ಶಾಂಭವಿ ವಿಜಯದ ಶ್ರೀದೇವಿಯಾಗಿ ಮಿಂಚಿದ ಮೆಲಿಷಾ ಮಸ್ಕರೇನಸ್-ಧರ್ಮ ಸಾಮರಸ್ಯಕ್ಕೊಂದು ಯಕ್ಷಗಾನದ ಕೊಡುಗೆ

0

ಬರಹ: ಸಮನ್ವಯ ಕೊಕ್ಕಡ

ಕಲೆ ಯಾರೊಬ್ಬರ ಸ್ವತ್ತಲ್ಲ. ಒಂದು ಕಾಲದಲ್ಲಿ ದಕ್ಷಿಣ ಕನ್ನಡದ ಗಂಡು ಕಲೆ ಎಂದೇ ಖ್ಯಾತಿಯೆತ್ತಿದ ಯಕ್ಷಗಾನವು ಇಂದು ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಸರಿ ಸಮಾನವಾಗಿ ಬೆಳೆದು ನಿಂತಿದೆ. ಜಾತಿ ಧರ್ಮ ಮತಗಳ ಎಲ್ಲೆ ಮೀರಿ ಕಲಾರಾದಕರೂ ಕೂಡ ಯಕ್ಷಗಾನದತ್ತ ಆಕರ್ಷಿತರಾಗಿದ್ದಾರೆ. ಐದಾರು ದಶಕಗಳ ಹಿಂದಿನಿಂದಲೇ ಯಕ್ಷಗಾನ ತೆಂಕುತಿಟ್ಟುವಿನಲ್ಲಿ ಖ್ಯಾತ ಪುಂಡುವೇಷಧಾರಿಗಳಾಗಿ ಧಿಗಿಣ ವೀರರೆಂದೇ ಛಾಪುಮೂಡಿಸಿದ್ದ ಕ್ರೈಸ್ತಮತದ ಕ್ರಿಶ್ಚಿಯನ್ ಬಾಬು, ನೆಲ್ಯಾಡಿಯ ಜೋಸೆಫ್ ಡಿಸೋಜ ಇವರ ವೇಷಗಳನ್ನ ನೋಡಲೆಂದೇ ಅಸಂಖ್ಯಾತ ಯಕ್ಷಾಭಿಮಾನಿಗಳಿದ್ದ ಒಂದು ಕಾಲವಿತ್ತು.

ಇಂತಹದೊಂದು ಜಾತಿ ಮತ ಧರ್ಮದ ಚೌಕಟ್ಟನ್ನು ಮೀರಿದ ಕಲಾವಿದರ ಸಾಲಿಗೆ ಇದೀಗ ಶಾಂಭವಿ ವಿಜಯದ ಶ್ರೀದೇವಿಯಾಗಿ ಪಡುಬೆಟ್ಟುನಲ್ಲಿ ಕುಮಾರಿ ಮೆಲಿಷಾ ಸೇರ್ಪಡೆಯಾಗಿದ್ದಾಳೆ. ಶನಿವಾರ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಶಾಲೆಯಲ್ಲಿ ಯಕ್ಷಗಾನ ಗುರು ಯೋಗೀಶ ಶರ್ಮ ಅಳದಂಗಡಿ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನಗೊಂಡಿತು.

ಕಾರ್ಯಕ್ರಮದ ವಿಶೇಷತೆಯಾಗಿ ಕ್ರೈಸ್ತ ಮತದ ಮೆಲಿಷ ನಿಶಾಲ್ ಮಸ್ಕರೇನ್ಹಸ್ ಶಾಂಭವಿ ವಿಜಯದ ಶ್ರೀದೇವಿಯಾಗಿ ಯಕ್ಷಾಭಿಮಾನಿಗಳ ಮನಸೂರೆಗೊಂಡಳು. ಒಂದೇ ಧರ್ಮಕ್ಕೆ ಯಕ್ಷಗಾನ ಸೀಮಿತವಾಗುತ್ತಿದೆ ಎನ್ನುವ ಕೂಗುಗಳೆಡೆಯಲ್ಲಿ ಮನೀಶ್ ಮಸ್ಕರೇನಸ್ ಹಾಗೂ ನ್ಯಾನ್ಸಿ ಲಿಝಿ ದಂಪತಿಗಳ ಪುತ್ರಿ 5ನೇ ತರಗತಿಯಲ್ಲಿ ಓದುತ್ತಿರುವ ಕು.ಮೆಲಿಷ ಯಕ್ಷಗಾನ ಪ್ರಸಂಗದ ಮುಖ್ಯ ಪಾತ್ರಧಾರಿಯಾಗಿ ರಂಗದಲ್ಲಿ ಮಿಂಚಿದಳು.

ಹತ್ತು ದಿನಗಳ ವ್ರತ
ಶ್ರೀದೇವಿ ಮಹಾತ್ಮೆಯ ಶ್ರೀದೇವಿ ಪಾತ್ರಧಾರಿ ವೃತ್ತಿಪರರು ಸಾತ್ವಿಕ ಆಹಾರ ಪದ್ದತಿಯ ಒಂದು ವ್ರತದಲ್ಲಿರುವುದು ರೂಢಿಯಲ್ಲಿದೆ. ಸಾಕ್ಷಾತ್ ಶ್ರೀದೇವಿಗೆ ಬಹು ಅಚ್ಚುಮೆಚ್ಚಿನ ಸೇವೆಯೂ ಹೌದು ಈ ಆಖ್ಯಾನ. ಪಾತ್ರಕ್ಕೂ ವಿಶೇಷ ಭಕ್ತಿಯಲ್ಲಿ ನಡೆದುಕೊಳ್ಳುವ ಸಲುವಾಗಿ ಈ ಬಾಲಕಿ ಕಾರ್ಯಕ್ರಮದ ಹತ್ತು ದಿನಗಳ ಹಿಂದಿನಿಂದಲೇ ಸಾತ್ವಿಕ ಆಹಾರ ಸ್ವೀಕಾರದ ಮೂಲಕ ರೂಢಿಯಲ್ಲಿರುವ ಪಾತ್ರದ ಗೌರವ ಭಕ್ತಿಯನ್ನೂ ಈಕೆ ಖುದ್ದು ತಾನೂ ಅಳವಡಿಸಿ ಪ್ರದರ್ಶನಕ್ಕೆ ತಯಾರಾಗಿದ್ದು ಈಕೆಯ ಪಾತ್ರ ಕಳೆಗಟ್ಟುವಂತಾಗಲೂ ಒಂದು ಕಾರಣ ಎಂದು ಯಕ್ಷಾಭಿಮಾನಿಗಳ ಅಭಿಮತ.
ಒಟ್ಟಾರೆ ಮಕ್ಕಳ ಯಕ್ಷಗಾನ ಪ್ರದರ್ಶನ ಶಾಂಭವಿ ವಿಜಯ ಒಂದು ವಿಶೇಷವಾಗಿ ದಾಖಲಿಸಲ್ಪಟ್ಟಿತು.


4 ದಶಕಗಳ ನಂತರ ಪಡುಬೆಟ್ಟುವಿನಲ್ಲಿ ನಡೆದ ಮಕ್ಕಳ ಯಕ್ಷಗಾನ ಪ್ರದರ್ಶನ ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಕೀರ್ತಿ ಶೇಷ ಗೋಪಾಲಕೃಷ್ಣ ಶಗ್ರಿತ್ತಾಯರ ನೆನಪಿನಲ್ಲಿ ಅಂದು ಅವರೇ ಹುಟ್ಟು ಹಾಕಿದಂತಹ ಬಾಲಸುಬ್ರಹ್ಮಣ್ಯ ಮಕ್ಕಳ ಮೇಳವನ್ನ ಇದೀಗ ಮತ್ತೊಮ್ಮೆ ನಮ್ಮ ಪ್ರತಿಷ್ಠಾನದಿಂದ ಉದ್ದೀಪನ ಗೊಳಿಸಿದ್ದು ಪ್ರಥಮ ತಂಡದಲ್ಲೇ ಈ ಕುವರಿಯ ಮನೋಜ್ಞ ಅಭಿನಯವೂ ತಂಡಕ್ಕೆ ಹೆಮ್ಮೆ ನೀಡಿದೆ.
ಗುಡ್ಡಪ್ಪ ಬಲ್ಯ
ಗೌರವಾಧ್ಯಕ್ಷರು.
ಕೀರ್ತಿಶೇಷ ಗೋಪಾಲಕೃಷ್ಣ ಶಗ್ರಿತ್ತಾಯ-ಜಾನಕಿ ಅಮ್ಮ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನ ಪಡುಬೆಟ್ಟು.

ನಮ್ಮ ಹಿರಿಯರ ಕಾಲದಿಂದಲೂ ನಾವು ಯಕ್ಷಗಾನ ಅಭಿಮಾನಿಗಳು. 6 ವರ್ಷದಿಂದಲೇ ಮೆಲಿಷಾ ಯೂಟ್ಯೂಬ್ ಮೂಲಕ ಯಕ್ಷಗಾನವನ್ನು ವೀಕ್ಷಿಸುತ್ತಾ ಯಕ್ಷಗಾನದ ಕಡೆಗೆ ಆಕರ್ಷಿತಳಾಗಿದ್ದಳು. ನಮ್ಮ ಕುಟುಂಬದಲ್ಲಿ, ಧಾರ್ಮಿಕ ಕೇಂದ್ರದಲ್ಲಿ, ಮತ್ತು ನೆರೆಹೊರೆಯಲ್ಲಿ ಮಗಳು ಯಕ್ಷಗಾನ ಪಾತ್ರ ನಿರ್ವಹಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಶ್ರೀದೇವಿ ಪಾತ್ರನಿರ್ವಹಿಸುವಾಗ ಹತ್ತು ದಿನಗಳ ಕಾಲ ಮೆಲಿಷಾ ಶಾಖಾಹಾರ ತ್ಯಜಿಸಿದ್ದಳು. ಅದಕ್ಕೆ ಪೂರಕವಾಗಿ ನಾವು ಕೂಡ ಮನೆಯಲ್ಲಿ ಶಾಖಾಹಾರವನ್ನು ತ್ಯಜಿಸಿ ಅವಳ ಜೊತೆಗೆ ವ್ರತ ಸ್ವೀಕರಿಸಿದ್ದೆವು.
ನ್ಯಾನ್ಸಿ ಲಿಝಿ
ಗೌರವ ಶಿಕ್ಷಕಿ (ಮೆಲಿಷಾಳ ತಾಯಿ)
ಸ.ಹಿ.ಪ್ರ ಶಾಲೆ, ಪಡುಬೆಟ್ಟು.

ನಮ್ಮ ಗುರುಗಳಾದ ಕೀರ್ತಿಶೇಷ ಗೋಪಾಲಕೃಷ್ಣ ಶಗ್ರಿತ್ತಾಯರು ತಮ್ಮ ಅಂತ್ಯ ಕಾಲದಲ್ಲಿ 40 ವರ್ಷಗಳ ಹಿಂದೆ ಹುಟ್ಟು ಹಾಕಿದ್ದ ಪಡುಬೆಟ್ಟು ಬಾಲಸುಬ್ರಹ್ಮಣ್ಯ ಯಕ್ಷಗಾನ ತಂಡದಲ್ಲಿದ್ದ ಎಲ್ಲಾ ಸದಸ್ಯರನ್ನು ಆಸ್ಪತ್ರೆಗೆ ಕರೆಯಿಸಿ ಗೌರವಿಸಿದ್ದರು. ಜೊತೆಗೆ 40 ವರ್ಷಗಳ ಹಿಂದೆ ಕೀರ್ತಿ ಶೇಷರ ಜೊತೆಗಿದ್ದು ಸಂಘ ಹೆಸರುವಾಸಿಯಾಗಲು ಶ್ರಮಿಸಿದ್ದನ್ನು ನೆನೆಸಿಕೊಂಡರು. ಬಹುಶಃ ಗುರುಗಳು ಭವಿಷ್ಯದಲ್ಲಿ ಮತ್ತೆ ಈ ಸಂಘವನ್ನು ಪುನಶ್ಚೇತನಗೊಳಿಸಿ ಎಂದು ಸೂಕ್ಷ್ಮವಾಗಿ ನಮಗೆ ಸೂಚಿಸಿದ್ದರು ಎಂದು ಈಗ ಅನಿಸುತ್ತಿದೆ. ಮೊನ್ನೆ ನಡೆದ ಬಾಲಸುಬ್ರಹ್ಮಣ್ಯ ಯಕ್ಷಗಾನ ತಂಡದ ಎಲ್ಲಾ ವಿದ್ಯಾರ್ಥಿಗಳು ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದರು. ಶ್ರೀದೇವಿ ಪಾತ್ರದಾರಿ ಮೆಲಿಷಾ, ತಾನೇ ಶ್ರೀದೇವಿ ಎಂಬಂತೆ ಮಾನಸಿಕವಾಗಿ ಪಾತ್ರದ ಒಳಗೆ ಹೊಕ್ಕಿದ್ದು ಸಾಕ್ಷಾತ್ ಶ್ರೀ ದೇವಿಯೇ ಕಣ್ಣ ಮುಂದೆ ಬಂದಂತೆ ಭಾಸವಾಯಿತು.
ಗಂಗಾಧರ ಶೆಟ್ಟಿ
ಸಂಚಾಲಕರು,
ಕೀರ್ತಿಶೇಷ ಗೋಪಾಲಕೃಷ್ಣ ಶಗ್ರಿತ್ತಾಯ-ಜಾನಕಿ ಅಮ್ಮ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನ, ಪಡುಬೆಟ್ಟು.

LEAVE A REPLY

Please enter your comment!
Please enter your name here