ಬಿಳಿನೆಲೆ: ಕೋಟೆಹೊಳೆಗೆ ಸರ್ವಋತು ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭ

0

3 ಕೋಟಿ ಅನುದಾನ; ಮಳೆಗಾಲಕ್ಕೂ ಮುನ್ನ ಲೋಕಾರ್ಪಣೆ

ಕಡಬ: ಉಪ್ಪಿನಂಗಡಿ-ಕಡಬ-ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಗ್ರಾಮದ ಕೈಕಂಬ ಎಂಬಲ್ಲಿ ಹರಿಯುವ ಕೋಟೆ ಹೊಳೆಗೆ ಅಡ್ಡಲಾಗಿದ್ದ ಮುಳುಗು ಸೇತುವೆ ಪಕ್ಕದಲ್ಲಿ ಸರ್ವಋತು ಸೇತುವೆ ಕಾಮಗಾರಿ ಆರಂಭಗೊಂಡಿದೆ. ಮಳೆಗಾಲದಲ್ಲಿ ಸ್ವಲ್ಪ ಮಳೆಯಾದರೂ ಮುಳುಗಿ ಸಂಚಾರಕ್ಕೆ ತೊಡಕಾಗುತ್ತಿದ್ದ ಈ ಮುಳುಗು ಸೇತುವೆಗೆ ಮುಕ್ತಿ ಸಿಗಲಿದೆ.


3 ಕೋಟಿ ಅನುದಾನ:
ಕೈಕಂಬದ ಕೋಟೆಹೊಳೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯ 5054 ರಾಜ್ಯ ಹೆದ್ದಾರಿಯ ಸೇತುವೆ ಸುಧಾರಣೆ ಯೋಜನೆಯಡಿ 3 ಕೋಟಿ ಅನುದಾನ ಬಿಡುಗಡೆಗೊಂಡು ಕಳೆದ ಬಾರಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಇದೀಗ ಕಾಮಗಾರಿ ಆರಂಭಿಸಲಾಗಿದೆ. ಪ್ರಸ್ತುತ ಇರುವ ಸೇತುವೆಯ ಕೆಳ ಭಾಗದಲ್ಲಿ ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಈಗಿರುವ ಸೇತುವೆಗಿಂತ 3 ಮೀಟರ್ ಎತ್ತರ, 12 ಮೀಟರ್ ಅಗಲದಲ್ಲಿ ಸೇತುವೆ ನಿರ್ಮಾಣವಾಗಲಿದೆ.ಅಧಿಕ ವಾಹನ ದಟ್ಟಣೆಯಿರುವ ಈ ರಸ್ತೆ ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಲ್ಲದೆ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ಸ್ವಲ್ಪ ಮಳೆಯಾದರೂ ನೆರೆ ನೀರಿನಿಂದ ಮುಳುಗಡೆಯಾಗಿ ತಾಸುಗಟ್ಟಲೆ ವಾಹನ ಸಂಚಾರಕ್ಕೆ ತೊಡಕಾಗುತ್ತಿತ್ತು.


ಮುಳುಗು ಸೇತುವೆಗಳಿಗೆ ಮುಕ್ತಿ:
ಒಂದು ಕಾಲದಲ್ಲಿ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅಲ್ಲಲ್ಲಿ ಮುಳುಗು ಸೇತುವೆಗಳಿದ್ದವು. ಮಳೆಗಾಲದಲ್ಲಿ ಸೇತುವೆಗಳ ಮುಳುಗಡೆ ಆಗುತ್ತಿರುವುದರಿಂದ ಶಾಲಾ ಮಕ್ಕಳು ಸೇರಿದಂತೆ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರು.
ಪ್ರಮುಖವಾಗಿ ಕಡಬ ಸಮೀಪದ ಹೊಸಮಠ, ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ಹೊಳೆಯ ಸೇತುವೆಗಳು ಮುಳುಗುಗಡೆಯಾಗುತ್ತಿದ್ದವು, ಅಲ್ಲಿ ಕೆಲ ವರ್ಷಗಳ ಹಿಂದೆ ಸುಸಜ್ಜಿತ ಸೇತುವೆ ನಿರ್ಮಾಣಗೊಂಡು ಲೋಕಾರ್ಪಣೆಯಾಗಿತ್ತು. ಬಳಿಕ ನೆಟ್ಟಣ ಬಳಿಯೂ ಹೊಸ ಸೇತುವೆ ನಿರ್ಮಾಣಗೊಂಡಿತ್ತು. ಉಳಿಕೆಯಾಗಿದ್ದ ಕೋಟೆಹೊಳೆಗೂ ಇದೀಗ ಹೊಸ ಸೇತುವೆ ನಿರ್ಮಾಣವಾಗುವುದರೊಂದಿಗೆ ಈ ರಾಜ್ಯ ಹೆದ್ದಾರಿ ಮುಳುಗು ಸೇತುವೆಯಿಂದ ಮುಕ್ತವಾಗಲಿದೆ.
ಸುಳ್ಯ ಕ್ಷೇತ್ರದ ಹಿಂದಿನ ಶಾಸಕ ಎಸ್.ಅಂಗಾರ ಅವರ ಅವಧಿಯಲ್ಲಿ ಇಲ್ಲಿನ ಮುಳುಗು ಸೇತುವೆಗಳಿಗೆ ಅನುದಾನ ಬಿಡುಗಡೆಗೊಂಡಿದ್ದು, ಅವರ ಪ್ರಯತ್ನದಿಂದ ಮುಳುಗು ಸೇತುವೆಗಳಿಗೆ ಮುಕ್ತಿ ಸಿಕ್ಕಿದೆ. ಎಲ್ಲಾ ಸೇತುವೆಗಳು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವಂಥಹದ್ದಾಗಿದೆ ಎಂದು ಮಾಹಿತಿ ಲಭಿಸಿದೆ.

ಬಿಳಿನೆಲೆ ಗ್ರಾಮದ ಕೋಟೆಹೊಳೆಗೆ ಸುಮಾರು 3 ಕೋಟಿ ವೆಚ್ಚದಲ್ಲಿ ಸರ್ವ ಸೇತುವೆ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ ಈ ವರ್ಷದ ಮೇ ತಿಂಗಳ ಅಂತ್ಯಕ್ಕೆ ಕಾಮಗಾರಿ ಮುಗಿಸಿ ಲೋಕಾರ್ಪಣೆಗೊಳಿಸಲಾಗುವುದು
– ಅಮರನಾಥ ಜೈನ್, ಕಾರ್ಯಪಾಲಕ ಇಂಜಿನಿಯರ್ ಲೋಕಪಯೋಗಿ ಇಲಾಖೆ ಮಂಗಳೂರು

ಮಂಗಳೂರಿನಿಂದ ಕುಕ್ಕೆಸುಬ್ರಹ್ಮಣ್ಯಕ್ಕೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಇಚ್ಲಂಪಾಡಿ ಮೂಲಕ ಶ್ರೀ ಕ್ಷೇತ್ರ ಕುಕ್ಕೆಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಕೋಟೆಹೊಳೆಗಿದ್ದ ಮುಳುಗು ಸೇತುವೆಯಿಂದ ಮಳೆಗಾಲದಲ್ಲಿ ವಾಹನ ಸವಾರರಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು. ಈ ಹೆದ್ದಾರಿಯಲ್ಲಿ ವಾಹನ ದಟ್ಟಣೆಯು ಅಧಿಕವಾಗಿರುತ್ತದೆ. ಸ್ವಲ್ಪ ಮಳೆಯಾದರೂ ತಾಸುಗಟ್ಟಲೆ ನೆರೆನೀರಿನಿಂದ ಮುಳುಗಡೆಯಾಗುತ್ತಿತ್ತು. ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿತ್ತು. ಇದಕ್ಕೆಲ್ಲ ಸರ್ವಋತು ಸೇತುವೆ ನಿರ್ಮಾಣದಿಂದ ಮುಕ್ತಿದೊರೆತಂತಾಗಿದೆ.
ಸುಂದರ ಗೌಡ ಬಿಳಿನೆಲೆ, ಅಧ್ಯಕ್ಷರು, ಭಜನಾ ಪರಿಷತ್ ಕಡಬ ತಾಲೂಕು

LEAVE A REPLY

Please enter your comment!
Please enter your name here