ಮುರದಲ್ಲಿ ರೈಲು ಡಿಕ್ಕಿಯಾಗಿ ಮೃತಪಟ್ಟ ವ್ಯಕ್ತಿ ಬೆಳ್ತಂಗಡಿ ನಿವಾಸಿ ಶಿವರಾಮ ಗೌಡ ಎಂದು ಗುರುತು ಪತ್ತೆ

0

ಪುತ್ತೂರು: ಫೆ.15ರಂದು ಪುತ್ತೂರಿನ ಮುರದಲ್ಲಿ ರೈಲು ಡಿಕ್ಕಿಯಾಗಿ ಮೃತಪಟ್ಟ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ಪಾಂಡಿಬೆಟ್ಟು ನಿವಾಸಿ ಶಿವರಾಮ ಗೌಡ (58 ವ) ಎಂದು ಗುರುತಿಸಲಾಗಿದೆ.

ಫೆ.14ರಂದು ಮಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ರೈಲು ಮುರ ಸಮೀಪ ಹಳಿ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿಯಾಗಿತ್ತು. ತಕ್ಷಣ ರೈಲು ನಿಲ್ಲಿಸಿದ ರೈಲು ಪೈಲೆಟ್ ರವರು ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಅದೇ ರೈಲಿನಲ್ಲಿ ಪುತ್ತೂರು ರೈಲು ನಿಲ್ದಾಣಕ್ಕೆ ಕರೆ ತಂದಿದ್ದರು. ರೈಲು ನಿಲ್ದಾಣದಿಂದ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿತ್ತಾದರೂ ಆಂಬ್ಯುಲೆನ್ಸ್ ತಲುಪುವಷ್ಟರಲ್ಲಿ ವ್ಯಕ್ತಿ ಕೊನೆಯುಸಿರೆಳೆದಿದ್ದರು. ಮೃತದೇಹವನ್ನು ರೈಲ್ವೇ ಪೊಲೀಸ್ ಅಧಿಕಾರಿಗಳ ಸುಪರ್ದಿಯಲ್ಲಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿತ್ತು. ರೈಲು ಡಿಕ್ಕಿಯಾಗಿ ಮೃತಪಟ್ಟ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಮೃತರ ಗುರುತು ಪತ್ತೆಯಾಗಿದ್ದು ಇವರು ನ್ಯಾಯತರ್ಪು ಗ್ರಾಮದ ಪಾಂಡಿಬೆಟ್ಟು ನಿವಾಸಿ ಶಿವರಾಮ ಗೌಡ ಎಂದು ಗೊತ್ತಾಗಿದೆ. ಇವರು ಕೃಷಿಕರಾಗಿದ್ದು ಸ್ವಲ್ಪಮಟ್ಟಿಗೆ ಅನಾರೋಗ್ಯದ ಕಾರಣ ಪುತ್ತೂರು ಆಸ್ಪತ್ರೆಗೆ ಹೋಗಿ ಸ್ನೇಹಿತನಲ್ಲಿ ಮಾತನಾಡಿ ಬರುವುದಾಗಿ ನಾಳದಿಂದ ಫೆ.14ರಂದು ಬಸ್ ಹತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಇವರು ಪುತ್ತೂರಿನ ಮುರಕ್ಕೆ ಯಾಕೆ ತೆರಳಿದ್ದರು ಎಂದು ಮಾಹಿತಿ ಲಭ್ಯವಾಗಿಲ್ಲ. ಮೃತರು ಪತ್ನಿ ರಾಜೀವಿ ಹಾಗೂ ಪುತ್ರಿಯರಾದ ಭೂಮಿಕಾ, ದೀಕ್ಷಿತ ಮತ್ತು ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಸಂಬಂಽಕರು ನೀಡಿದ ಮಾಹಿತಿಯಂತೆ ಮಂಗಳೂರು ಜಿಲ್ಲಾ ಆಸ್ಪತೆಯಲ್ಲಿದ್ದ ಮೃತರ ಶವವನ್ನು ಕುಟುಂಬಸ್ಥರು ಗುರುತು ಪತ್ತೆ ಹಚ್ಚಿ ಮೃತರ ಮನೆಗೆ ತರಲಾಗಿದೆ. ಶಿವರಾಮ ಗೌಡರವರು ಹಿಂದೆ ಬೆಳ್ತಂಗಡಿ ನಾಳ ಅಂಚೆ ಕಚೇರಿಯಲ್ಲಿ ತಾತ್ಕಾಲಿಕವಾಗಿ 6 ವರ್ಷ ಪೋಸ್ಟ್‌ಮ್ಯಾನ್ ಆಗಿ ಕೆಲಸ ನಿರ್ವಹಿಸಿದ್ದರು.


LEAVE A REPLY

Please enter your comment!
Please enter your name here