ಕುಂಬ್ರ ವರ್ತಕರ ಸಂಘದ ಮಹಾಸಭೆ-ಹಾಲಿ ಸಮಿತಿಯನ್ನೇ ಮುಂದುವರಿಸಲು ನಿರ್ಣಯ

0

ಪುತ್ತೂರು: ಕುಂಬ್ರ ವರ್ತಕರ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರ ಅಧ್ಯಕ್ಷತೆಯಲ್ಲಿ ಫೆ.20 ರಂದು ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಕಛೇರಿಯಲ್ಲಿ ಜರಗಿತು. ಸಂಘದ ಗೌರವ ಸಲಹೆಗಾರರಾದ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕರವರು ಮಾತನಾಡಿ, ನಾವು ಸಂಘಟನೆಯಲ್ಲಿ ಸೇರಿಕೊಂಡಾಗ ಸಮಾಜ ನಮ್ಮನ್ನು ಗುರುತಿಸುವ ಕೆಲಸ ಮಾಡುತ್ತದೆ. ಸಂಘಟನೆಯ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡಿದಾಗ ನಮಗೂ ಸಮಾಜದಲ್ಲಿ ಒಂದು ಒಳ್ಳೆಯ ಹೆಸರು ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕುಂಬ್ರ ವರ್ತಕರ ಸಂಘವು ಕಳೆದ 19 ವರ್ಷಗಳಿಂದ ಉತ್ತಮ ಕೆಲಸಗಳನ್ನು ಮಾಡಿಕೊಂಡು ಬಂದಿರುವುದು ಇದರಲ್ಲಿರುವ ಸದಸ್ಯ ಮಿತ್ರರಿಂದ ಸಾಧ್ಯವಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಗೌರವ ಸಲಹೆಗಾರ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ಕುಂಬ್ರ ವರ್ತಕರ ಸಂಘಕ್ಕೆ ತನ್ನದೇ ಆದ ವಿಶೇಷತೆ ಇದೆ. ರಾಜಕೀಯ ಮುಕ್ತ ಸಂಘವಿದ್ದರೆ ಅದು ಕುಂಬ್ರ ವರ್ತಕರ ಸಂಘ ಎಂದು ಹೇಳಲು ಸಂತೋಷವಾಗುತ್ತದೆ. ಸಂಘವು 19 ವರ್ಷದಲ್ಲಿ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದೆ. ಪ್ರಸ್ತುತ ಇರುವ ಅಧ್ಯಕ್ಷರು, ಪದಾಧಿಕಾರಿಗಳು ಕೂಡ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಮುಂದಿನ ಬಾರಿಗೂ ಇವರುಗಳನ್ನೇ ಮುಂದುವರಿಸುವುದು ಸೂಕ್ತ ಎಂದು ತಿಳಿಸಿದರು.

ಗೌರವ ಸಲಹೆಗಾರ ಚಂದ್ರಕಾಂತ ಶಾಂತಿವನರವರು ಮಾತನಾಡಿ, ಸಂಘವು ಪ್ರಸ್ತುತ ಸಾಲಿನಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ. ಎಲ್ಲರೂ ಒಳ್ಳೆಯ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿಯೂ ಸಂಘವು ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಜಿಲ್ಲೆಯಲ್ಲೇ ಒಂದು ಉತ್ತಮ ಸಂಘವಾಗಿ ಮೂಡಿಬರಲಿ ಎಂದು ಶುಭ ಹಾರೈಸಿದರು.

ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ ಮಾತನಾಡಿ, ವರ್ತಕರ ಪ್ರತಿಯೊಂದು ಸಮಸ್ಯೆಗಳನ್ನು ಕೂಡ ತಿಳಿದುಕೊಂಡು ಸಮಸ್ಯೆಗಳ ನಿವಾರಣೆಗೆ ಸಂಘವು ಪ್ರಯತ್ನಿಸುತ್ತಾ ಬಂದಿದೆ. ವರ್ತಕರಿಗೆ ಕಾಡುತ್ತಿದ್ದ ದೊಡ್ಡ ಸಮಸ್ಯೆ ಎಂದು ಅದು ವಿದ್ಯುತ್ ಸಮಸ್ಯೆ ಇದಕ್ಕಾಗಿ ಸಂಘವು ಹಲವು ಬಾರಿ ಮನವಿ ನೀಡಿದ್ದು ಇದೀಗ ಕುಂಬ್ರಕ್ಕೆ ಪ್ರತ್ಯೇಕ ಫೀಡರ್ ಅಳವಡಿಸಲು ಕಾಮಗಾರಿ ಕೂಡ ಆರಂಭವಾಗಿದ್ದು ಇದು ವರ್ತಕರ ಸಂಘಕ್ಕೆ ದೊರೆತ ಗೆಲುವು ಆಗಿದೆ. ಮುಂದೆಯೂ ಸಂಘ ವರ್ತಕರ ಜೊತೆಯಲ್ಲಿ ಸದಾ ಇರುತ್ತದೆ ಎಂದರು.

ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರು ಮಾತನಾಡಿ, ಕುಂಬ್ರ ವರ್ತಕರ ಸಂಘದ ಎಲ್ಲಾ ಕೆಲಸ ಕಾರ್ಯಗಳಿಗೆ ಕೈಜೋಡಿಸುತ್ತಿರುವ ವರ್ತಕರಿಗೆ ಹಾಗೂ ಗ್ರಾಹಕರಿಗೆ ಧನ್ಯವಾದ ತಿಳಿಸಿದರು. ಸಂಘವನ್ನು ಜಿಲ್ಲೆಯಲ್ಲೇ ಒಂದು ಉತ್ತಮ ಸಂಘವಾಗಿ ರೂಪಿಸಲು ಯೋಚಿಸಲಾಗಿದೆ ಇದಕ್ಕೆ ಎಲ್ಲರ ಸಹಕಾರವನ್ನು ಯಾಚಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಂಘದ ಅಜೀವ ಸದಸ್ಯತ್ವ ಪಡೆದ ವರ್ತಕರಿಗೆ ಸಂಘದ ಪ್ರಮಾಣಪತ್ರ ವಿತರಿಸಲಾಯಿತು. ಸಂಘದ ಜತೆ ಕಾರ್ಯದರ್ಶಿ ಚರಿತ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭವ್ಯ ರೈ 2023-24 ನೇ ಸಾಲಿನ ವರದಿ ವಾಚಿಸಿದರು. ಕೋಶಾಧಿಕಾರಿ ಸಂಶುದ್ದೀನ್ ಎ.ಆರ್. ಲೆಕ್ಕಪತ್ರ ಮಂಡಿಸಿದರು. ಮಾಜಿ ಅಧ್ಯಕ್ಷ ಮೆಲ್ವಿನ್ ಮೊಂತೆರೋ ವಂದಿಸಿದರು. ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಕಾರ್ಯಕ್ರಮ ನಿರೂಪಿಸಿದರು.

ಶಿವರಾಮ ರೈಯವರಿಗೆ ಶ್ರದ್ಧಾಂಜಲಿ ಅರ್ಪಣೆ
ಕುಂಬ್ರ ವರ್ತಕರ ಸಂಘದ ಸದಸ್ಯ, ಕುಂಬ್ರ ಶಿವರಾಮ ರೈ ಕಾಂಪ್ಲೆಕ್ಸ್ ಮಾಲಕರಾದ ಕುಂಬ್ರ ಮನೆತನದ ಶಿವರಾಮ ರೈ ಕುಂಬ್ರರವರಿಗೆ ಈ ಸಂದರ್ಭದಲ್ಲಿ ವರ್ತಕರ ಸಂಘದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ರಂಗಭೂಮಿ ಕಲಾವಿದ, ಸಂಘದ ಮಾಜಿ ಅಧ್ಯಕ್ಷ ಸುಂದರ ರೈ ಮಂದಾರರವರು ನುಡಿನಮನ ಸಲ್ಲಿಸಿದರು ಬಳಿಕ ಶಿವರಾಮ ರೈ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here