿದ್ದೇವೆ. ಅದಕ್ಕೆ ತಳ ಹಂತದ ಕಾರ್ಯಕರ್ತರ ಹೊಣೆಗಾರಿಕೆ ಬೇಕು. ಮಂಗಳೂರು, ಉಡುಪಿ, ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿ ಸೀಟು ಗೆಲ್ಲಬೇಕು ಎಂದು ಕರೆ ನೀಡಿದರು.

ಬಿಜೆಪಿಯವರನ್ನು ಯಾವತ್ತೂ ನಂಬಬೇಡಿ-ಸಿದ್ಧರಾಮಯ್ಯ:
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾತನಾಡಿ, ಬಿಜೆಪಿಯವರನ್ನು ಯಾವತ್ತೂ ನಂಬಬೇಡಿ. ಅವರು ಅಧಿಕಾರಕ್ಕೆ ಬಂದಾಗ ನುಡಿದಂತೆ ನಡೆಯಲ್ಲ. 10 ವರ್ಷಗಳ ಹಿಂದೆ ನರೇಂದ್ರ ಮೋದಿ ನೀಡಿದ್ದ ಯಾವ ಪ್ರಮುಖ ಭರವಸೆಯನ್ನು ಈಡೇರಿಸಿದ್ದಾರೆ? ಎಂದು ಪ್ರಶ್ನಿಸಿದರು.


ಕೇವಲ ಕೋಮುವಾದ, ಧರ್ಮ, ಜಾತಿಗಳ ನಡುವೆ ಬೆಂಕಿ ಹಚ್ಚೋದು, ಭಾವನಾತ್ಮಕ- ಧಾರ್ಮಿಕ ವಿಚಾರಗಳನ್ನು ಇಟ್ಟುಕೊಂಡು ಬಿಜೆಪಿಯವರು ಅಧಿಕಾರ ನಡೆಸುತ್ತಿದ್ದಾರೆ.ಆದರೆ ನಾವು ನುಡಿದಂತೆ ನಡೆದಿದ್ದೇವೆ. ಎಲ್ಲಾ ಐದೂ ಗ್ಯಾರಂಟಿ ಭರವಸೆ ಈಡೇರಿಸಿದ್ದೇವೆ.ಮಹಿಳೆಯರು ಈವರೆಗೆ 155 ಕೋಟಿ ಬಾರಿ ಉಚಿತವಾಗಿ ಸರಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. 1.20 ಕೋಟಿ ಕುಟುಂಬಗಳಿಗೆ 5 ಕೆಜಿ ಅಕ್ಕಿಯ ಹಣವನ್ನು ನೀಡುತ್ತಿದ್ದೇವೆ.1.17 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಮೂಲಕ ಮಾಸಿಕ 2 ಸಾವಿರ ರೂ.ಹಣ ತಲುಪುತ್ತಿದೆ.ಈ ವರ್ಷ 36 ಸಾವಿರ ಕೋಟಿ ರೂ.ಗಳು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳ ಕೈ ತಲುಪಿದೆ.ಬಿಜೆಪಿಯವರಿಗೆ ಯಾವತ್ತಾದರೂ ಇಂಥ ಕೆಲಸ ಮಾಡಲು ಸಾಧ್ಯವಾಗಿದಾ ಎಂದು ಪ್ರಶ್ನಿಸಿದರು. ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಾಗೋದಿಲ್ಲ ಎಂದು ಹೇಳಿದ್ದ ಬಿಜೆಪಿಯವರು, ಕಾಂಗ್ರೆಸ್‌ನ ಗ್ಯಾರಂಟಿ ಪದವನ್ನು ಬಿಜೆಪಿಯವರು ಕದ್ದು ಈಗ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮನೆಗಳಿಗೆ ತಲುಪಿಸದೇ ಇದ್ದರೆ ಬಿಜೆಪಿಯವರು ನಾವೇ ಮಾಡಿದ್ದು ಅನ್ನುತ್ತಾರೆ ಎಂದು ಹೇಳಿದ ಸಿಎಂ,ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಸ್ವತಃ ನರೇಂದ್ರ ಮೋದಿಯೇ ಹೇಳಿದ್ದರು. ದಿವಾಳಿ ಆಗಿರುತ್ತಿದ್ದರೆ 3.71 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಲು ಆಗುತ್ತಿತ್ತಾ ಎಂದು ಪ್ರಶ್ನಿಸಿದರಲ್ಲದೆ, ರಾಜ್ಯ ಈಗ ಆರ್ಥಿಕವಾಗಿ ಸುಭದ್ರವಾಗಿದೆ.ಆದರೆ ಬಿಜೆಪಿ, ಮೋದಿ ಯಾಕೆ ಇಷ್ಟೊಂದು ಸುಳ್ಳು ಹೇಳುತ್ತಿದ್ದಾರೆಂದರೆ ಅವರಲ್ಲಿ ಬೇರೆ ಯಾವ ಬಂಡವಾಳವೇ ಇಲ್ಲ ಎಂದರು.


ಗ್ಯಾರಂಟಿ ಯೋಜನೆಯಿಂದ ಕೈ’ಗಟ್ಟಿಯಾಯಿತು, ಕರ್ನಾಟಕ ಸಮೃದ್ಧಿಯಾಯಿತು-ಡಿಕೆಶಿ:
ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಐದು ಬೆರಳು ಸೇರಿಸಿದರೆ ಮುಷ್ಟಿ ಗಟ್ಟಿಯಾಗುವ ಹಾಗೆ ನಾವು ನೀಡಿರುವ ಐದು ಗ್ಯಾರಂಟಿ ಯೋಜನೆಗಳಿಂದಕೈ’ ಗಟ್ಟಿಯಾಯಿತು.ಕರ್ನಾಟಕ ಸಮೃದ್ಧಿಯಾಯಿತು,ಕರ್ನಾಟಕ ಪ್ರಗತಿಯಾಯಿತು.ಜನರು ನಮಗೆ ಅಧಿಕಾರ ಕೊಟ್ಟ ನಂತರ ನಾವು ನುಡಿದಂತೆ ನಡೆದಿದ್ದೇವೆ.ಕೊಟ್ಟ ಐದು ಗ್ಯಾರಂಟಿ ಯೋಜನೆಗಳನ್ನೂ ಜಾರಿ ಮಾಡುವ ಮೂಲಕ ಜನತೆಗೆ ಶಕ್ತಿ ನೀಡಿದ್ದೇವೆ ಎಂದು ಹೇಳಿದರು.


ಇಲ್ಲಿರುವ ಕಾರ್ಯಕರ್ತರು ನಮ್ಮ ಯೋಜನೆ ಜಾರಿಯಿಂದಾಗಿ ಆತ್ಮವಿಶ್ವಾಸದಿಂದ ಜನರ ಮುಂದೆ ಹೋಗಿ ಮತ ಕೇಳಬಹುದು.ದೇಶದಲ್ಲಿ ಯಾವುದೇ ಸರ್ಕಾರ ಈ ರೀತಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಕಾರ್ಯಕ್ರಮ ದೇಶದ ಎಲ್ಲಾ ಜನರ ಕಾರ್ಯಕ್ರಮವಾಗಿದೆ.ಈ ಭಾಗದ ಜನ ದೇಶಕ್ಕೆ ಶಕ್ತಿ ತುಂಬಿದ್ದಾರೆ. ಇದೇ ಭೂಮಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಶಕ್ತಿ ಯೋಜನೆಯನ್ನು ಘೋಷಣೆ ಮಾಡಿದ್ದರು. ನಮ್ಮ ಸರ್ಕಾರ ಬಂದ ನಂತರ ಜಾರಿಗೆ ಬಂದ ಮೊದಲ ಗ್ಯಾರಂಟಿ ಯೋಜನೆ ಇದಾಗಿದೆ. ಇದರಿಂದ ಕೋಟ್ಯಂತರ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಈ ಯೋಜನೆ ಜಾರಿಯಾದ ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗಡೆಯವರು ಸರ್ಕಾರಕ್ಕೆ ಪತ್ರ ಬರೆದು,ನಿಮ್ಮ ಯೋಜನೆಯಿಂದ ಈ ಭಾಗದ ಪುಣ್ಯಕ್ಷೇತ್ರಗಳಿಗೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ.ದೇವಾಲಯಗಳಲ್ಲಿ ಮುಖ್ಯಮಂತ್ರಿಗಳ ಹೆಸರಲ್ಲಿ ಅರ್ಚನೆ ಮಾಡಿಸಲಾಗುತ್ತಿದೆ ಎಂದು ತಿಳಿಸಿದ್ದರು ಎಂದು ಡಿಕೆಶಿ ಹೇಳಿದರು.

ಮಂಗಳೂರು, ಉಡುಪಿ ಸ್ನೇಹಿತರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ನಾವು ಕೇವಲ 2 ಸೀಟು ಮಾತ್ರ ಗೆದ್ದಿದ್ದೇವೆ, ಹೆಚ್ಚು ಗೆಲ್ಲಲಾಗುವುದಿಲ್ಲ ಎಂದು ಭಾವಿಸಬೇಡಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ನಾವು ವಿರೋಧ ಪಕ್ಷದಲ್ಲಿದ್ದರೂ ಇದೇ ಉಡುಪಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದಿದ್ದೆವು. ನಮ್ಮ ಗ್ಯಾರಂಟಿ ಯೋಜನೆಗಳಿಂದ ಕರಾವಳಿ, ಮಲೆನಾಡಿನ ಮಹಿಳೆಯರು ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿದ್ದಾರೆ. ನಮ್ಮ ಜನಪರ ಕಾರ್ಯಕ್ರಮಗಳಿಂದ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ವಿಶ್ವಾಸವಿದೆ ಎಂದು ಡಿಕೆಶಿ ಹೇಳಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರದ ಮಾಜಿ ಸಚಿವರೂ ಆಗಿರುವ ಡಾ|ಎಂ.ವೀರಪ್ಪ ಮೊಯ್ಲಿ,ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮತ್ತಿತರ ನಾಯಕರು ಮಾತನಾಡಿದರು.

ರಾಜ್ಯ ಗೃಹ ಸಚಿವ ಡಾ|ಜಿ.ಪರಮೇಶ್ವರ್, ಮಾಜಿ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಶಾಸಕ ಅಶೋಕ್ ಕುಮಾರ್ ರೈ, ಸಚಿವರಾದ ದಿನೇಶ್ ಗುಂಡೂರಾವ್, ಮಂಕಾಳ ವೈದ್ಯ, ಎಂ.ಸಿ.ಸುಧಾಕರ್, ಕೆ.ವೆಂಕಟೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಜೆ.ಜಾರ್ಜ್, ಮಧು ಬಂಗಾರಪ್ಪ, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಆರ್.ವಿ.ದೇಶಪಾಂಡೆ,ಮೋಟಮ್ಮ, ಟಿ.ಬಿ.ಜಯಚಂದ್ರ,ಆಂಜನೇಯ, ಮಾಜಿ ಎಂ.ಪಿ.ಉಗ್ರಪ್ಪ, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್,ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹಾರೀಸ್ ನಳಪ್ಪಾಡ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್,ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿ,ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ, ಗಫೂರ್, ಐವನ್ ಡಿಸೋಜ,ರಾಜ್ಯದ ವಿವಿಧ ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರು,ಕಾಂಗ್ರೆಸ್‌ನ ವಿವಿಧ ಘಟಕಗಳ ಅಧ್ಯಕ್ಷರು ಸೇರಿದಂತೆ ಪಕ್ಷದ ನಾಯಕರು ವೇದಿಕೆಯಲ್ಲಿ ಇದ್ದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಶಾಸಕರೂ ಆಗಿರುವ ಹರೀಶ್ ಕುಮಾರ್ ಸ್ವಾಗತಿಸಿದರು.ವಿಧಾನ ಪರಿಷತ್ ಶಾಸಕ ಡಾ|ಮಂಜುನಾಥ ಭಂಡಾರಿ ವಂದಿಸಿದರು.ಮಾಜಿ ಜಿ.ಪಂ.ಅಧ್ಯಕ್ಷೆ ಮಮತಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.

ನಿಮ್ಮನ್ನು ಯಾಕೆ ಗೆಲ್ಲಿಸಬೇಕು..?
ನಳಿನ್ ಕುಮಾರ್ ಕಟೀಲ್ ಅವರೇ ಒಂದೇ ಒಂದು ದಿನ ರಾಜ್ಯದ ಪರವಾಗಿ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿದಿಯೇನಪ್ಪಾ? ತಾಯಿ ಶೋಭಾ ಕರಂದ್ಲಾಜೆ ನೀನಾದ್ರೂ ರಾಜ್ಯದ ಪರವಾಗಿ ಒಂದೇ ಒಂದು ಮಾತಾಡಿದ್ದೀಯೇನಮ್ಮಾ? ನಿಮ್ಮನ್ನು ಮಂಗಳೂರು, ಉಡುಪಿ ಜಿಲ್ಲೆಯ ಸ್ವಾಭಿಮಾನಿ ಜನತೆ ಏಕೆ ಗೆಲ್ಲಿಸಬೇಕು ಎಂದು ಸಿಎಂ ಸಿದ್ಧರಾಮಯ್ಯ ಕೇಳಿದರು.
ದಕ್ಷಿಣ ಕನ್ನಡದ ಜನತೆಗೆ ರಾಜಕೀಯ ಪ್ರಜ್ಞಾವಂತಿಕೆ ಹೆಚ್ಚಾಗಿದೆ.ಸತ್ಯ ಹೇಳುವವರು ಮತ್ತು ಸುಳ್ಳು ಹೇಳುವವರು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಪ್ರಜ್ಞಾವಂತಿಕೆಯೂ ಇದೆ. ಈ ಕಾರಣಕ್ಕೆ ಮಂಗಳೂರಿನಲ್ಲೇ ಮೊದಲ ಸಭೆ ಮಾಡುವ ಮೂಲಕ ಲೋಕಸಭೆ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ ಎಂದು ಸಿದ್ಧರಾಮಯ್ಯ ಹೇಳಿದರು.

ಏನೇ ಸಮಸ್ಯೆ ಬಂದರೂ ನನಗೆ ಕರೆ ಮಾಡಿ
ಪುತ್ತೂರಿನಿಂದ 60 ಬಸ್‌ಗಳು ಮತ್ತು 75 ಕಾರುಗಳಲ್ಲಿ ನಾವು ಕಾರ್ಯಕರ್ತರೊಂದಿಗೆ ಮಂಗಳೂರು ಸಮಾವೇಶಕ್ಕೆ ತೆರಳುತ್ತಿದ್ದೇವೆ.ಮಂಗಳೂರು ಅಡ್ಯಾರ್ ಗಾರ್ಡ್‌ನ್‌ನಲ್ಲಿ ಎಲ್ಲರೂ ಇಳಿದು ಸಮಾವೇಶ ಸ್ಥಳಕ್ಕೆ ಹೋಗಬೇಕು.ನಾವು ಅಲ್ಲಿಗೆ ಹೋಗುವಾಗ ಅಲ್ಲಿನವರಿಗೆ ಪುತ್ತೂರಿನಿಂದ ಬಂದಿದ್ದಾರೆ ಎಂಬುದು ಗೊತ್ತಾಗಬೇಕು.ಮಂಗಳೂರಿಗೆ ಹೋಗಿ ಹಿಂದಕ್ಕೆ ಬಂದು ಮನೆಗೆ ತಲುಪುವ ನಡುವೆ ಏನೇ ಸಮಸ್ಯೆ ಬಂದರೂ ನನಗೆ ಕರೆ ಮಾಡಿ ಎಂದು ಸಮಾವೇಶಕ್ಕೆ ಹೊರಡುವ ಸಂದರ್ಭ ಕಾರ್ಯಕರ್ತರು,ಪಕ್ಷದ ಪ್ರಮುಖರಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ತಿಳಿಸಿದರು.

LEAVE A REPLY

Please enter your comment!
Please enter your name here