ಪುತ್ತೂರು: ನರಿಮೊಗರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಿತ್ಯ ಬೆಳಿಗ್ಗೆ ಮತ್ತು ರಾತ್ರಿ ದೇವರಿಗೆ ಸಲ್ಲುವ ಮಹಾಪೂಜೆಯನ್ನು ಹಾಗೂ ಭಕ್ತಾದಿಗಳು ನಡೆಸಲು ಇಚ್ಚಿಸುವ ಮೃತ್ಯುಂಜಯ ಜಪಸೇವೆಗಳನ್ನು ಯಾವುದೇ ವಿಳಂಬ ಮಾಡದೇ, ಭಕ್ತಾದಿಗಳನ್ನು ಕಾಯಿಸದೇ ಮಹಾಪೂಜೆಗೆ ಮುಂಚಿತವಾಗಿ ನಿಗದಿತ ಸಮಯದಲ್ಲಿ ನಡೆಸಿಕೊಡುವಂತೆ ಅರ್ಚಕರಿಗೆ ಸೂಕ್ತ ಲಿಖಿತ ನಿರ್ದೇಶನ ನೀಡುವಂತೆ ನರಿಮೊಗರು ಗೌರಿಕಿರಣ ಮನೆ ನಿವಾಸಿ ಶಶಿಧರ ವಿ.ಎನ್ ಅವರು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಮನವಿ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು, ಮುಂಡೂರು ಗ್ರಾಮದ ನರಿಮೊಗರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನವು 2008ರಲ್ಲಿ ಜೀರ್ಣೋದ್ದಾರಗೊಂಡು ಬಳಿಕ ಅಭಿವೃದ್ಧಿ ಹೊಂದುತ್ತಾ ಬಂದಿದ್ದು, ವರ್ಷದಿಂದ ವರ್ಷಕ್ಕೆ ಶ್ರೀ ದೇವಳಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದ್ದು, ಶ್ರೀ ದೇವಳದ ವಾರ್ಷಿಕ ಒಟ್ಟು ಆದಾಯವೂ ಅಂದಾಜು ರೂ.60 ಲಕ್ಷಕ್ಕೂ ಮೇಲ್ಪಟ್ಟು ಇದೆ ಎಂಬ ಮಾಹಿತಿ ಇದೆ. ದೇವಳದಲ್ಲಿ ಇಬ್ಬರು ಆರ್ಚಕರು ಮತ್ತು ಒಬ್ಬರು ಸಹಾಯಕ ಅರ್ಚಕರು ಇದ್ದಾರೆ. ದೇವಳದಲ್ಲಿ ದೇವರಿಗೆ ನಿತ್ಯ ಸಲ್ಲುವ ಮಹಾಪೂಜೆ ನಿಗದಿತ ಸಮಯಕ್ಕೆ ನಡೆಯಬೇಕಾಗಿರುವುದು ಆಗಮಶಾಸ್ತ್ರ ನಿಯಮ. ಭಕ್ತಾದಿಗಳ ಅನುಕೂಲಕ್ಕಾಗಿ ಶ್ರೀದೇವರ ಪರಮಸಂತೃಪ್ತಿಗಾಗಿ ಈ ನಿಯಮ ಪಾಲಿಸುವುದು ಆರ್ಚಕರ ಕರ್ತವ್ಯ. ಆದ್ದರಿಂದ ಸದ್ರಿ ದೇವಸ್ಥಾನದಲ್ಲಿ ನಿತ್ಯ ಬೆಳಿಗ್ಗೆ ಮತ್ತು ರಾತ್ರಿ ದೇವರಿಗೆ ಸಲ್ಲುವ ಮಹಾಪೂಜೆಯನ್ನು ಹಾಗೂ ಮೃತ್ಯುಂಜಯ ಜಪವನ್ನು ಮಾಡಿಸಲು ಇಚ್ಚಿಸುವ ಭಕ್ತರಿಗೆ ಯಾವುದೇ ವಿಳಂಬ ಮಾಡದೇ ಶ್ರೀದೇವರಿಗೆ ಮಹಾಪೂಜೆ ನಡೆಯುವ ಮುಂಚಿತವಾಗಿ ನಡೆಸಿಕೊಡುವಂತೆ ಶ್ರೀ ದೇವಳದ ಅರ್ಚಕರಿಗೆ ಲಿಖಿತ ನಿರ್ದೇಶನವನ್ನು ನೀಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.