ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಿಗೆ ಕೃತಜ್ಞತಾ ಸಮಾರಂಭ

0

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ವತಿಯಿಂದ ಸಂಘದ ಸದಸ್ಯ ಬಾಂಧವರಿಗೆ ಕೃತಜ್ಞತಾ ಸಮಾರಂಭವೂ ಫೆ.27ರಂದು ಸಂಜೆ ಸಂಘದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಶಾಸಕರು, ಬಿಜೆಪಿ ಸಹಕಾರಿ ಪ್ರಕೋಷ್ಠ ರಾಜ್ಯ ಸಂಚಾಲಕರಾಗಿರುವ ಸಂಜೀವ ಮಠಂದೂರು ಮಾತನಾಡಿ, ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಸಾಲ ಮನ್ನಾ, ಕಿಸಾನ್ ಸನ್ಮಾನ್ ಯೋಜನೆಗೆ ರೂ.40೦೦ ರಾಜ್ಯದ ಪಾಲು, ರೈತ ವಿದ್ಯಾನಿಧಿ, ಕೃಷಿಗೆ ನಿರಂತರ ವಿದ್ಯುತ್ ಸೇರಿದಂತೆ ಹಲವು ರೈತ ಪರವಾದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರೈತನ ಬದುಕಿಗೆ ಗ್ಯಾರಂಟಿ ನೀಡಿತ್ತು. ಈಗಿನ ಹೊಸ ಸರಕಾರ ರೈತರ ಈ ಎಲ್ಲಾ ಸೌಲಭ್ಯಗಳನ್ನು ಕಸಿದುಕೊಂಡಿದ್ದು ಈಗ ರೈತರಿಗೆ ಗ್ಯಾರಂಟಿಯಿಲ್ಲ. ಜೊತೆಗೆ ನಿರಂತರ ವಿದ್ಯುತ್ ಪೂರೈಕೆಯಿಲ್ಲ. ಬಜೆಟ್‌ನಲ್ಲಿ ಘೋಷಣೆ ಮಾಡಿದ ರೂ.5 ತನಕ ಬಡ್ಡಿ ರಹಿತ ಸಾಲ, ರೂ.15ಲಕ್ಷ ತನಕ ಶೇ.3 ಬಡ್ಡಿದರದ ಸಾಲಗಳು ಅಲ್ಲಿಯೇ ಉಳಿದಿದೆ. ಸರಕಾರ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಈ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಬೇಕು. ಬಜೆಟ್‌ನಲ್ಲಿ ಘೋಷಣೆ ಮಾಡಿದ್ದನ್ನು ಜಾರಿಗೊಳಿಸಬೇಕು. ಸಂಘದಲ್ಲಿ ಸುಮಾರು 260 ಮಂದಿ ರೈತರು ಸಾಲ ಮನ್ನಾದಿಂದ ವಂಚಿತರಾಗಿದ್ದು ಅದನ್ನು ಪಾವತಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ನೂತನ ಆಡಳಿತ ಮಂಡಳಿಯು ರಾಜಕೀಯ ರಹಿತವಾಗಿ, ಜನಪರವಾಗಿ ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನಡೆಸಬೇಕು. ನಿಮ್ಮ ಅವಧಿಯಲ್ಲಿ ಜನರ ನಿರೀಕ್ಷೆಗೆ ಚ್ಯುತಿ ಬಾರಬಾರದು. ಸಹಕಾರಿ ಸಂಘದ ಸವಲತ್ತುಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವಾಗಬೇಕು. ಸದಸ್ಯರ ಅಪೇಕ್ಷೆಯಂತೆ ಕೆಲಸ ಮಾಬೇಕು. ರೋಲ್ ಮಾಡೆಲ್ ಸಹಕಾರಿ ಸಂಘಗಳಲ್ಲಿ ನರಿಮೊಗರು ಸಹಕಾರಿ ಸಂಘವು ಒಂದಾಗಬೇಕು. ಕ್ಯಾಂಪ್ಕೋದ ಕೇಂದ್ರವು ಪ್ರಾರಂಭಿಸುವಂತೆ ಬೇಡಿಕೆ ಬಂದಿದೆ. ಈ ಕುರಿತು ಕ್ಯಾಂಪ್ಕೋ ಅಧ್ಯಕ್ಷರಲ್ಲಿ ಪ್ರಸ್ತಾಪಿಸಲಾಗಿದ್ದು ಅವರೂ ಸಕಾರಾತ್ಮಕವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಎಂದು ಹೇಳಿದರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ತಾಲೂಕಿನಲ್ಲಿ ಹಲವು ಮಾದರಿ ಸಂಘಗಳಿವೆ. ಅವುಗಳ ಬಗ್ಗೆ ಅಧ್ಯಯನ ಮಾಡಿ ನರಿಮೊಗರು ಸಂಘದಲ್ಲಿಯೂ ಅನುಷ್ಠಾನ ಮಾಡಿ ಬದಲಾವಣೆ ಮಾಡಬೇಕು. ಸಂಘದ ಅಭಿವೃದ್ಧಿಯಲ್ಲಿ ರೈತರ ಪಾತ್ರ ಪ್ರಮುಖವಾಗಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು. ಅವರಿಂದ ಮಾರ್ಗದರ್ಶನ ಪಡೆದುಕೊಂಡು ತಾಲೂಕಿನಲ್ಲಿ ಉತ್ತಮ ಸಂಘವಾಗಿ ಮೂಡಿಬರಲಿ. ಅಭಿವೃದ್ಧಿಯಲ್ಲಿ ಇತರ ಸಂಘಗಳಿಗೆ ಪ್ರೇರಣೆಯಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನವೀನ್ ಡಿ ಮಾತನಾಡಿ, ಸಂಘದಲ್ಲಿ ಠೇವಣಿಗೆಗಳಿಗೆ ಹೆಚ್ಚುವರಿ ಶೇ.೦.5 ಹೆಚ್ಚುವರಿ ಬಡ್ಡಿ, ಬಡ್ಡಿ ರಹಿತ ಸಾಲ, ಆರ್.ಡಿ ಖಾತೆ ಆರಂಭ. ಬೆಳೆಸಾಲ ಹೊಂದಿರುವ ರೈತರಿಗೆ ಒಂದು ತಿಂಗಳ ಅವಧಿಯ ಬಡ್ಡಿ ರಹಿತ ಸಾಲ, ಭದ್ರತಾ ದೃಷ್ಟಿಯಿಂದ ಪ್ರಧಾನ ಕಚೇರಿಯ ಎಲ್ಲಾ ವಿಭಾಗಗಳು ಸೇರಿದಂತೆ ಆನಾಜೆ, ಕೈಂದಾಡಿ ಶಾಖೆಗಳಿಗೆ ಸಿಸಿ ಕ್ಯಾಮರಾ ಅಳವಡಿಕೆ, ಸಂಘದ ಸೇವೆಗಳ ಮಾಹಿತಿಯನ್ನು ಟಿವಿ ಪರದೆಯಲ್ಲಿ ಪ್ರದರ್ಶನ, ಶಾಂತಿಗೋಡು ಶಾಖೆಯ ನವೀಕರಣದೊಂದಿಗೆ ಮಾ.1ರಿಂದ ನಗದು ವ್ಯವಹಾರ ಆರಂಭಿಸಲಾಗುವುದು ಎಂದರು. ಬಹಳಷ್ಟು ಭರವಸೆ ಇಟ್ಟುಕೊಂಡು ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಿದ್ದೀರಿ. ನಿಮ್ಮ ಭರವಸೆಗೆ ಲೋಪ ಇಲ್ಲದ ರೀತಿಯಲ್ಲಿ ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡಲಾಗುವುದು. ಚುನಾವಣೆಯಲ್ಲಿ ಸಹಕಾರ ಭಾರತಿಯು ಅಧಿಕಾರಕ್ಕೆ ಬರುವಲ್ಲಿ ಶ್ರಮಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

ನರಿಮೊಗರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನವೀನ್ ರೈ ಶಿಬರ ಪ್ರಾಸ್ತಾವಿಕವಾಗಿ ಮಾತನಾಡಿ, ಹದಿನೈದು ವರ್ಷಗಳ ಬಳಿಕ ನರಿಮೊಗರು ಸಹಕಾರ ಸಂಘದಲ್ಲಿ ಸಹಕಾರ ಭಾರತಿಯು ಅಧಿಕಾರ ಪಡೆದುಕೊಂಡಿದೆ. ಹೊಸ ತಂಡ ರಚಿಸಿ, ಚುನಾವಣೆಯ ಮೂಲಕ ಹೊಸ ತಂಡವನ್ನು ರೈತ ಬಾಂದವರು ಆಯ್ಕೆ ಮಾಡಿದ್ದಾರೆ. ನೂತನ ಆಡಳಿತ ಮಂಡಳಿಯ ಮೂಲಕ ಅಭಿವೃದ್ಧಿಯೇ ಧ್ಯೇಯವಾಗಿ, ನ್ಯಾಯ ಕೊಡುವ ರೀತಿಯಲ್ಲಿ ಮುನ್ನಡೆಯಲಿದೆ. ರಾಜಕೀಯ ನಡೆಸದೆ ರೈತರ ಅಭಿವೃದ್ಧಿಗೆ ಶ್ರಮಿಸಲಿದೆ. ನೀಡಿದ ಭರವಸೆ ಈಡೇರಿಸಲಿದೆ ಎಂದರು.
ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನರಿಮೊಗರು ಗ್ರಾ.ಪಂ ಅಧ್ಯಕ್ಷೆ ಹರಿಣಿ ನಿತ್ಯಾನಂದ, ಉಪಾಧ್ಯಕ್ಷ ಉಮೇಶ್ ಇಂದಿರಾನಗರ, ವೀರಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹರ್ಷ ಗುತ್ತು, ಶಾಂತಿಗೋಡು ಶಕ್ತಿ ಕೇಂದ್ರದ ಅಧ್ಯಕ್ಷ ಶ್ಯಾಮ್ ಭಟ್, ಸಂಘದ ಉಪಾಧ್ಯಕ್ಷೆ ಪವಿತ್ರ ಕೆ.ಪಿ., ನಿರ್ದೇಶಕರಾದ ದೇವಪ್ಪ ಪಜಿರೋಡಿ, ಪ್ರವೀಣ್ ಶೆಟ್ಟಿ, ಚಂದ್ರಕುಮಾರ್ ಮಣಿಯ, ಶಿವಪ್ರಸಾದ್ ನಾಯ್ಕ, ನಮಿತಾ ಸೇರಾಜೆ, ದೇವಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಸಂಘದ ಮಾಜಿ ನಿರ್ದೇಶಕರಾದ ನವೀನ್ ರೈ ಶಿಬರ, ತುಳಸಿ ಕುಸುಮಾಧರ, ನಾರಾಯಣ ಗೌಡ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ್ ಆಚಾರ್ ಹಿಂದಾರ್‌ರವರನ್ನು ಸನ್ಮಾನಿಸಲಾಯಿತು. ಮೂತನ ನಿರ್ದೇಶಕರನ್ನು ಶಾಲು ಹಾಕಿ ಹೂ ಗುಚ್ಚ ನೀಡಿ ಅಭಿನಂದಿಸಲಾಯಿತು. ಸಂಘದ ಚುನಾವಣೆಯಲ್ಲಿ ಸಹಕರಿಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಗೌರವಿಸಲಾಯಿತು.

ತನ್ವಿ ಹಾಗೂ ರಕ್ಷಾ ಪ್ರಾರ್ಥಿಸಿದರು. ನರಿಮೊಗರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನವೀನ್ ರೈ ಶಿಬರ ಸ್ವಾಗತಿಸಿದರು. ನಿರ್ದೇಶಕ ವಿಶ್ವನಾಥ ಬಲ್ಯಾಯ ಮತ್ತು ಆನಂದ ಬಲ್ಯಾಯ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಜಯರಾಮ ಪೂಜಾರಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು.

LEAVE A REPLY

Please enter your comment!
Please enter your name here