ಪ್ರತಿದಿನವೂ ಬೆಲ್ಲದ ಗಂಜಿ..! – ಇದು ಇರ್ದೆ-ಪಳ್ಳಿತ್ತಡ್ಕ ಉರೂಸ್ ಕಾರ್ಯಕ್ರಮದ ವಿಶೇಷತೆ

0

@ಯೂಸುಫ್ ರೆಂಜಲಾಡಿ

ಪುತ್ತೂರು: ಶಾಂತಿ, ಸೌಹಾರ್ದತೆಯ ಕೇಂದ್ರವೆಂದೇ ಕರೆಯಲ್ಪಡುವ ಎಲ್ಲ ಜಾತಿ, ಧರ್ಮದವರೂ ಗೌರವಿಸಲ್ಪಡುವ ಇತಿಹಾಸ ಪ್ರಸಿದ್ಧ ಇರ್ದೆ-ಪಳ್ಳಿತ್ತಡ್ಕ ದರ್ಗಾ ಶರೀಫ್‌ನಲ್ಲಿ ಫೆ.22ರಂದು ಪ್ರಾರಂಭಗೊಂಡಿರುವ ಉರೂಸ್ ಕಾರ್ಯಕ್ರಮ ಫೆ.28ರಂದು ಕೊನೆಗೊಳ್ಳಲಿದೆ.
ಇದು 48ನೇ ಉರೂಸ್ ಮುಬಾರಕ್ ಆಗಿದ್ದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇಲ್ಲಿನ ದರ್ಗಾ ಇರುವ ಸ್ಥಳ ದಿ.ಆನಾಜೆ ಗಣೇಶ್ ರೈ ಅವರ ಕುಟುಂಬಕ್ಕೆ ಸೇರಿದ್ದಾಗಿದೆ. ಹಾಗಾಗಿ ಇದು ಸೌಹಾರ್ದತೆಯ ಮತ್ತು ಭಾವೈಕ್ಯತೆಯ ಕೇಂದ್ರವೂ ಆಗಿದೆ.
ಕೊರಿಂಗಿಲ ದಿ.ಮದಾರಿ ಕುಂಞಿಯವರ ನೇತೃತ್ವದಲ್ಲಿ ಪುತ್ತೂರು ಮುದರ್ರಿಸ್ ಆಗಿದ್ದ ಸಯ್ಯದ್ ಕೆ.ಪಿ ಮುಹಮ್ಮದ್ ತಂಙಳ್‌ರವರ ಮಾರ್ಗದರ್ಶನದಲ್ಲಿ ಪ್ರಥಮವಾಗಿ ಉರೂಸ್ ನಡೆಸಲಾಗಿದ್ದು ಅಂದಿನಿಂದ ಇಂದಿನ ವರೆಗೆ ಉರೂಸ್ ಸಮಾರಂಭ ಅತ್ಯಂತ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಕೊರಿಂಗಿಲ ಜಮಾಅತ್ ವತಿಯಿಂದ ಪ್ರತೀ ವರ್ಷ ಇಲ್ಲಿ ಉರೂಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಇರ್ದೆ-ಪಳ್ಳಿತ್ತಡ್ಕ ಉರೂಸ್ ಎಂದರೆ ಥಟ್ಟನೆ ನೆನಪಿಗೆ ಬರುವುದು ಅಲ್ಲಿನ ಬೆಲ್ಲದ ಗಂಜಿ. ಉರೂಸ್ ಕಾರ್ಯಕ್ರಮದ ಪ್ರತೀ ದಿನವೂ ಇಲ್ಲಿ ಹಗಲು ಮತ್ತು ರಾತ್ರಿ ಬೆಲ್ಲದ ಗಂಜಿ ವಿತರಿಸಲಾಗುತ್ತದೆ. ಸಾವಿರಾರು ಮಂದಿ ಇಲ್ಲಿನ ಬೆಲ್ಲದ ಗಂಜಿ ಸವಿಯುತ್ತಾರೆ. ಅಂದ ಹಾಗೆ ಇಲ್ಲಿನ ಬೆಲ್ಲದ ಗಂಜಿಗೆ ತನ್ನದೇ ಆದ ಇತಿಹಾಸ ಕೂಡಾ ಇದೆ. ಅನೇಕ ಕೃಷಿಕರು ತಮ್ಮ ಗದ್ದೆಯಲ್ಲಿ ಬೆಳೆದ ಮೊದಲ ಕೊಯ್ಲಿನ ನಿರ್ದಿಷ್ಟ ಅಕ್ಕಿಯನ್ನು ಈ ದರ್ಗಾಗೆ ಬೆಲ್ಲದ ಗಂಜಿಗೆಂದೇ ನೀಡುತ್ತಿದ್ದ ಸಂಪ್ರದಾಯ ಇದೆ. ಹಲವರು ತಮ್ಮ ಕಷ್ಟ, ಕಾರ್ಪಣ್ಯಗಳ ಪರಿಹಾರಕ್ಕೆ ಇಲ್ಲಿಗೆ ಬೆಲ್ಲದ ಗಂಜಿಗೆಂದು ಅಕ್ಕಿ, ಬೆಲ್ಲ, ಸಕ್ಕರೆ ಹರಕೆ ನೀಡುವವರೂ ಇದ್ದಾರೆ. ಮಾತ್ರವಲ್ಲದೇ ಮಕ್ಕಳಾಗದ ದಂಪತಿಗಳು ಇಲ್ಲಿಗೆ ಬೆಲ್ಲದ ಗಂಜಿಗೆಂದು ಅಕ್ಕಿ ಹರಕೆ ಹೊತ್ತು ಬಳಿಕ ಅವರಿಗೆ ಮಕ್ಕಳಾದ ಉದಾಹರಣೆಗಳೂ ಇದೆ ಎಂದು ಅಲ್ಲಿನ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಹಾಗಾಗಿ ಇಲ್ಲಿನ ಬೆಲ್ಲದ ಗಂಜಿಗೆ ತನ್ನದೇ ಆದ ಪ್ರಾಧಾನ್ಯತೆ ಇದೆ. ಮುಸ್ಲಿಮರು ಮಾತ್ರವಲ್ಲ ಇಲ್ಲಿಗೆ ಎಲ್ಲ ಜಾತಿ, ಧರ್ಮದವರೂ ಭೇಟಿ ನೀಡಿ ಬೆಲ್ಲದ ಗಂಜಿ ಸವಿಯುವುದು, ಹರಕೆ ಹೇಳುವುದು ಮತ್ತು ಪ್ರಾರ್ಥನೆ ಸಲ್ಲಿಸಿ ತೆರಳುವುದು ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿದೆ. ದರ್ಗಾಗೆ ಹರಕೆ ಸಲ್ಲಿಸಿ ಕಂಗು-ತೆಂಗು ಇನ್ನಿತರ ಕೃಷಿ ಬೆಳೆಗೆ ಬರುವ ರೋಗಗಳಿಗೆ ಪರಿಹಾರ ಕಂಡುಕೊಂಡ ನಿದರ್ಶನಗಳೂ ಇದೆ ಎನ್ನುತ್ತಾರೆ ಇಲ್ಲಿನ ಹಿರಿಯರು.

ಫೆ.28ರಂದು ನಡೆಯುವ ಉರೂಸ್ ಸಮಾರೋಪ ಸಮಾರಂಭದಲ್ಲಿ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು ಅಂದಿನ ದಿನ ಮತಪ್ರಭಾಷಣದ ಕೊನೆಯಲ್ಲಿ ಅನ್ನದಾನ ಕೂಡಾ ನಡೆಯಲಿದೆ.

LEAVE A REPLY

Please enter your comment!
Please enter your name here