ಪುತ್ತೂರು: ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಿಂದ ವಂಚಿತರಾಗಿರುವ ಅರ್ಹ ಫಲಾನುಭವಿಗಳಿಗೆ ತಕ್ಷಣವೇ ಎಲ್ಲಾ ಕಂತುಗಳನ್ನು ಪಾವತಿ ಮಾಡುವಂತೆ ಪುತ್ತೂರು ಶಾಸಕ ಅಶೋಕ್ ರೈಯವರು ಅಧಿಕಾರಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಹಾಕಿ ಅನೇಕ ಸಾರಿ ಸಿಡಿಪಿಒ ಕಚೇರಿ, ಶಾಸಕರ ಕಚೇರಿಗೆ ಬಂದರೂ ಇದುವರೆಗೂ ಯಾವುದೇ ಕಂತು ಪಾವತಿಯಾಗಿಲ್ಲ. ಕಳೆದ ಐದಾರು ತಿಂಗಳಿಂದ ಬಾಕಿ ಇರುವ ಫಲಾನುಭವಿಗಳ ವಿವರಣೆಯಲ್ಲಿ “ಪ್ರೊಸೆಸ್ಸಿಂಗ್ ”ಎಂದು ತೋರಿಸುತ್ತಿದೆ. ಹಣ ಯಾಕೆ ಬಂದಿಲ್ಲ ಎಂದು ಕೇಳಿದರೆ ಸಮರ್ಪಕ ಉತ್ತರ ಯಾರಿಂದಲೂ ದೊರೆಯುತ್ತಿರಲಿಲ್ಲ. ಈ ಬಗ್ಗೆ ಫಲಾನುಭವಿಗಳು ಶನಿವಾರ ಸಂಜೆ ಶಾಸಕರನ್ನು ಭೇಟಿಯಾಗಿ ತಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಯಾಗಿಲ್ಲ. ನಾವು ಬಡವರು ನಮ್ಮ ಖಾತೆಗೆ ಇದುವರೆಗೂ ಒಂದು ರೂಪಾಯಿ ಬಂದಿಲ್ಲ ಯಾರಲ್ಲಿ ಹೇಳುವುದು ಸಾರ್ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಹೆದರಬೇಡಿ ಹಣ ಬಂದೇ ಬರ್‍ತದೆ….
ತಮ್ಮ ಬಳಿ ಅಳಲು ತೋಡಿಕೊಂಡ ಗೃಹಲಕ್ಷ್ಮಿ ಫಲನುಭವಿಗಳಿಗೆ ಭರವಸೆ ನೀಡಿದ ಶಾಸಕರು ಕೂಡಲೇ ಅಧಿಕಾರಿಗೆ ಕರೆ ಮಾಡಿ ಯಾರಿಗೆಲ್ಲಾ ಕಂತು ಇದುವರೆಗೂ ಪಾವತಿಯಾಗಿಲ್ಲವೋ, ಅಥವಾ ಒಂದೆರಡು ಕಂತು ಪಾವತಿಯಾಗಿ ಆ ಬಳಿಕ ಹಣ ಬಂದಿಲ್ಲವೋ ಅಂಥಹ ಎಲ್ಲಾ ಫಲಾನುಭವಿಗಳಿಗೆ ತಕ್ಷಣ ಹಣ ಪಾವತಿ ವ್ಯವಸ್ಥೆ ಮಾಡಬೇಕು. ಫಲಾನುಭವಿಗಳು ಕಚೇರಿ ಸುತ್ತಾಡಿ ನನ್ನ ಬಳಿ ಬಂದಿದ್ದಾರೆ. ಹತ್ತು ದಿನದೊಳಗೆ ಎಲ್ಲರಿಗೂ ವ್ಯವಸ್ಥೆ ಆಗಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ. ಇದರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿ ಇದುವರೆಗೂ ಕಂತು ಪಾವತಿಯಾಗದ ಫಲಾನುಭವಿಗಳಿಗೆ ಧೈರ್ಯ ತುಂಬುವ ಕೆಲಸವನ್ನು ಶಾಸಕರು ಮಾಡಿದ್ದಾರೆ. ಯಾರಿಗೆಲ್ಲಾ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲವೋ ಅವರು ಶಾಸಕರ ಕಚೇರಿಯನ್ನು ಸಂಪರ್ಕಿಸಿ ದಾಖಲೆ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
https://youtu.be/-uA8m2_2Wy4