ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ – ಹೊರೆಕಾಣಿಕೆಯ ಪೂರ್ವಭಾವಿ ಸಭೆ

0

ಪುತ್ತೂರು: ವಾಣಿಯನ್ ಸಮುದಾಯದವರು ಆರಾಧಿಸಿಕೊಂಡು ಬರುತ್ತಿರುವ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಮಾ.1ರಿಂದ 7ರವರೆಗೆ ನಡೆಯಲಿರುವ ಕಳಿಯಾಟ ಮಹೋತ್ಸವಕ್ಕೆ ಪುತ್ತೂರಿನಿಂದ ಹೊರೆಕಾಣಿಕೆ ಸಮರ್ಪಣೆಯ ಕುರಿತ ಪೂರ್ವಭಾವಿ ಸಭೆಯು ಫೆ.17ರಂದು ಪುತ್ತೂರು ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಸಾದ್ ಕಲ್ಲರ್ಪೆರವರ ಅಧ್ಯಕ್ಷತೆಯಲ್ಲಿ ಪುತ್ತೂರಿನ ಸೆಲ್ಕೋ ಸೋಲಾರ್ ಸಂಸ್ಥೆಯ ಕಛೇರಿಯಲ್ಲಿ ನಡೆಯಿತು.

ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ವಾಣಿಯನ್ ಸಮುದಾಯದವರ ಆರಾಧನೆಯ ಏಕೈಕ ಮುಚ್ಚಿಲೋಟ್ ಭಗವತಿ ಕ್ಷೇತ್ರವು ಕಳೆದ 2020ರಲ್ಲಿ ಕ್ಷೇತ್ರವು ಸಂಪೂರ್ಣವಾಗಿ ನವೀಕರಣಗೊಂಡು ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆದಿತ್ತು. ಇದೀಗ ಸುಮಾರು 20 ವರ್ಷಗಳ ನಂತರ ನಡೆಯಲಿರುವ ಕಳಿಯಾಟ ಮಹೋತ್ಸವದ ಸಂಭ್ರಮಕ್ಕೆ ಕ್ಷೇತ್ರದಲ್ಲಿ ಸರ್ವ ಸಿದ್ಧತೆಗಳು ಭರದಿಂದ ಸಾಗಿದೆ. 7 ದಿನಗಳ ಕಾಲ ನಡೆಯಲಿರುವ ಕಳಿಯಾಟ ಮಹೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬರುವ ನಿರೀಕ್ಷೆಯಿದ್ದು ಆಗಮಿಸುವ ಭಕ್ತಾದಿಗಳಿಗೆ ಕ್ಷೇತ್ರದಲ್ಲಿ ನಿರಂತರವಾಗಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಕಳಿಯಾಟ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ತಿಮ್ಮಪ್ಪ ಪಾಟಾಳಿ ಪುತ್ತೂರು ಮಾಹಿತಿ ನೀಡಿದರು.


ಪುತ್ತೂರು ಹಾಗೂ ಕಡಬ ತಾಲೂಕಿನ ಸಮಾಜ ಬಾಂಧವರು ಹಾಗೂ ಭಕ್ತಾದಿಗಳಿಂದ ಹೊರೆ ಕಾಣಿಕೆ ಸಮರ್ಪಿಸುವ ಕುರಿತು ಚರ್ಚಿಸಲಾಗಿದ್ದು ಪುತ್ತೂರು ಸಂಘದ ವ್ಯಾಪ್ತಿಗೊಳಪಟ್ಟ ಸಮಾಜ ಬಾಂಧವರು ಹಾಗೂ ಭಕ್ತಾದಿಗಳಿಂದ ಮಾ.2ರಂದು ಹಸಿರುವಾಣಿ ಸಮರ್ಪಣೆಯು ನಡೆಯಲಿದೆ. ಹೊರೆಕಾಣಿಕೆ ಮೆರವಣಿಗೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಚಾಲನೆ ದೊರೆಯಲಿದ್ದು, ನಂತರ ಮೆರವಣಿಗೆಯು ದರ್ಬೆ-ಸಂಟ್ಯಾರು-ರೆಂಜ-ಆರ್ಲಪದವು-ಪಾಣಾಜೆ ಮಾರ್ಗವಾಗಿ ಪೆರ್ನೆ ಮುಚ್ಚಿಲೋಟ್ ಕ್ಷೇತ್ರ ತಲುಪಲಿದೆ. ಈ ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಭಕ್ತಾದಿಗಳು ಸಹಕರಿಸುವಂತೆ ಪುತ್ತೂರು ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಸಾದ್ ವಿನಂತಿಸಿದರು. ಕಾರ್ಯದರ್ಶಿ ದಾಮೋದರ ಪಾಟಾಳಿ, ಪುತ್ತೂರು ಸಂಘದ ಉಪಾಧ್ಯಕ್ಷ ಬೇಬಿ ಕುಂತೂರು, ನಾರಾಯಣ ಪಾಟಾಳಿ ಬಲ್ನಾಡು, ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಪ್ಪು ಪಾಟಾಳಿ, ಈಶ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಗೋಪಾಲಕೃಷ್ಣ ಎಂ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಜಯಲಕ್ಷ್ಮೀ ಡಿ.ಎಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಆಲಂಕಾರು ವಂದಿಸಿದರು.

LEAVE A REPLY

Please enter your comment!
Please enter your name here