ದ.ಕ.ಜಿಲ್ಲೆ ಸೇರಿದಂತೆ ದೇಶದ 60 ಕಡೆಗಳಲ್ಲಿ ಲೋಕಸಭೆಗೆ ಎಸ್‌ಡಿಪಿಐ ಸ್ಪರ್ಧೆ-ಫೆ. 20ಕ್ಕೆ ಪುತ್ತೂರಿನಲ್ಲಿ ಕಾರ್ಯಕರ್ತರ ಸಮಾವೇಶ

0

ಪುತ್ತೂರು: ದಕ್ಷಿಣ ಕನ್ನಡ ಸೇರಿದಂತೆ ದೇಶದ 60 ಕಡೆಗಳಲ್ಲಿ ಲೋಕಸಭೆಗೆ ಎಸ್‌ಡಿಪಿಐ ಸ್ಪರ್ಧಿಸಲಿದೆ. ಪಕ್ಷದ ಕಾರ್ಯಕರ್ತರನ್ನು ಮತ್ತು ದೇಶದ ಬಹುಜನ ಸಮಾಜವನ್ನು ಎಚ್ಚರಗೊಳಿಸುವ ನಿಟ್ಟಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಫೆ. 20ರಂದು ಸಂಜೆ 7ಗಂಟೆಗೆ ಸರಿಯಾಗಿ ಪುತ್ತೂರು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ ಜರಗಲಿರುವುದು ಎಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇಬ್ರಾಹಿಂ ಸಾಗರ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಪ್ರಸಕ್ತ ದೇಶದಲ್ಲಿ ಸಂವಿಧಾನ ವಿರೋಧಿ ಆಡಳಿತದಿಂದಾಗಿ ಪ್ರಜಾಪ್ರಭುತ್ವವು ಅಪಾಯದತ್ತ ಸಾಗುತ್ತಿರುವುದಲ್ಲದೆ ಪ್ರಸಕ್ತ ರಾಜ್ಯ ಸರಕಾರವು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಸಮಾಜದಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಾ ಬರುತ್ತಿದ್ದು ಈ ಬಗ್ಗೆ ಪಕ್ಷದ ಕಾರ್ಯಕರ್ತರನ್ನು ಮತ್ತು ದೇಶದ ಬಹುಜನ ಸಮಾಜವನ್ನು ಎಚ್ಚರಗೊಳಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಸೋಶಿಯಲ್ ಡೆಮಾಕ್ರಟಿಕ್ ಪಕ್ಷವು ಕಾರ್ಯಕರ್ತರಿಗೆ ದೇಶದ ಪ್ರಸಕ್ತ ರಾಜಕೀಯತೆಯನ್ನು ತಿಳಿಸುವ ಕಾರ್ಯ ಮಾಡಲಿದೆ. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ಮತ್ತು ರಾಜ್ಯ ಮತ್ತು ಜಿಲ್ಲಾ ಮುಖಂಡರುಗಳು ಸಮಾವೇಶದಲ್ಲಿ ಬಾಗವಹಿಸಲಿದ್ದಾರೆ ಎಂದವರು ಹೇಳಿದರಲ್ಲದೆ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವು ನಡೆಯಲಿದೆ.

ಈಗಾಗಲೇ ಸುಮಾರು 23 ರಾಜ್ಯಗಳಲ್ಲಿ ಪಕ್ಷವು ಸಂಘಟನೆಯಲ್ಲಿದ್ದು, ಜನರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಹೋರಾಟ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ದೇಶದ 60 ಕಡೆಗಳಲ್ಲಿ ಪಕ್ಷದಿಂದ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಲಾಗುವುದು. ಅಭ್ಯರ್ಥಿಗಳ ಪಟ್ಟಿಯನ್ನು ಫೆ. 27ರಂದು ಬಿಡುಗಡೆಗೊಳಿಸಲಾಗುವುದು ಎಂದವರು ಹೇಳಿದರು.


ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಕಾಣಬೇಕು:
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಅವರು ಮಾತನಾಡಿ ಹಸಿವು ಮುಕ್ತ ಮತ್ತು ಭಯ ಮುಕ್ತ ರಾಷ್ಟ್ರ ಎಂಬ ಘೋಷಣೆಯೊಂದಿಗೆ ಪಕ್ಷವು ಎಲ್ಲಾ ಜಾತಿ ಧರ್ಮಗಳಲ್ಲಿ ಏಕತೆಯನ್ನು ಮೂಡಿಸುವ ಕೆಲಸ ಮಾಡುತ್ತಿದೆ. ಈ ದೇಶ ಬರಿ ಹಿಂದೂ ದೇಶವೆಂಬ ಕಲ್ಪನೆಯಲ್ಲಿ ಆಡಳಿತ ನಡೆಯುತ್ತಿರುವಾಗ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕೇವಲ ಒಂದು ಜಾತಿ, ಧರ್ಮವನ್ನು ಸೀಮಿತವಾಗದೆ ಬಸವಣ್ಣ, ಅಂಬೆಡ್ಕರ್, ನಾರಾಯಣ ಗುರುಗಳ ಕಲ್ಪಣೆಯನ್ನು ಮುಂದಿಟ್ಟು ದೇಶದಲ್ಲಿ ಸೌಹಾರ್ದತೆಯನ್ನು ಕಂಡುಕೊಳ್ಳಬೇಕೆಂದರು. ಪತ್ರಿಕಾಗೋಷ್ಟಿಯಲ್ಲಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಉಸ್ಮಾನ್ ಎ.ಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here