ಉದ್ಯೋಗದ ನೆಪದಲ್ಲಿ ಲಕ್ಷಾಂತರ ರೂ ವಂಚಿಸಿದ ಪ್ರಕರಣ: ಬಂಧಿತ ಯುವತಿಯರ ಸಹಿತ ಮೂವರಿಗೂ ಜಾಮೀನು ಮಂಜೂರು

0

ಪುತ್ತೂರು: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ವಂಚನೆ ಮಾಡಿದ ಪ್ರಕರಣದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರಿಂದ ಬಂಧಿತರಾಗಿದ್ದ ಈರ್ವರು ಯುವತಿಯರ ಸಹಿತ ಮೂವರಿಗೂ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಕರಾವಳಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅಫೀಸ್ ಕೆಲಸ ಖಾಲಿ ಇದೆ. ನಿರುದ್ಯೋಗಿಗಳಿಗೆ ಬಂದ ದಿನವೇ ಕೆಲಸ ಸಿಗುತ್ತದೆ ಎಂಬುದಾಗಿ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿ ಬಳಿಕ ಫೀಸ್ ಕೊಡಬೇಕು ಎಂದು ನಂಬಿಸಿ ಕಳೆದ 7 ತಿಂಗಳಿನಿಂದ ಆನ್‌ಲೈನ್ ಮುಖಾಂತರ ಒಟ್ಟು 2,25,001 ರೂ.ಗಳನ್ನು ಪಡೆದು ವ್ಯಕ್ತಿಯೋರ್ವರಿಗೆ ವಂಚಿಸಿದ ಆರೋಪದಡಿ ತುಮಕೂರಿನ ಚಿಕ್ಕನಾಯಕನಹಳ್ಳಿಯ ಸುಮಿತ್ರಬಾಯಿ ಸಿ.ಆರ್. (23), ಹಾಸನದ ಹಳಸಿನಹಳ್ಳಿಯ ಸೌಂದರ್ಯ ಎಂ.ಎಸ್.(21) ಮತ್ತು ತುಮಕೂರಿನ ಚಿಕ್ಕನಾಯಕನಹಳ್ಳಿಯ ರಾಹುಲ್ ಕುಮಾರ್ ನಾಯ್ಕ (19) ಎಂಬವರನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿ ಆರೋಪಿಗಳು ಜಾಮೀನು ಕೋರಿ ಪುತ್ತೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶೆ ಪ್ರಿಯಾ ಜೋಗ್ಲೇಕರ್ ಅವರು ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿಗಳ ಪರ ನ್ಯಾಯವಾದಿಗಳಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡು ಮತ್ತು ಮೋಹಿನಿ ಕೆ. ವಾದಿಸಿದ್ದರು.

LEAVE A REPLY

Please enter your comment!
Please enter your name here