ಸೇರಾಜೆ-ಕುದುಮಾನ್ ಕುಟುಂಬಸ್ಥರ ತರವಾಡು ಮನೆ ಗೃಹಪ್ರವೇಶ, ದೈವಗಳ ಪ್ರತಿಷ್ಠೆ, ಕಲಶ

0

ತರವಾಡು ಮನೆ ನಿರ್ಮಾಣವು ಧರ್ಮ ಪರಂಪರೆಯ ಒಂದು ಭಾಗ-ಒಡಿಯೂರು ಶ್ರೀ

ಪುತ್ತೂರು: ತರವಾಡು ಮನೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಪರಸ್ಪರ ಅನ್ಯೋನ್ಯತೆಯಿಂದ ಒಟ್ಟು ಸೇರಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಗಳಾಗುತ್ತಾರೆ. ಹೀಗಾಗಿ ತರವಾಡು ಮನೆ ನಿರ್ಮಾಣವು ಧರ್ಮ ಪರಂಪರೆ ಉಳಿಸಿ, ಬೆಳೆಸುವ ಒಂದು ಭಾಗವಾಗಿದೆ. ಇಂತಹ ತರವಾಡು ಮನೆ ನಿರ್ಮಿಸಿದ ಸೇರಾಜೆ ಕುಟುಂಬದವರು ಅಭಿನಂದನೀಯರು ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಜಿಯವರು ಹೇಳಿದರು.

ನರಿಮೊಗರು ಗ್ರಾಮದ ಸೇರಾಜೆಯಲ್ಲಿರುವ ಪರಿವಾರ ಬಂಟ ಸಮಾಜದ ಕುದುಮಾನ್ ಕುಟುಂಬಸ್ಥರ ತರವಾಡು ಮನೆಯಲ್ಲಿ ತರವಾಡು ಮನೆಯ ದೈವಗಳ ಪ್ರತಿಷ್ಠೆ, ದೈವಗಳಿಗೆ ಕಲಶ, ತರವಾಡು ಮನೆ ಗೃಹಪ್ರವೇಶ ಕಾರ್ಯಕ್ರಮಗಳ ಅಂಗವಾಗಿ ಮಾ.1ರಂದು ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ತರವಾಡು ಮನೆ ಎಂಬುದು ನಮ್ಮ ದೇಹವಿದ್ದಂತೆ. ದೇಹಕ್ಕೆ ಎಲ್ಲಾ ಅಂಗಾಗಗಳು ಸಹಕರಿಸುವಂತೆ ತರವಾಡು ಮನೆಗೆ ಕುಟುಂಬದ ಎಲ್ಲಾ ಶಾಖೆಗಳ ಸದಸ್ಯರೆಲ್ಲರೂ ಒಟ್ಟು ಸೇರಿ ಸಹಕರಿಸಬೇಕು. ಸ್ಥಳದ ಹೆಸರಿನಂತೆ ಕುಟುಂಬದ ಸದಸ್ಯರೆಲ್ಲರೂ ಒಟ್ಟು ಸೇರುವ ಜಾಗವೇ ಸೇರಾಜೆಯಾಗಿ ಬಂದಿರಬಹುದು. ಧರ್ಮ, ಆಚರಣೆ, ಸಂಸ್ಕಾರಗಳನ್ನು ಮಕ್ಕಳಿಗೆ ತಿಳಿಸುವ ಕಾರ್ಯವು ತರವಾಡು ಮನೆಯ ಮೂಲಕ ನಡೆಯಬೇಕು. ಆಂಗ್ಲ ಭಾಷೆಯ ವ್ಯಾಮೋಹದಿಂದ ಹೊರಬಂದು ಸನಾತನ ಧರ್ಮವನ್ನು ಉಳಿಸುವ ಕಾರ್ಯವಾಗಬೇಕು.


ಪ್ರತಿಷ್ಠೆ, ಕಲಶ, ಗೃಹಪ್ರವೇಶ:
ವೇ.ಮೂ ಬ್ರಹ್ಮಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ ತಂತ್ರಿಗಳ ನೇತೃತ್ವದಲ್ಲಿ, ವೇ.ಮೂ ನಾರಾಯಣ ಐತಾಳ್‌ರವರ ಸಹಭಾಗಿತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಫೆ.28ರಂದು ಸಂಜೆ ನಾಗಬನದಲ್ಲಿ ಪ್ರಾರ್ಥನೆ, ಸ್ಥಳಶುದ್ಧಿ, ವಾಸ್ತು ರಕ್ಷೆಘ್ನ, ವಾಸ್ತು ಬಲಿ, ದಿಕ್ಪಾಲ ಬಲಿ, ಬಿಂಬಾದಿವಾಸ ರಕ್ಷೆ ನಡೆಯಿತು. ಫೆ.29ರಂದು ಬೆಳಿಗ್ಗೆ ಗಣಹೋಮ, ಪ್ರತಿಷ್ಠಾ ಹೋಮ, ಕಲಶಪೂಜೆ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಸೇವೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ರಾತ್ರಿ ತರವಾಡು ಮನೆ ಹಾಗೂ ದೈವಸ್ಥಾನದಲ್ಲಿ ಪ್ರಾರ್ಥನೆ, ಸ್ಥಳಶುದ್ಧಿ, ವಾಸ್ತು ರಕ್ಷೆಘ್ನ, ವಾಸ್ತು ಬಲಿ, ದಿಕ್ಪಾಲ ಬಲಿ, ಬಿಂಬಾದಿವಾಸ ರಕ್ಷೆ ನಡೆಯಿತು.

ಮಾ.1ರಂದು ಬೆಳಿಗ್ಗೆ ಗಣಹೋಮ, ಕಲಶಪೂಜೆ, ಮುಡಿಪು ಪೂಜೆ, ದೈವಗಳ ಪ್ರತಿಷ್ಠೆ, ತರವಾಡು ಮನೆ ಗೃಹಪ್ರವೇಶ, ಸತ್ಯನಾರಾಯಣಪೂಜೆ, ನಂತರ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here