ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರಿಗೆ ಡಾಕ್ಟರೇಟ್ ಪದವಿ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರಿಗೆ ರಾಜಸ್ಥಾನ ಜೆ.ಜೆ.ಟಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.


ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೊರವರು ಡಾ.ಬಾಪು ನರಸಿಂಗ ಚೌಗುಲೆರವರ ಮಾರ್ಗದರ್ಶನದಲ್ಲಿ ‘ದ.ಕ ಜಿಲ್ಲೆಯ ಜನರ ಮನರಂಜನಾ ಚಟುವಟಿಕೆಗಳು ಮತ್ತು ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಅವರ ಬಿಡುವಿನ ವೇಳೆಯ ಚಟುವಟಿಕೆಗಳು(A Study on the Recreational Activities of People In Dakshina Kannada District and their leisure time activities during Covid-19 Pandamic)’’ ಕುರಿತಾಗಿ ಮಂಡಿಸಿದ ಅಧ್ಯಯನ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.

ಎಲ್ಯಾಸ್ ಪಿಂಟೋರವರು ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ಪದವಿಯನ್ನು, ಮೈಸೂರು ವಿಶ್ವವಿದ್ಯಾಲಯದಲ್ಲಿ ದ್ವಿತೀಯ ರ‍್ಯಾಂಕಿನೊಂದಿಗೆ ಎಂ.ಪಿ.ಎಡ್ ಪದವಿಯನ್ನು ಗಳಿಸಿದ್ದು ಮಾತ್ರವಲ್ಲ ಪ್ರತಿಷ್ಠಿತ ಕೆ.ಎಸ್.ಇ.ಟಿ ಪರೀಕ್ಷೆಯನ್ನು ಪೂರ್ಣಗೊಳಿಸಿರುತ್ತಾರೆ.


ಎಲ್ಯಾಸ್ ಪಿಂಟೋರವರು ‘ಯೋಗದ ಆಯಾಮಗಳು ಮತ್ತು ಆರೋಗ್ಯಕರ ಜೀವನ’ ಎಂಬ ಬಗ್ಗೆ ಪುಸ್ತಕವನ್ನು ಬರೆದಿದ್ದಾರೆ ಜೊತೆಗೆ ‘ಖಿನ್ನತೆಗೆ ಯೋಗ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಯೋಗ’ ಎಂಬ ಪುಸ್ತಕವೂ ಪ್ರಕಟವಾಗಿದೆ. ಇದರೊಂದಿಗೆ 3 ಅಂತರ್ರಾಷ್ಟ್ರೀಯ ಸೆಮಿನಾರ್‌ಗಳು, 4 ರಾಷ್ಟ್ರೀಯ ವಿಚಾರ ಸಂಕಿರಣಗಳು, ಹಲವಾರು ಕಾರ್ಯಾಗಾರಗಳಲ್ಲಿ ಭಾಗವಹಿಸಿರುತ್ತಾರೆ. ಎಲ್ಯಾಸ್ ಪಿಂಟೋರವರು ಪೂರ್ವ ಮತ್ತು ಪಾಶ್ಚಿಮಾತ್ಯ ನೃತ್ಯ ಸ್ಪರ್ಧೆಯಲ್ಲಿ 5 ಬಾರಿ ರಾಜ್ಯ ಮಟ್ಟದ ವಿಜೇತರಾಗಿ, ಜಿಲ್ಲಾ ಮಟ್ಟದ ಫಿಲ್ಮಿ ಡ್ಯಾನ್ಸ್ ಸ್ಪರ್ಧೆಯಲ್ಲಿ 10 ಬಾರಿ ವಿಜೇತರಾಗಿ, ಜಿಲ್ಲೆಯಲ್ಲಿ 1990 ರಿಂದ 2000ರ ವರಗೆ ನಂಬರ್ ವನ್ ಡ್ಯಾನ್ಸ್ ಗ್ರೂಪ್ ‘ಪಿಂಟೋ ಬ್ರದರ್ಸ್’ ಇದರ ಸಂಯೋಜಕರಾಗಿ ಮನ ಸೆಳೆದಿದ್ದರು.


ಕ್ರೀಡಾ ಸಾಧನೆಗಳು;
ಮೈಸೂರು ವಿಶ್ವವಿದ್ಯಾನಿಲಯ ಅಂತರ್-ಕಾಲೇಜು ಅಥ್ಲೆಟಿಕ್ ಕೂಟದಲ್ಲಿ ಜಾವೆಲಿನ್ ಎಸೆತ ಮತ್ತು ಪೋಲ್‌ವಾಲ್ಟ್‌ನಲ್ಲಿ ಚಿನ್ನದ ಪದಕ, ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ 75 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ, ಪೋಲ್‌ವಾಲ್ಟ್ ಮತ್ತು ಜಾವೆಲಿನ್ ಎಸೆತದಲ್ಲಿ ಅಂತರ್ ಜಿಲ್ಲಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ, ಮಂಗಳೂರು ವಲಯ ಕ್ರಿಕೆಟ್ ತಂಡಕ್ಕೆ ಆಯ್ಕೆ, ಹಲವಾರು ಬಾರಿ ಕೆ.ಎಸ್.ಸಿ.ಎ ಮಂಗಳೂರು ವಲಯದಲ್ಲಿ ಪ್ರಥಮ ಡಿವಿಷನ್‌ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಮಂಗಳೂರು ವಲಯ ‘ಬಿ’ ಡಿವಿಷನ್ ಕ್ರಿಕೆಟ್ ಲೀಗ್‌ನಲ್ಲಿ ಕಪ್ತಾನನಾಗಿ ತಂಡವನ್ನು ಮುನ್ನೆಡೆಸಿರುತ್ತಾರೆ.


ವೃತ್ತಿ ಸಾಧನೆಗಳು:
ಎಲ್ಯಾಸ್ ಪಿಂಟೋರವರು ತನ್ನ ವೃತ್ತಿ ಜೀವನದಲ್ಲಿ 300ಕ್ಕೂ ಹೆಚ್ಚು ಕ್ರೀಡಾಪಟುಗಳು ಅಂತರ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಮಟ್ಟದ ಕ್ರೀಡೆಗಳು ಮತ್ತು ಆಟಗಳ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. 400 ಪಿಯು ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೆಗಳು ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಇವರ ಗರಡಿಯಲ್ಲಿ ವಿಶ್ವವಿದ್ಯಾನಿಲಯ ಮತ್ತು ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರೆನಿಸಿಕೊಂಡಿರುತ್ತಾರೆ. ಅನೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತರಾಷ್ಟ್ರೀಯ ಕಬಡ್ಡಿ ಆಟಗಾರರಾದ ಉದಯ ಚೌಟ, ಮತ್ತು ಪ್ರಶಾಂತ್ ಕುಮಾರ್ ರೈ(ಪ್ರೊ ಕಬಡ್ಡಿ), ರೋಸ್ ಮೇರಿ ಪ್ರೆಸಿಲ್ಲಾರವರು ಎಲ್ಯಾಸ್ ಪಿಂಟೋರವರಲ್ಲಿ ತರಬೇತಿ ಪಡೆದಿರುತ್ತಾರೆ. ಹಲವಾರು ಬಾರಿ ವಿಶ್ವವಿದ್ಯಾನಿಲಯ ಮತ್ತು ರಾಜ್ಯ ಮಟ್ಟದ ಅಥ್ಲೆಟಿಕ್ಸ್, ಕಬಡ್ಡಿ, ವೇಟ್‌ಲಿಫ್ಟಿಂಗ್, ಖೋ-ಖೋ, ವಾಲಿಬಾಲ್, ಫುಟ್ಬಾಲ್ ಮತ್ತು ಕ್ರಿಕೆಟ್ ಸ್ಪರ್ಧೆಗಳಲ್ಲಿ ತಂಡಗಳು ಚಾಂಪಿಯನ್ ಆಗಿರುತ್ತದೆ. ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜುನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಹಲವಾರು ಕ್ರೀಡಾಪಟುಗಳು ಅಖಿಲ ಭಾರತ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿರುತ್ತಾರೆ ಅಲ್ಲದೆ ಕಾಲೇಜಿಗೆ 400ಮೀ. ಟ್ರ್ಯಾಕ್ ಕ್ರೀಡಾಂಗಣ, ಯುಜಿಸಿ ಅನುದಾನದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಾಣ ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.


ಹಲವು ಸಂಸ್ಥೆಗಳಲ್ಲಿ ಸದಸ್ಯತ್ವ:
ಎಲ್ಯಾಸ್ ಪಂಟೋರವರು ಮಾಯಿದೆ ದೇವುಸ್ ಚರ್ಚ್ ಅಧೀನದಲ್ಲಿರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿ.ಎಲ್.ಸಿ)ಯ ಪ್ರಸ್ತುತ ಅಧ್ಯಕ್ಷರಾಗಿ(3ನೇ ಬಾರಿ), ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ನಿರ್ದೇಶಕರ ಸಂಘದ ಉಪಾಧ್ಯಕ್ಷರಾಗಿ, ಜಿಲ್ಲಾ ಮತ್ತು ತಾಲೂಕು ಕಬಡ್ಡಿ ಸಂಘದಲ್ಲಿ ಸದಸ್ಯರಾಗಿ, ಅಂತರ್ರಾಷ್ಟ್ರೀಯ ರೋಟರಿ ಕ್ಲಬ್ ಪುತ್ತೂರು ಯುವ ಸದಸ್ಯರಾಗಿ, ಜಿಲ್ಲಾ ಮತ್ತು ರಾಜ್ಯ ವೈಟ್‌ಲಿಪ್ಟಿಂಗ್ ಸಂಘದ ಸದಸ್ಯರಾಗಿ, ಕೆಎಸ್‌ಸಿಎ ಅಧೀನದ ಯೂನಿಯನ್ ಕ್ರಿಕೆಟರ್ಸ್ ಪುತ್ತೂರು ಇದರ ಸದಸ್ಯರಾಗಿ, ತಾಲೂಕು ವಾಲಿಬಾಲ್ ಸಂಘದ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಅಧಿಕಾರಿ/ಕೋಚ್ ಆಗಿ:
ಎಲ್ಯಾಸ್ ಪಿಂಟೋರವರು ಅಮೆಚೂರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳ ಅಧಿಕಾರಿಯಾಗಿ, ರಾಷ್ಟ್ರೀಯ ಮಟ್ಟದ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಮೀಟ್‌ನಲ್ಲಿ ಹಲವಾರು ಬಾರಿ ಆಫೀಶಿಯಲ್ ಆಗಿ ಭಾಗವಹಿಸಿರುತ್ತಾರೆ. ಜೊತೆಗೆ ಮಂಗಳೂರು ವಿಶ್ವವಿದ್ಯಾನಿಲಯ ಮಹಿಳಾ ಕ್ರಿಕೆಟ್ ತಂಡ, ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಪಂದ್ಯಾವಳಿಯ, ಯೂನಿಯನ್ ಕ್ರಿಕೆಟ್ ಇದರ ಅಧಿಕೃತ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಪ್ರಸ್ತುತ ಇವರು ತಾಯಿ ಜ್ಯುಲಿಯಾನಾ ಪಿಂಟೋ, ಪತ್ನಿ ಫಿಲೋಮಿನಾ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ಮೋಲಿ ಫೆರ್ನಾಂಡೀಸ್, ಪುತ್ರಿ ಏಂಜಲಿಕಾ ಮೆಲಾನಿ, ಪುತ್ರ ಕ್ರಿಸ್ ಏಂಜೆಲೊರವರೊಂದಿಗೆ ಕೊಂಬೆಟ್ಟು ಎಂಬಲ್ಲಿ ವಾಸವಾಗಿದ್ದಾರೆ3

LEAVE A REPLY

Please enter your comment!
Please enter your name here