ಪುತ್ತೂರು: ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಬಿಜೆಪಿ ಸೇರ್ಪಡೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬಗ್ಗೆ ಮಾದ್ಯಮದೊಂದಿಗೆ ಮೈಸೂರಿನಲ್ಲಿ ಮಾತನಾಡಿದ ವಿಜಯೇಂದ್ರ, ಪುತ್ತಿಲ ನನ್ನನ್ನು ಭೇಟಿ ಮಾಡಿ ಮಾತನಾಡಿದ್ದು ಸತ್ಯ ಎಂದು ಹೇಳಿದ್ದಾರೆ.
ಬೇಷರತ್ ಆಗಿ ಬಿಜೆಪಿ ಸೇರ್ಪಡೆಯಾಗಿ ಎಂದು ಅವರಿಗೆ ಸೂಚಿಸಿದ್ದೇನೆ. ಯಾವುದೇ ಷರತ್ತುಗಳು ಬೇಡ. ಅದೇನಿದ್ದರೂ ಸೇರ್ಪಡೆಗೊಂಡ ನಂತರ ನೋಡೋಣ. ಪ್ರಧಾನಿ ಮೋದಿ ನಾಯಕತ್ವಕ್ಕಾಗಿ ಎಲ್ಲರೂ ಒಂದಾಗಬೇಕು ಎಂದು ಹೇಳಿರುವುದಾಗಿ ವಿಜಯೇಂದ್ರ ಹೇಳಿದ್ದಾರೆ. ಈ ಮೂಲಕ ಯಾವುದೇ ಹುದ್ದೆ ಕೊಟ್ಟು ಪಕ್ಷಕ್ಕೆ ಸೇರ್ಪಡೆಗೊಳಿಸುವುದಿಲ್ಲ ಎಂಬ ಸೂಚನೆಯನ್ನು ಪರೋಕ್ಷವಾಗಿ ನೀಡಿದ್ದಾರೆ. ಪುತ್ತೂರಿನ ಸ್ಥಳೀಯ ಮುಖಂಡರ ಜೊತೆ ಮಾತುಕತೆ ಮಾಡುತ್ತೇನೆ. ಎಲ್ಲಾ ಕ್ಷೇತ್ರಕ್ಕೂ ನಮಗೆ ಬಿಜೆಪಿ, ಕಮಲ ಚಿಹ್ನೆಯಷ್ಟೇ ಅಭ್ಯರ್ಥಿ. ಬೇರೆ ಯಾವ ಭಿನ್ನಾಭಿಪ್ರಾಯಗಳೂ ನಮ್ಮ ನಡುವೆ ಇಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಪಕ್ಷದ ಪುತ್ತೂರು ಮಂಡಲದ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಅರುಣ್ ಕುಮಾರ್ ಪುತ್ತಿಲ ಸದ್ಯ ಶ್ರೀ ರಾಮಲಲ್ಲಾನ ದರ್ಶನಕ್ಕಾಗಿ ಅಯೋಧ್ಯೆಗೆ ತೆರಳಿದ್ದು, ಸಂಪರ್ಕಕ್ಕೆ ಲಭ್ಯವಾಗಿಲ್ಲ. ಅವರ ಪ್ರತಿಕ್ರಿಯೆಯ ಬಳಿಕಷ್ಟೆ ಬಿಜೆಪಿ ಸೇರ್ಪಡೆ ಬಗೆಗಿನ ಕುತೂಹಲಕ್ಕೆ ತೆರೆಬೀಳಲಿದೆ.