ಪುತ್ತೂರು: ರೈತರಿಗೆ ಸಹಕಾರ ಸಂಘಗಳ ಮೂಲಕ ನೀಡುವ ಬೆಳೆ ಸಾಲವನ್ನು 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಏರಿಸಲಾಗಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ರೈತರಿಗೆ ತಲುಪುವಲ್ಲಿ ವಿಫಲವಾಗಿದೆ. 2023-24ನೇ ಸಾಲಿನ ಬಜೆಟ್‌ನಲ್ಲಿ ಹೆಚ್ಚಿಸಲಾದ ಈ ಮಿತಿ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಪ್ರಮುಖ ಅಂಶವಾಗಿದ್ದು ಈ ಬಾರಿಯ ಬಜೆಟ್‌ನಲ್ಲಿ ಈ ಯೋಜನೆ ಮುಂದುವರಿಸುವ ಕುರಿತು ಸಿಎಂ ಪುನರುಚ್ಚರಿಸಿದ್ದಾರೆ.
ಈ ಯೋಜನೆ ಬಗ್ಗೆ ಸರಕಾರ ಸೆ.12ರಂದು ಸಹಕಾರ ಇಲಾಖೆ ಮೂಲಕ ಆದೇಶ ಪ್ರಕಟಿಸಿದೆ. ಆದರೆ ಈ ಸಾಲ ನೀಡಲು ಅಗತ್ಯವಿರುವ ನಿಧಿ ಬಿಡುಗಡೆ ಮಾಡಿಲ್ಲ. ಇದರಿಂದ ಹೆಚ್ಚಿಸಿರುವ ಸಾಲ ಮೊತ್ತವನ್ನು ಸಹಕಾರ ಸಂಘಗಳು ಸ್ವಂತ ನಿಽಯಿಂದ ನೀಡಬೇಕಾಗಿದೆ. ಸಾವಿರಾರು ಸದಸ್ಯರಿಗೆ ಸ್ವಂತ ನಿಧಿಯಿಂದ ಸಾಲ ನೀಡಿದರೆ ಅದು ಸಹಕಾರ ಸಂಘಗಳ ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಕಾರಣದಿಂದ ಸಹಕಾರ ಸಂಘಗಳು ಹೆಚ್ಚಿನ ಸಾಲದ ಪ್ರಮಾಣದ ಮೊತ್ತವನ್ನು ರೈತರಿಗೆ ನೀಡಲು ಹಿಂದೇಟು ಹಾಕುತ್ತಿವೆ. ಇದರಿಂದ ಸರಕಾರ ಯೋಜನೆ ಘೋಷಿಸಿದ್ದರೂ ಇದು ಜಿಲ್ಲೆಯ ಮಟ್ಟಿಗೆ ಫಲಾನುಭವಿಗಳನ್ನು ತಲುಪದ ಯೋಜನೆಯಾಗಿ ಮುಂದುವರಿದಿದೆ. ಹಲವೆಡೆ 3 ಲಕ್ಷ ರೂ. ಮರುಪಾವತಿ ಮಾಡಿರುವ ರೈತ ಸದಸ್ಯರು ಕಳೆದ ಹಲವು ತಿಂಗಳುಗಳಿಂದ ಹೆಚ್ಚುವರಿ ಮೊತ್ತ ಪಡೆಯಲು ಕಾದು ಕುಳಿತಿದ್ದಾರೆ. ಸರಕಾರ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಮೊತ್ತವನ್ನು 10ರಿಂದ 15ಲಕ್ಷ ರೂ.ಗೆ ಏರಿಸಿದೆ. ಶೇ.3 ಬಡ್ಡಿ ದರದಲ್ಲಿ 5ರಿಂದ 10 ವರ್ಷಗಳಿಗೆ ನೀಡುವ ಈ ಸಾಲ ಯೋಜನೆಯ ಪರಿಸ್ಥಿತಿ ಬೆಳೆ ಸಾಲದಂತೆ ಮುಂದುವರಿದ ಕಾರಣ ಅದು ಕೂಡ ರೈತರಿಗೆ ಸಿಗುತ್ತಿಲ್ಲ.
ಸುಲಭ ಸಾಲ:
ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಈ ಯೋಜನೆ 2004ರಲ್ಲಿ ಜಾರಿಯಾಗಿ 1 ಲಕ್ಷ ರೂ., 2013-14ನೇ ಸಾಲಿನಿಂದ 2 ಲಕ್ಷ ರೂ., 2015-16ನೇ ಸಾಲಿನಿಂದ 3 ಲಕ್ಷ ರೂ.ಗೆ ವಿಸ್ತರಿಸಲಾಗಿದೆ. 365 ದಿನಗಳ ಅವಧಿ ಹೊಂದಿರುವ ಈ ಸಾಲವನ್ನು ನಿಗದಿತ ಸಮಯದೊಳಗೆ ಪಾವತಿಸಿದರೆ ಯಾವುದೇ ಬಡ್ಡಿ ಇಲ್ಲದೆ ಸಾಲ ನವೀಕರಿಸಲಾಗುತ್ತದೆ ಹಾಗೂ ಇದು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ. ಇದರ ಬಡ್ಡಿಯನ್ನು ಸಹಕಾರ ಸಂಘಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಪಾವತಿಸುತ್ತದೆ.
ಈ ಸಾಲಗಳನ್ನು ಪಡೆದಿರುವ ಸದಸ್ಯರು ಹೆಚ್ಚಿನ ಮೊತ್ತ ಬಿಡುಗಡೆ ಮಾಡಿ ನೆರವಾಗುವಂತೆ ಸಹಕಾರಿ ಸಂಘಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಹಕಾರಿ ಸಂಘಗಳು ಸರಕಾರದ ಕದ ತಟ್ಟುತ್ತಿದ್ದರೂ ನಿಧಿ ಬಿಡುಗಡೆ ಗೊಂದಲ ಮುಂದುವರಿದಿದೆ.