ಚಾಲಕನ ಅಜಾಗರೂಕತೆ: ಹಿಮ್ಮುಖವಾಗಿ ಚಲಿಸಿದ ಬಸ್ – ಎರಡು ಅಂಗಡಿಗಳು ಜಖಂ- ಹಲವು ವಾಹನಗಳಿಗೆ ಹಾನಿ – ಅದೃಷ್ಟವಶಾತ್ ಪಾರಾದ ಸಾರ್ವಜನಿಕರು

0

ಉಪ್ಪಿನಂಗಡಿ: ಖಾಸಗಿ ಬಸ್ಸೊಂದನ್ನು ಅಜಾಗರೂಕತೆಯಿಂದ ಚಾಲಕ ಹಿಮ್ಮಖವಾಗಿ ಚಲಿಸಿದ್ದರಿಂದ ಎರಡು ಅಂಗಡಿಗಳು ಜಖಂಗೊಂಡು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರು ಸೇರಿದಂತೆ ಹಲವು ದ್ವಿಚಕ್ರ ವಾಹನಗಳಿಗೆ ಹಾನಿಯಾದ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಮಾ.2ರಂದು ಸಂಜೆ ನಡೆದಿದೆ.

ಕೆಎ.21.ಬಿ.4724 ನೋಂದಣಿ ಸಂಖ್ಯೆಯ ಖಾಸಗಿ ಬಸ್ಸನ್ನು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಅದರ ಚಾಲಕ ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಾಯಿಸಿದ್ದು, ಅದು ವಾಹನಗಳ ಪಾರ್ಕಿಂಗ್ ಪ್ರದೇಶವನ್ನು ದಾಟಿ ಉಪ್ಪಿನಂಗಡಿ ಗ್ರಾ.ಪಂ. ಅಧೀನದ ವಾಣಿಜ್ಯ ಕಟ್ಟಡಕ್ಕೆ ನುಗ್ಗಿದೆ. ಇದರಿಂದ ನಾಗರಾಜ್ ಭಟ್ ಎಂಬವರ ಸಿಹಿತಿಂಡಿ ಮತ್ತು ತಂಪು ಪಾನೀಯ ಮಾರಾಟದ ಅಂಗಡಿಗೆ ಹಾಗೂ ಅನಿಲ್ ಕುಮಾರ್ ಅವರ ಸಿಹಿತಿಂಡಿ ಮತ್ತು ತಂಪು ಪಾನೀಯ ಮಾರಾಟದ ಅಂಗಡಿಗೆ ನುಗ್ಗಿದೆ. ಇದರಿಂದ ಎರಡೂ ಅಂಗಡಿಗಳ ಮುಂಭಾಗ, ಮೇಲ್ಚಾವಣಿಗೆ ಹಾನಿಯಾಗಿದೆ. ಕಬ್ಬು ಅರೆಯುವ ಯಂತ್ರ ಸೇರಿದಂತೆ ಅಂಗಡಿ ಕಪಾಟುಗಳಿಗೂ ಹಾನಿಯಾಗಿದೆ. ಎರಡು ಅಂಗಡಿಗಳು ಸೇರಿ ಸುಮಾರು 60 ಸಾವಿರದಷ್ಟು ನಷ್ಟ ಸಂಭವಿಸಿದೆ.

ವಾಹನಗಳಿಗೆ ಹಾನಿ: ಈ ಖಾಸಗಿ ಬಸ್ ಇಲ್ಲಿರುವ ವಾಹನಗಳ ಪಾರ್ಕಿಂಗ್ ಪ್ರದೇಶವನ್ನು ದಾಟಿ ಬಂದಿದ್ದು, ಬಸ್‌ನಡಿಗೆ ಸಿಲುಕಿ ಕೆಎ.21ವೈ5104 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನ ಸೇರಿದಂತೆ ಮೂರ್‍ನಾಲ್ಕು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಅಲ್ಲದೇ, ಕೆಎ.19 ಎಂಇ 4127 ನೋಂದಣಿ ಸಂಖ್ಯೆಯ ಕಾರಿಗೂ ಹಾನಿಯಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಅಪಾಯದಿಂದ ಪಾರು: ಬಸ್ ನಿಲ್ದಾಣದ ಈ ಪ್ರದೇಶ ನಿತ್ಯ ಜನಜಂಗುಳಿಯಿಂದ ಕೂಡಿರುತ್ತಿದ್ದು, ಅಂಗಡಿಗಳಲ್ಲಿ ಕೂಡಾ ಜನರು ಇರುತ್ತಿದ್ದರು. ಆದರೆ ಈ ದುರ್ಘಟನೆಯ ಸಂದರ್ಭ ಅಲ್ಲಿ ಬೆರಳೆಣಿಕೆ ಜನರಷ್ಟೇ ಇದ್ದು, ಅವರು ಅಲ್ಲಿಂದ ಓಡಿ ಪಾರಾಗಿದ್ದಾರೆ. ಅದೃಷ್ಟವಶಾತ್ ಅಂಗಡಿಯವರು ಅಪಾಯದಿಂದ ಪಾರಾಗಿದ್ದಾರೆ.

ಆರ್‌ಟಿಓಗೆ ಸರೆಂಡರ್ ಆದ ವಾಹನವೇ?
ಅಪಘಾತವಾದ ಸಂದರ್ಭ ಕೇಂದ್ರ ಸರಕಾರದ ಪರಿವಾಹನ್ ಸೇವಾ ಆಪ್‌ನಲ್ಲಿ ಅಪಘಾತಕ್ಕೀಡಾದ ಈ ಖಾಸಗಿ ಬಸ್‌ನ ನೋಂದಣಿ ಸಂಖ್ಯೆಯನ್ನು ಹಾಕಿ ನೋಡಿದಾಗ ಅದರ ವೆಹಿಕಲ್ ಸ್ಟೇಟಸ್‌ನಲ್ಲಿ ಆರ್‌ಸಿ ಸರೆಂಡರ್ ಎಂದು ತೋರಿಸುತ್ತಿದ್ದು, ಪಿಟ್ನೆಸ್‌ನ ಮಾನ್ಯತೆ 2023ರ ಆಗಸ್ಟ್ 24ರಂದು ಮುಗಿದಿರುವುದು ಹಾಗೂ ಟ್ಯಾಕ್ಸ್‌ನ ಮಾನ್ಯತೆ 2022ರ ನವೆಂಬರ್ 30ಕ್ಕೆ ಮುಗಿದಿರುವುದು ತೋರಿಸುತ್ತಿದೆ. ಇದು ನಿಜಾವೇ ಆಗಿದ್ದರೆ, ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ. ಕೆಲವೊಮ್ಮೆ ಆಪ್‌ಗಳಲ್ಲಿ ಸಕಾಲಕ್ಕೆ ಮಾಹಿತಿಗಳು ಅಪ್‌ಡೇಟ್ ಆಗದಿದ್ದಲ್ಲಿಯೂ ಹೀಗೆ ತೋರಿಸುತ್ತದೆ. ಇದರ ಸತ್ಯಾಸತ್ಯತೆ ಸಾರಿಗೆ ಇಲಾಖೆಯ ಅಧಿಕಾರಿಗಳೇ ಬಯಲು ಮಾಡಬೇಕಿದೆ.

LEAVE A REPLY

Please enter your comment!
Please enter your name here