ಪುತ್ತೂರು: ಎಪಿಎಂಸಿ ರಸ್ತೆಯ ಸಾಲ್ಮರದಲ್ಲಿರುವ ಕಾರಣಿಕ ಕ್ಷೇತ್ರ ಶ್ರೀ ಮಹಿಷಮರ್ದಿನಿ ದುರ್ಗಾಚಾಮುಂಡೇಶ್ವರಿ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ, ದೈವಗಳ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆ ಫೆ.24ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಉತ್ಸವದ ಅಂಗವಾಗಿ ಫೆ.25ರಂದು ಬೆಳಿಗ್ಗೆ ಗಣಹೋಮ, ಫೆ.26ರಂದು ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಬಲಿ ಉತ್ಸವ, ಪ್ರಸಾದ ವಿತರಣೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಮಹಾ ಮಂಗಳಾರತಿ ನಡೆದು ದೈವಗಳ ಭಂಡಾರ ತೆಗೆದು ಸಾರ್ವಜನಿಕ ಅನ್ನಸಂತರ್ಪಣೆ, ಬಳಿಕ ಕ್ಷೇತ್ರದ ದೈವಗಳಾದ ರುದ್ರಚಾಮುಂಡಿ, ಚಾಮುಂಡಿ, ಗುಳಿಗ, ಮಹಾಕಾಳಿ ಹಾಗೂ ಕಲ್ಲುರ್ಟಿ ದೈವಗಳ ನೇಮ ನಡೆಯಲಿದೆ ಎಂದು ಧರ್ಮದರ್ಶಿ ತನಿಯ ತಿಳಿಸಿದ್ದಾರೆ.
ಕ್ಷೇತ್ರದ ಕಾರ್ಯಕ್ರಮಗಳು:
ಶ್ರೀ ಕ್ಷೇತ್ರವು ಜೀರ್ಣೋದ್ಧಾರಗೊಂಡು 2014ರಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದಿರುತ್ತದೆ. ಪ್ರತಿವರ್ಷ ವಾರ್ಷಿಕ ಉತ್ಸವ ಹಾಗೂ ದೈವಗಳ ನೇಮಗಳು ವಿಜ್ರಂಭಣೆಯಿಂದ ನಡೆಯುತ್ತಿದೆ. ನವರಾತ್ರಿ ದಿನಗಳಲ್ಲಿ ವಿಶೇಷ ಪೂಜೆ, ವಾರದ ಪ್ರತಿ ಮಂಗಳವಾರ ಮಧ್ಯಾಹ್ನ ದೇವಿಗೆ ವಿಶೇಷ ಪೂಜೆ ಹಾಗೂ ವರ್ಷಕ್ಕೆ ಒಂದು ಬಾರಿ ಕ್ಷೇತ್ರದಲ್ಲಿ ಚಂಡಿಕಾಯಾಗ ನಡೆಸಲಾಗುತ್ತಿದೆ.
ಕ್ಷೇತ್ರದಲ್ಲಿ ಪ್ರಾರ್ಥಿಸಿದರೆ ಸಂತಾನ ಪ್ರಾಪ್ತಿ:
ಮಕ್ಕಳಾಗದವರು ಶ್ರೀ ದೇವಿಯ ಕ್ಷೇತ್ರಕ್ಕೆ ಬಂದು ಮಹಾಕಾಳಿಯಲ್ಲಿ ಪ್ರಾರ್ಥಿಸಿಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ. ಸಂತಾನ ಪ್ರಾಪ್ತಿಯಾದ ಬಳಿಕ ಮಗುವಿನ ಚಿನ್ನದ ಪ್ರತಿಮೆಯನ್ನು ಮಹಾಕಾಳಿಗೆ ಅರ್ಪಿಸುವುದು ಸಾಮಾನ್ಯವಾಗಿದೆ. ಹೀಗೆ ಅರ್ಪಿಸಿದ ಚಿನ್ನದ ಮಗುವಿನ ಪ್ರತಿಮೆಗಳನ್ನು ನೇಮೋತ್ಸವದಂದು ಮಹಾಕಾಳಿ ದೈವವು ತನ್ನ ಮಡಿಲಲ್ಲಿಟ್ಟು ಜೋಗುಳ ಹಾಡಿ ಸ್ವೀಕರಿಸಿಕೊಳ್ಳುವುದು ಇಲ್ಲಿನ ವಿಶೇಷತೆಯಾಗಿದೆ ಎಂದು ಧರ್ಮದರ್ಶಿ ತನಿಯ ತಿಳಿಸಿದ್ದಾರೆ.