ಕೊಯಿಲ: ಮಲೆನಾಡು ಗಿಡ್ಡ ತಳಿಯ ಹೆಣ್ಣು ಕರುಗಳ ವಿತರಣೆ

0

ರಾಮಕುಂಜ: ದಕ್ಷಿಣ ಕನ್ನಡ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ, ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕಡಬ ಪಶು ಆಸ್ಪತ್ರೆ ಆಶ್ರಯದಲ್ಲಿ ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ವಠಾರದಲ್ಲಿ 2023-24ನೇ ಸಾಲಿನ ಅಮೃತ ಸಿರಿ ಯೋಜನೆಯಡಿಯಲ್ಲಿನ ಫಲಾನುಭವಿಗಳಿಗೆ ಮಲೆನಾಡು ಗಿಡ್ಡ ತಳಿಯ ಹೆಣ್ಣು ಕರುಗಳ ವಿತರಣೆ ಮಾ.5ರಂದು ನಡೆಯಿತು.
ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರಕಾರ ಜಾರಿಗೊಳಿಸುವ ಯೋಜನೆಗಳನ್ನು ಪಡೆಯುವ ಫಲಾನುಭವಿಗಳು ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡಾಗ ಯೋಜನೆಯ ಮಹತ್ವ ಸಾಕಾರಗೊಳ್ಳುತ್ತದೆ. ಅಮೃತಸಿರಿ ಯೋಜನೆಯಲ್ಲಿ ಫಲಾನುಭವಿಗಳು ಪಡೆದ ಗೋವುಗಳನ್ನು ಉತ್ತಮ ರೀತಿಯಲ್ಲಿ ಸಾಕಾಣಿಕೆ ಮಾಡಿ ಪ್ರಯೋಜನ ಪಡೆದುಕೊಳ್ಳಬೇಕು. ಗೋವುಗಳಲ್ಲಿ ದೇಶಿ ತಳಿಗಳು ಅಪರೂಪವಾಗುತ್ತಿರುವ ಕಾಲಘಟ್ಟದಲ್ಲಿ ಮಲೆನಾಡು ಗಿಡ್ಡ ತಳಿಗಳನ್ನು ಬೆಳೆಸುವ ಕಾರ್ಯ ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಪಶುಪಾಲನೆ ಇಲಾಖಾ ಕಡಬ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ.ಅಜಿತ್ ಎಂ.ಸಿ. ಅವರು ಯೋಜನೆಯ ಮಾಹಿತಿ ನೀಡಿದರು. ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾ ಸುಭಾಷ್, ಕಡಬ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಯಂತಿ ಆರ್ ಗೌಡ ಉಪಸ್ಥಿತರಿದ್ದರು. ಶಾಸಕಿ ಭಾಗಿರಥಿ ಮುರುಳ್ಯ ಅವರನ್ನು ಇಲಾಖಾ ವತಿಯಿಂದ ಸನ್ಮಾನಿಸಲಾಯಿತು. ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್ ಪ್ರಸ್ತಾವನೆಗೈದರು. ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಪುನಿತ್ ಸ್ವಾಗತಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here