ನಾಪತ್ತೆಯಾದ ವಾರದ ಬಳಿಕ ಸ್ಕೂಟರ್ ಪತ್ತೆ
ಮೊಬೈಲ್ ಸ್ವಿಚ್‌ಡ್ ಆಫ್
ಬಸ್ಸಲ್ಲಿ ಒಬ್ಬರೇ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಪತ್ತೆ
ಪುತ್ತೂರು:ಉಳ್ಳಾಲ ಠಾಣೆಯಲ್ಲಿ ದಾಖಲಾಗಿರುವ, ಪುತ್ತೂರು ಮೂಲದ ಪಿಎಚ್‌ಡಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಯುವತಿಯ ಪತ್ತೆಗಾಗಿ ವ್ಯಾಪಕ ಹುಡುಕಾಟ ಆರಂಭಿಸಿದ್ದಾರೆ.ಪ್ರಕರಣದ ಪತ್ತೆಗಾಗಿ ಮಂಗಳೂರು ಪೊಲೀಸ್ ಆಯುಕ್ತರು ಪೊಲೀಸರ ತಂಡ ರಚನೆ ಮಾಡಿದ್ದು ಪೊಲೀಸರ ಒಂದು ತಂಡ ಹೊನ್ನಾವರಕ್ಕೆ, ಇನ್ನೊಂದು ತಂಡ ಬೆಂಗಳೂರುಗೆ ತೆರಳಿದೆ.
ಇಲ್ಲಿನ ಮುಕ್ವೆ ದಿ.ಸತೀಶ್ ಹೆಬ್ಬಾರ್ ಅವರ ಪುತ್ರಿ ಚೈತ್ರಾ ಹೆಬ್ಬಾರ್(27ವ.) ನಾಪತ್ತೆಯಾದವರು.ಕೋಟೆಕಾರು ಮಾಡೂರು ಬಳಿಯ ಖಾಸಗಿ ಪಿಜಿಯಲ್ಲಿ ಉಳಿದುಕೊಂಡಿದ್ದ ಚೈತ್ರಾ ಅವರು ಆಹಾರ ಭದ್ರತೆ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದರು.ಫೆ.17ರಂದು ಪಿ.ಜಿಯಿಂದ ಹೊರಗೆ ಹೋಗಿದ್ದ ಅವರು ಕಾಲೇಜಿಗೂ ಹೋಗದೆ, ಮರಳಿ ಪಿ.ಜಿಗೂ ಬಾರದೆ ನಾಪತ್ತೆಯಾಗಿದ್ದರು.ವಿದ್ಯಾರ್ಥಿನಿಯ ಚಿಕ್ಕಪ್ಪ ಪ್ರಕಾಶ್ ಹೆಬ್ಬಾರ್ ಅವರು ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸ್ಕೂಟರ್ ಪತ್ತೆ: ನಾಪತ್ತೆಯಾಗಿರುವ ಚೈತ್ರಾ ಅವರ ಸ್ಕೂಟರ್ ಸುರತ್ಕಲ್ ಕೋಟೆಕಾರ್ ಸಮೀಪ ಹೋಟೇಲೊಂದರ ಬಳಿಯಲ್ಲಿ ಪತ್ತೆಯಾಗಿದೆ.ಆಕೆಯ ಮೊಬೈಲ್ ಫೋನ್ ಹೊಸಬೆಟ್ಟು ಬಳಿ ಕೊನೆಯ ಲೊಕೇಶನ್ ತೋರಿಸುತ್ತಿದ್ದು ಆ ಬಳಿಕ ಸ್ವಿಚ್ ಆಫ್ ಆಗಿದೆ.
ಬಜರಂಗದಳದಿಂದ ಪ್ರತಿಭಟನೆ ಎಚ್ಚರಿಕೆ: ವಿದ್ಯಾರ್ಥಿನಿ ಚೈತ್ರಾ ನಾಪತ್ತೆಯಾಗಿ ವಾರ ಕಳೆದರೂ ಪತ್ತೆಯಾಗಿಲ್ಲ.ಈ ನಡುವೆ ಬಂಟ್ವಾಳ ಮೂಲದ ಅನ್ಯಮತೀಯ ಯುವಕನೋರ್ವ ಆಕೆಯನ್ನು ಅಪಹರಿಸಿರುವ ಅನುಮಾನ ಇದ್ದು,ಆತನನ್ನು ಬಂಧಿಸಬೇಕು ಎಂದು ಬಜರಂಗದಳ ಒತ್ತಾಯಿಸಿದೆ.
ಅನ್ಯಮತೀಯ ಯುವಕನೋರ್ವ ವಿದ್ಯಾರ್ಥಿನಿ ಇದ್ದ ಪಿ.ಜಿಗೆ ಆಗಾಗ ಬಂದು ಹೋಗುತ್ತಿದ್ದು ಈ ವಿಚಾರವನ್ನು ಸ್ಥಳೀಯರು ಬಜರಂಗದಳದ ಗಮನಕ್ಕೆ ತಂದಿದ್ದರು.ಸಂಘಟನೆ ವತಿಯಿಂದ ವಿದ್ಯಾರ್ಥಿನಿಯ ಚಿಕ್ಕಪ್ಪನನ್ನು ಸಂಪರ್ಕಿಸಿ ಈ ಕುರಿತು ಮಾಹಿತಿ ನೀಡಲಾಗಿತ್ತು.ಕರೆದು ಮಾತನಾಡುವುದಾಗಿ ಅವರು ತಿಳಿಸಿದ ಮರುದಿನವೇ ವಿದ್ಯಾರ್ಥಿನಿ ಪಿಜಿಯಿಂದ ನಾಪತ್ತೆಯಾಗಿದ್ದಾರೆ.ಈ ನಿಟ್ಟಿನಲ್ಲಿ ಆಪಾದಿತ ಯುವಕನೇ ಆಕೆಯನ್ನು ಅಪಹರಿಸಿರುವ ಸಾಧ್ಯತೆ ಇರುವುದರಿಂದ ಪೊಲೀಸರು ತನಿಖೆ ನಡೆಸಿ ಆತನನ್ನು ತಕ್ಷಣ ಬಂಧಿಸಬೇಕು.ಮೂರು ದಿನಗಳ ಒಳಗೆ ಆರೋಪಿಯನ್ನು ಬಂಧಿಸದಿದ್ದರೆ ಬಜರಂಗದಳ ಹೋರಾಟ ತೀವ್ರಗೊಳಿಸಲಿದೆ ಎಂದು ಸಂಘಟನೆಯ ಉಳ್ಳಾಲ ಪ್ರಖಂಡ ಸಂಚಾಲಕರು ಎಚ್ಚರಿಕೆ ನೀಡಿರುವುದಾಗಿ ಮತ್ತು ಪೊಲೀಸರಿಗೆ ದೂರು ನೀಡಿ ವಾರ ಕಳೆದರೂ ಚೈತ್ರಾ ಪತ್ತೆಯಾಗಿಲ್ಲ.ಇನ್ನೆರಡು ದಿನಗಳಲ್ಲಿ ಪತ್ತೆಯಾಗದೇ ಇದ್ದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಬಜರಂಗದಳ ಸಂಘಟನೆಯ ಪ್ರಮುಖರು ನೀಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿದೆ.
ತನಿಖೆ ತೀವ್ರ: ಈ ನಡುವೆ ಪೊಲೀಸರು ಪ್ರಕರಣದ ತನಿಖೆ ತೀವ್ರಗೊಳಿಸಿದ್ದಾರೆ.ಚೈತ್ರಾ ಅವರ ಮೊಬೈಲ್ ಫೋನ್ ಸ್ವಿಚ್‌ಡ್ ಆಫ್ ಆಗಿದೆ.ಆಕೆ ವಾಸವಿದ್ದ ಪಿಜಿಗೆ ಬಂದು ಹೋಗುತ್ತಿದ್ದ ಎನ್ನಲಾದ ಅನ್ಯಮತೀಯ ಯುವಕನ ಮೊಬೈಲ್ ಫೋನ್ ಕೂಡಾ ಸ್ವಿಚ್ ಆಫ್ ಆಗಿದೆ.ಮಂಗಳೂರು ಪಡೀಲಲ್ಲಿ ಆತನ ಫೋನ್ ಕೊನೆಯ ಲೊಕೇಶನ್ ತೋರಿಸುತ್ತಿದ್ದು ಆ ಬಳಿಕ ಸ್ವಿಚ್ ಆಫ್ ಆಗಿರುವುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ.ನಾಪತ್ತೆಯಾಗಿರುವ ಯುವತಿ ಒಬ್ಬರೇ ಬಸ್ಸಲ್ಲಿ ಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ಯುವತಿಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಉಳ್ಳಾಲ ಪೊಲೀಸರು ಮಾಹಿತಿ ನೀಡಿದ್ದಾರೆ.