ಪುತ್ತೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ.1ರಿಂದ ರಾಜ್ಯಾದ್ಯಂತ ಕಪ್ಪು ಪಟ್ಟಿ ಧರಿಸಿ ಗ್ರಾಮ ಪಂಚಾಯತ್ ನೌಕರರು ನಡೆಸುತ್ತಿರುವ ಪ್ರತಿಭಟನೆಗೆ ತಾರ್ಕಿಕ ಅಂತ್ಯ ದೊರಕುವ ಸಾಧ್ಯತೆ ಗೋಚರಿಸುತ್ತಿದೆ. ಪಂಚಾಯತ್ ನೌಕರರ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ತೆರೆ ಬೀಳುವ ಸಾಧ್ಯತೆಗಳಿದೆ.
ವಿಧಾನಸಭಾಧ್ಯಕ್ಷರ ಭರವಸೆ:
ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ಗ್ರಾಮ ಪಂಚಾಯತ್ ನೌಕರರ ಮತ್ತು ಸಿಬ್ಬಂದಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ.1ರಿಂದ ಪ್ರತಿಭಟನೆ ನಡೆಯುತ್ತಿದೆ. ಹಲವಾರು ವರ್ಷಗಳಿಂದ ಇಲಾಖೆಯ ಮುಂದೆ ನೌಕರರ ಸಂಘಟನೆಯ ಮೂಲಕ ಬೇಡಿಕೆಗಳನ್ನು ಮಂಡಿಸುತ್ತಾ ಬರಲಾಗಿದೆ. ಆದರೆ ಪಂಚಾಯತ್‌ರಾಜ್ ವ್ಯವಸ್ಥೆ ಬರುವ ಪೂರ್ವದಿಂದಲೂ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ್ ನೌಕರರ ಬೇಡಿಕೆ ಈಡೇರಿಲ್ಲ. ಮೂಲ ಬೇಡಿಕೆಗಳಾದ ಕನಿಷ್ಠ ವೇತನ ಬದಲು ಸಿ ಮತ್ತು ಡಿ ದರ್ಜೆಯ ವೇತನ ಶ್ರೇಣಿ, ಆರೋಗ್ಯ ಭದ್ರತೆ, ಅನುಮೋದನೆ ಆಗದೇ ಇರುವ ಬಿಲ್ ಕಲೆಕ್ಟರ್, ಕ್ಲರ್ಕ್ ಕಮ್ ಡಿಇಓ, ವಾಟರ್‌ಮ್ಯಾನ್, ಶುಚಿತ್ವ ನೌಕರ, ಅಟೆಂಡರ್ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಸೇವಾ ಭದ್ರತೆ, ಡಾಟ ಎಂಟ್ರೀ ಅಪರೇಟರ್‌ಗಳ ಅನುಮೋದನೆ ಸಮಸ್ಯೆ, ಸಕಾಲದಲ್ಲಿ ಮುಂಬಡ್ತಿ, ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆಗಳನ್ನು ಈಡೇರಿಸದೇ ನೌಕರರನ್ನು ಹಗಲಿರುಳು ದುಡಿಸಿಕೊಳ್ಳುತ್ತಿರುವುದು, ಪಂಚಾಯತ್ ನೌಕರರು ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಅತ್ಯಂತ ಶೋಷಣೆಗೊಳಗಾಗಿ ಆರೋಗ್ಯ ಭದ್ರತೆ ಇಲ್ಲದೆ ಒತ್ತಡದಿಂದ ಕಾರ್ಯ ನಿರ್ವಹಿಸುತ್ತಿದ್ದರೂ ಇಲಾಖೆ ಸ್ಪಂದಿಸುತ್ತಿಲ್ಲ. ಇಲಾಖೆಯು ಹೊಸ ಹೊಸ ಆಲೋಚನೆಗಳೊಂದಿಗೆ ಯಾವುದೇ ನೂತನ ಯೋಜನೆಯ ಕಾರ್ಯ ಒತ್ತಡವನ್ನು ನೀಡಿದರೂ ಪಂಚಾಯತ್ ನೌಕರರು ಸಮರ್ಥವಾಗಿ ಅನುಷ್ಠಾನ ಮಾಡುತ್ತಿದ್ದಾರೆ. ಆದರೆ ಯಾವುದೇ ರೀತಿಯ ಸವಲತ್ತುಗಳಿಲ್ಲದೆ ಪಂಚಾಯತ್ ನೌಕರರು ತಮ್ಮ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಅಸಮರ್ಥರಾಗುತ್ತಿದ್ದಾರೆ. ಇದಕ್ಕೆ ಪಂಚಾಯತ್ ನೌಕರರ ಕುರಿತು ಇಲಾಖೆಗೆ ಇರುವ ಅಸಡ್ಡೆ ಜೊತೆಗೆ ಮಲತಾಯಿ ಧೋರಣೆಯೇ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪಂಚಾಯತ್ ನೌಕರರು ರಾಜ್ಯ ಮಟ್ಟದಲ್ಲಿ ಮಾರ್ಚ್ 1ರಿಂದ ಸಾರ್ವಜನಿಕ ಸೇವೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಚೇರಿಯಲ್ಲಿ ಸಾರ್ವಜನಿಕವಾಗಿ ಕಪ್ಪು ಪಟ್ಟಿ ಧರಿಸಿ ಇಲಾಖೆಯಿಂದ ಬೇಡಿಕೆ ಈಡೇರಿಸುವವರೆಗೂ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಮಧ್ಯೆ ನೌಕರರು ಪ್ರತಿಭಟನೆಯ ನಡುವೆ ಮಂಗಳೂರಿನಲ್ಲಿ ನಡೆದ ಹೊಂಬೆಳಕು-2024 ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಧರಿಸಿ ಭಾಗವಹಿಸಿದ ಸಂದರ್ಭದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ನೌಕರರ ನಿಯೋಗದೊಂದಿಗೆ ಮಾತನಾಡಿ ಗ್ರಾಮ ಪಂಚಾಯತ್ ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಿ ನೌಕರರ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಹಾಕುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಚಾಯತ್ ನೌಕರರ ಪ್ರತಿಭಟನೆಗೆ ತೆರೆ ಬೀಳುವ ಸಾಧ್ಯತೆಗಳಿದೆ.