ನೆಲ್ಯಾಡಿ ಲಹರಿ ಸಂಗೀತ ಕಲಾಕೇಂದ್ರದ ವಾರ್ಷಿಕೋತ್ಸವ – ಕೌಶಲ್ಯ ಭರಿತವಾದ ಶಿಕ್ಷಣ ವಿದ್ಯಾರ್ಥಿಗಳಿಗೆ ನಿಜವಾದ ಶಿಕ್ಷಣವಾಗಿದೆ – ಕಡಬ ಉಪತಹಶೀಲ್ದಾರ್‌ ಗೋಪಾಲ್.ಕೆ

0

ನೆಲ್ಯಾಡಿ: ವಿದ್ಯಾರ್ಥಿಯಾದವನು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಅದರಲ್ಲೂ ತನಗಿರುವ ಹೆಚ್ಚಿನ ಆಸಕ್ತಿಯ ಬಗ್ಗೆ ಒತ್ತುಕೊಟ್ಟು ಕೌಶಲ್ಯ ಭರಿತವಾದ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡು ವಿದ್ಯೆಯೊಂದಿಗೆ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ವಿದ್ಯಾಸಂಸ್ಥೆಗಳಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳುವುದರಿಂದ ಸದೃಢವಾಗಿ ಬೆಳೆಯಲು ಸಾಧ್ಯ ಎಂದು ಕಡಬ ಉಪತಹಶೀಲ್ದಾರ್ ಗೋಪಾಲ್.ಕೆ ಹೇಳಿದ್ದಾರೆ. ನೆಲ್ಯಾಡಿ ಲಹರಿ ಸಂಗೀತ ಕಲಾ ಕೇಂದ್ರ ಐಐಸಿಟಿ ಇದರ ಎರಡನೇ ವರ್ಷದ ವಾರ್ಷಿಕೋತ್ಸವ ರಾಗಾಂತರಂಗ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೆಲ್ಯಾಡಿ ಸೈಂಟ್ ಅಲ್ಫೋನ್ಸ ಚರ್ಚ್ ನ ಧರ್ಮಗುರುಗಳಾದ ರೆ.ಫಾ ಶಾಜಿ ಮ್ಯಾತ್ಯು ಮಾತನಾಡಿ, ನಮ್ಮ ಮನಸ್ಸಿನಲ್ಲಿರುವ ರಾಗ, ದ್ವೇಷಗಳನ್ನು ಹೋಗಲಾಡಿಸಲು ಇರುವ ಸರಳ ವಿಧಾನ ಸಂಗೀತ, ನಾಟಕ ಮುಂತಾದವುಗಳು. ಇವುಗಳು ಸಮಾಜದಲ್ಲಿರುವ ದ್ವೇಷಗಳನ್ನು ಮನಸ್ಸಿನಿಂದ ಹೋಗಲಾಡಿಸಲು ಸಹಾಯಕವಾಗಿದೆ. ಸಂಗೀತ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಇಳಿಯ ವಯಸ್ಸಿನಲ್ಲಿ ಗೌರವಿಸಿ ಸನ್ಮಾನಿಸುವುದು ಸಂತೋಷದ ವಿಷಯ. ಇಂಥ ಸಂಗೀತ ಶಾಲೆಗಳಿಂದ ನಮ್ಮ ನಾಡು ಶಾಂತಿಯಿಂದ, ಪ್ರೀತಿಯಿಂದ, ನೆಮ್ಮದಿಯಿಂದ ಬೆಸುಗೆಯಿಂದ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ನೆಲ್ಯಾಡಿ ಲಹರಿ ಸಂಗೀತ ಕಲಾ ಕೇಂದ್ರ ಐಐಸಿಟಿ ಅಧ್ಯಕ್ಷ ಸತೀಶ್ ಕೆಎಸ್ ದುರ್ಗಾಶ್ರೀ, ನೆಲ್ಯಾಡಿ ಜೇಸಿಐ ಅಧ್ಯಕ್ಷರಾದ ಸುಚಿತ್ರಾ.ಜೆ ಬಂಟ್ರಿಯಲ್, ಸಂಗೀತ ಗುರುಗಳಾದ ವಿಶ್ವನಾಥ ಶೆಟ್ಟಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಕ್ಷಿಪ್ತ ನೃತ್ಯ ಕಲಾ ಶಾಲೆ ನೆಲ್ಯಾಡಿ- ಮಂಗಳೂರು ಇದರ ನೃತ್ಯ ಗುರುಗಳಾದ ವಿದುಷಿ ಸುರೇಖ ಹರೀಶ್ ಅವರಿಗೆ ಲಹರಿ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ವಾನ್ ಶ್ರೀಕಾಂತ ಸಂಗೀತ ಗುರುಗಳು ಕುದ್ಮಾರು, ಡಾ. ರಾಮಕೃಷ್ಣ ಭಟ್ ಅಂಜರ ಆಯುರ್ವೇದ ವೈದ್ಯರು, ಸಂಗೀತ ಕಲಾವಿದರು, ಕಮಲ ದೈವಾರಾಧನೆ ಪಾಡ್ದನ, ಜೆ. ಮಾಧವ ಆಚಾರ್ಯ ಬಲ್ಯ, ಹಾರ್ಮೋನಿಯಂ ಕಲಾವಿದರು, ಸುಂದರ ಗೌಡ ಯಕ್ಷಗುರುಗಳು, ಲತೀಶ್ ಯಕ್ಷಗಾನ ಕಲಾಕೇಂದ್ರ ಅರಸಿನಮಕ್ಕಿ ಇವರನ್ನು ಸನ್ಮಾನಿಸಲಾಯಿತು.

ವಿ.ಕೆ ಜೋಡಿ ತಾರೆ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಕೃಷ್ಣರಾಜ್ ಸುಳ್ಯ ಮತ್ತು ನವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಕಲಾ ಕೇಂದ್ರದ ಸಂಗೀತ ಗುರುಗಳಾದ ವಿಶ್ವನಾಥ ಶೆಟ್ಟಿ.ಕೆ ಸ್ವಾಗತಿಸಿದರು.
ಕಲಾ ಕೇಂದ್ರ ನಿರ್ದೇಶಕ ಪ್ರಶಾಂತ್ ಸಿ.ಎಚ್ ವಂದಿಸಿದರು. ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಕೀಬೋರ್ಡ್ ವಾದನ, ಸುಗಮ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here