ಕೆಡುಕು ಬಯಸುವವರ ಮನಸ್ಸನ್ನು ಬದಲಾಯಿಸುವ ಕೆಲಸವಾಗಬೇಕು: ಮಾಣಿಲ ಶ್ರೀ
ವಿಟ್ಲ: ಶ್ರೀಧಾಮ ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ರಜತ ಪ್ರತಿಷ್ಠಾ ವರ್ಧಂತ್ಯುತ್ಸವ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರು ಆಶೀರ್ವಚನ ನೀಡಿ ಪ್ರತಿಯೊಬ್ಬರ ಬದುಕಿನಲ್ಲಿ ಆಗಾಗ ಎದುರಾಗುವ ಪರೀಕ್ಷೆಗಳನ್ನು ದಾಟಿ ಮುನ್ನಡೆಯುವುದರಲ್ಲಿ ನಿಜವಾದ ಸಾರ್ಥಕತೆಯಿದೆ. ಕೆಡುಕು ಬಯಸುವವರ ಮನಸ್ಸನ್ನೂ ಸಹ ಪರಿವರ್ತಿಸಿ ಸಾತ್ವಿಕರನ್ನಾಗಿಸುವುದು, ಪ್ರತಿಯೊಬ್ಬರನ್ನೂ ಪ್ರೀತಿಸುವುದರಲ್ಲಿ ಸಂತೃಪ್ತತೆ ಕಾಣಬೇಕು. ಗುರುವಿನ ಬಗ್ಗೆ ಅಚಲ ಭಕ್ತಿ ಮತ್ತು ಗುರಿಯ ಬಗ್ಗೆ ಅಹರ್ನಿಶಿ ಸಾಧನೆಯ ಛಲ ಹೊಂದಿರಬೇಕು. ಸಂಸಾರ, ಸಮಾಜ ಮತ್ತು ದೇಶವನ್ನು ಎಂದೂ ಮರೆಯಬಾರದು ಎಂದರು.
ವೇದಿಕೆಯಲ್ಲಿ ಸದ್ಭಾವ ಸೇವಾ ಟ್ರಸ್ಟ್ ನ ಮಧುಸೂದನ ನಾಯಕ್ ಪುತ್ತೂರು, ಮಂಗಳೂರು ಸತ್ಸಂಗ ಸಮಿತಿ ಯು ವಾಸುದೇವ ಕೊಟ್ಟಾರಿ, ಶ್ರೀ ಮಹಾಲಕ್ಷ್ಮಿ ಸೇವಾ ಟ್ರಸ್ಟಿನ ಟ್ರಸ್ಟಿಗಳಾದ ಭಾಸ್ಕರ್ ಶೆಟ್ಟಿ ಪುಣೆ, ಚಂದ್ರಶೇಖರ ಮೂಲ್ಯ, ಬೆಳ್ಳಿ ಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್, ಶ್ರೀಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿಯ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಹಿರಿಯರಾದ ಜಗನ್ನಾಥ ರೈ ಕೆಳಗಿನ ಮನೆ ಉಪಸ್ಥಿತರಿದ್ದರು. ಟ್ರಸ್ಟಿ ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಗಣಹೋಮ, ಶ್ರೀ ಚಂಡಿಕಾ ಯಾಗ ನಡೆಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.