ಒಂದು ಎಕ್ರೆ ಸ್ಥಳದಲ್ಲಿ 1 ಕೋಟಿ 60 ಲಕ್ಷ ಲೀಟರ್ ಮಳೆ ನೀರು ಬೀಳುವಾಗ ಆ ನೀರಿನ ಮರುಪೂರಣ, ಅಂತರ್ಜಲದ ವ್ಯವಸ್ಥೆ ಇರುವಾಗ ನೀರಿಲ್ಲ ಎಂಬ ಹಪಹಪಿ, ಕೊರತೆ ಯಾಕೆ?
ವರ್ಷವಿಡೀ ಸೌರ ಶಕ್ತಿ ಇರುವಾಗ ನಾವು ವಿದ್ಯುತ್ ಸ್ವಾವಲಂಬಿಯಾಗುವುದಿಲ್ಲ ಯಾಕೆ?
ನಮಗೆ ವರ್ಷಕ್ಕೆ ಇಲ್ಲಿ 3,500 ಮಿ,.ಮೀ.ನಿಂದ 4,೦೦೦ ಮಿ.ಮೀ ವರೆಗೆ ಮಳೆ ಬೀಳುತ್ತದೆ. ಅಂದರೆ ಒಂದು ಚ.ಮೀಗೆ 3,5೦೦ ರಿಂದ 4,೦೦೦ ಲೀ. ನೀರು ಬೀಳುತ್ತದೆ. ಆಕಾಶದಿಂದ ಬಿದ್ದ ಮಳೆಗಾಲದ ಆ ನೀರು ಶುದ್ಧವಾದ ನೀರು ಎಂಬ ಯೋಚನೆಯೇ ನಮಗೆ ಇಲ್ಲ. ಮಳೆಗಾಲದಲ್ಲಿ ಅದನ್ನು ನಾವು ಕುಡಿಯಲು, ಮನೆಯ ಇತರ ಕೆಲಸಗಳಿಗೆ ಬಳಸುವುದೇ ಇಲ್ಲ. ಮಾಡಿಗೆ ಮತ್ತು ನೆಲಕ್ಕೆ ಬಿದ್ದ ಆ ನೀರು ಕಲುಷಿತಗೊಂಡು ಹೊಳೆ ಸೇರುತ್ತದೆ. ಅಲ್ಲಿ ಇನ್ನೂ ಕಲುಷಿತಗೊಳ್ಳುತ್ತದೆ. ಆ ನೀರನ್ನು ನಾವು ಶುದ್ಧೀಕರಣ ಮಾಡಿದಂತೆ ಮಾಡಿಕೊಂಡು ಮನೆ ಮನೆಗೆ ತರಿಸಿ ಕುಡಿಯುವ ಮತ್ತು ಮನೆಯ ಎಲ್ಲಾ ಕೆಲಸಗಳಿಗೆ ಉಪಯೋಗಿಸುತ್ತೇವೆ. ಅದು ಎಷ್ಟರ ಮಟ್ಟಿಗೆ ಶುದ್ಧವಾಗಿದೆ ಎಂದು ಪರಿಶೀಲಿಸಿ ನೋಡಿದರೆ ಆಶ್ಚರ್ಯ ವಾಗಬಹುದು. ನಿಮಗೆ ಅದರ ಕೆಟ್ಟ ಅನುಭವವೂ ಆಗಿರಬಹುದು. ಅದು ಎಷ್ಟೇ ಶುದ್ಧವಾಗಿದ್ದರೂ ನಮ್ಮ ಮಾಡಿನ ಮೇಲೆ ಮತ್ತು ನೆಲಕ್ಕೆ ಬೀಳುವ ಮಳೆ ನೀರಿನಷ್ಟು ಶುದ್ಧವಿರಲು ಸಾಧ್ಯವೇ ಇಲ್ಲ.
1೦೦ ಚ.ಮೀ ಮನೆಯಲ್ಲಿ 4 ಜನ ವಾಸವಾಗಿದ್ದರೆ ಅವರಿಗೆ ದಿನಕ್ಕೆ 6೦೦ ಲೀ.ನಂತೆ ವರ್ಷಕ್ಕೆ 2 ಲಕ್ಷ ಲೀ. ನೀರು ಬೇಕಾಗುತ್ತದೆ. ಆದರೆ ಆ ಮನೆ ಮಾಡಿಗೆ ವರ್ಷಕ್ಕೆ 4 ಲಕ್ಷ ಲೀ. ಮಳೆ ನೀರು ಬಿದ್ದು ನೆಲ, ಹೊಳೆ ಸೇರುತ್ತದೆ. ಆ ಶುದ್ಧ ಉಚಿತ ನೀರನ್ನು ಮಳೆಗಾಲದಲ್ಲಿ ಬಳಸಿದರೆ, ಶೇಖರಿಸಿ ಉಪಯೋಗಿಸಿದರೆ ಮಳೆಗಾಲದ 4 ರಿಂದ 6 ತಿಂಗಳು ನೀರಿನ ಖರ್ಚು ಉಳಿತಾಯ ಆಗುತ್ತದೆ. ಅದು ಶುದ್ಧ ನೀರೂ ಆಗಿರುತ್ತದೆ ಎಂಬ ಯೋಚನೆಯು ನಮ್ಮ ಹೆಚ್ಚಿನ ಜನರಿಗೆ ಇಲ್ಲ.
ಅದೇ ರೀತಿ ನಮ್ಮ ಒಂದು ಎಕರೆ ಭೂಮಿಯಲ್ಲಿ ವರ್ಷಕ್ಕೆ 161 ಲಕ್ಷ ಲೀ. ಮಳೆ ನೀರು ಬಿದ್ದು ಹರಿದು ಹೋಗುತ್ತದೆ. ಯಾವುದೇ ಕೃಷಿಗಾಗಿ ಅಥವಾ ಯಾವುದೇ ಉಪಯೋಗಕ್ಕಾಗಿ ಅದನ್ನು ಶೇಖರಿಸಿ ಉಪಯೋಗಿಸಿದರೆ ಬಾವಿ, ಕೊಳವೆ ಬಾವಿ, ಕೆರೆ ಮರುಪೂರಣಕ್ಕೆ ಆ ನೀರನ್ನು ಉಪಯೋಗಿಸಿಕೊಂಡರೆ ನಮಗೆ ನೀರಿನ ಕೊರತೆ ಆಗಲು ಸಾಧ್ಯವೇ ಇಲ್ಲ. ತನ್ನ ಸ್ಥಳದ ಭೂಮಿಯಲ್ಲಿ ಬೀಳುವ ಮಳೆ ನೀರನ್ನು ಹೊರಗೆ ಹರಿದು ಹೋಗದಂತೆ ಸಂಪೂರ್ಣ ಉಪಯೋಗ ಮಾಡುವಂತಹ ಮತ್ತು ಅಂತರ್ಜಲವಾಗಿ ನೀರನ್ನು ಶೇಖರಣೆ ಮಾಡುವ ವ್ಯವಸ್ಥೆಯು ಈಗ ಇರುವುದರಿಂದ ಆ ಹೆಚ್ಚುವರಿ ನೀರನ್ನು ಇತರರಿಗೆ ಮಾರಾಟ ಮಾಡುವ ವ್ಯವಸ್ಥೆಯೂ ಬರಬಹುದು.
ಚಂದ್ರಲೋಕದಲ್ಲಿ ವಾಸಿಸಲು ನೀರು ಇದೆಯೇ? ಎಂದು ಪರಿಶೀಲನೆ ಮಾಡುತ್ತಿದ್ದೇವೆ. ಇಲ್ಲಿ ನಮ್ಮ ಭೂಮಿಯಲ್ಲಿ ಬಿದ್ದ ನೀರನ್ನು ಸಮುದ್ರಕ್ಕೆ ಬಿಡುತ್ತೇವೆ, ನೀರಿಲ್ಲ ಎಂದು ಕೊರಗುತ್ತೇವೆ ಅಲ್ಲವೇ?.
ನಮಗೆ ವರ್ಷವಿಡೀ ಬಿಸಿಲು ಇದೆ. ಅದನ್ನು ಹಿಡಿದಿಡಲು ಸ್ಥಳ ಇದೆ. ಉತ್ಪಾದಿಸಿ ಕೆ.ಇ.ಬಿ.ಗೆ ಕೊಡುವ ವ್ಯವಸ್ಥೆ ಬಂದಿದೆ. ನಾವು ಸೌರ ವಿದ್ಯುತ್ ಉತ್ಪಾದಿಸಿಕೊಂಡರೆ ನಮಗೆ ಪುತ್ತೂರಿನಲ್ಲಿ ವಿದ್ಯುತ್‌ನ ಬರವೇ ಇಲ್ಲದಂತೆ ಮಾಡಬಹುದು. ಪುತ್ತೂರಿನ ಎಲ್ಲಾ ಮನೆಗಳಿಗೆ ನೀರು ಮತ್ತು ವಿದ್ಯುತ್ ಸಿಗುವಂತೆ ಮಾಡಬಹುದು.
ಈ ಮೇಲಿನ ಕಾರಣಕ್ಕೆ ಸುದ್ದಿ ಕೃಷಿ ಸೇವಾ ಕೇಂದ್ರ `ಅರಿವು’ ಎಂಬ ಯೋಜನೆಯಡಿಯಲ್ಲಿ ಪುತ್ತೂರಿನ ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಮಾಧ್ಯಮದ ಸಹಯೋಗದಲ್ಲಿ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪುತ್ತೂರಿನ ಪ್ರತಿಯೊಂದು ಮನೆಗೂ ನೀರು ಮತ್ತು ವಿದ್ಯುತ್ ದೊರಕುವಂತೆ ಮಾಡುವ ಯೋಜನೆಗೆ ಕೈ ಹಾಕಬೇಕೆಂದಿದ್ದೇವೆ. ನೀರು ಮತ್ತು ವಿದ್ಯುತ್ ಇದ್ದರೆ ಕೃಷಿ ಮತ್ತು ಉತ್ಪಾದನೆ ಜಾಸ್ತಿಯಾಗಿ ಎಲ್ಲರ ಅಭಿವೃದ್ದಿ ಖಂಡಿತ ಎಂದು ನಾವು ನಂಬಿದ್ದೇವೆ.
ಅದರ ಅನುಷ್ಠಾನಕ್ಕಾಗಿ ಮಳೆಕೊಯ್ಲು, ಮರುಪೂರಣ ವ್ಯವಸ್ಥೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಮಳೆ ಕೊಯ್ಲುವಿನ ತಜ್ಞರನ್ನು, ಸೋಲಾರ್ ವಿದ್ಯುತ್ ವಿಷಯದಲ್ಲಿ ಕೆಲಸ ಮಾಡಿರುವ ತಜ್ಞರನ್ನು ಪುತ್ತೂರಿಗೆ ಕರೆಸಿ ಮಾಹಿತಿ, ತರಬೇತಿ ನೀಡಿದ್ದೇವೆ ಮತ್ತು ಅದಕ್ಕೆ ಬೇಕಾದ ಮಾಹಿತಿ ಮತ್ತು ಸೌಲಭ್ಯಗಳನ್ನು ಸುದ್ದಿ ಅರಿವು ಕೃಷಿ ಕೇಂದ್ರದ ಮೂಲಕ ಒದಗಿಸಲಿದ್ದೇವೆ ಎಂದು ತಿಳಿಸಲು ಸಂತೋಷ ಪಡುತ್ತೇವೆ.